ಕಾರವಾರ/ಬೆಳಗಾವಿ: ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ಭಾನುವಾರ ಆಗಾಗ ಬಿರುಸಿನ ಮಳೆ ಸುರಿದಿದೆ. ಹೊನ್ನಾವರ ತಾಲ್ಲೂಕಿನಲ್ಲಿ 12 ಸೆಂ.ಮೀ ಮಳೆ ಬಿದ್ದಿದೆ.
ಜೊಯಿಡಾ ತಾಲ್ಲೂಕಿನ ಸೂಪಾ ಜಲಾಶಯಕ್ಕೆ ನೀರಿನ ಹರಿವಿನ ಪ್ರಮಾಣ 25 ಸಾವಿರ ಕ್ಯುಸೆಕ್ ತಲುಪಿದ್ದು, 147.55 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ 126.66 ಟಿಎಂಸಿ ಅಡಿ ನೀರು ಸಂಗ್ರಹಣೆಯಾಗಿದೆ. ‘ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನೀರು ಹೊರಬಿಡುವ ಸಾಧ್ಯತೆ ಇದೆ’ ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಒಳಹರಿವು ಹೆಚ್ಚಳ: ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರವೂ ಮಳೆ ಮುಂದುವರಿ
ದಿದೆ. ಮಲಪ್ರಭಾ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು, ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಮತ್ತು ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಿದೆ.
ನವಿಲುತೀರ್ಥ ಅಣೆಕಟ್ಟಿಯಲ್ಲಿ 35.25 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಹಿಡಕಲ್ ಜಲಾಶಯದಲ್ಲಿ 50.39 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಶನಿವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬೆಳಗಾವಿ ತಾಲ್ಲೂಕಿನ ದೇಸೂರಿನಲ್ಲಿ ಮನೆಯೊಂದು ಕುಸಿದಿದೆ.
ಮೂಡಲಗಿ ತಾಲ್ಲೂಕಿನ ಸುಣಧೋಳಿ ಮತ್ತು ಅವರಾದಿ ಬ್ರಿಡ್ಜ್ ಕಂ ಬ್ಯಾರೆಜ್‌ಗಳು ಜಲಾವೃತಗೊಂಡಿವೆ. ಹಲವಾರು ಗ್ರಾಮಗಳ ಸಂಚಾರ ಕಡಿತಗೊಂಡಿದೆ.
ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ) ವರದಿ: ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನಂದಗಾಂವ-ಅವರಾದಿ ಸೇತುವೆ ಜಲಾವೃತವಾಗಿವೆ. ಕೆಲ ಗ್ರಾಮಗಳ ಸಂಪರ್ಕ ಕಡಿತವಾಗಿದೆ.