ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆ ಗುರುವಾರವೂ ಮುಂದುವರಿದಿದ್ದು, ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ.
ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಉಡುಪಿ ಜಿಲ್ಲೆಯ ಬನ್ನಂಜೆ, ಮಠದಬೆಟ್ಟು, ಮೂಡನಿಡಂಬೂರು, ಗುಂಡಿಬೈಲು, ಕಲ್ಸಂಕ, ಉದ್ಯಾವರ, ತೆಂಕಪೇಟೆ, ಬೈಲೂರು, ಕಿದಿಯೂರು, ಅಂಬಲಪಾಡಿ, ಕಿದಿಯೂರು, ಕೆಮ್ತೂರು, ಕೊಂಡಕೂರಿನಲ್ಲಿ ನೂರಾರು ಮನೆಗಳಿಗೆ ಮಳೆಯ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಬೆಳಗಿನ ಜಾವ ರಕ್ಷಣಾ ಕಾರ್ಯಾಚರಣೆಗಿಳಿದ ಮಲ್ಪೆ ಹಾಗೂ ಉಡುಪಿ ಅಗ್ನಿಶಾಮಕ ದಳದ 30ಕ್ಕೂ ಹೆಚ್ಚು ಸಿಬ್ಬಂದಿ ಮೂರು ಬೋಟ್‌ಗಳನ್ನು ಬಳಸಿ, ನೆರೆಯಲ್ಲಿ ಸಿಲುಕಿದ್ದ 200ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.
ಉಡುಪಿ ತಾಲ್ಲೂಕಿನಲ್ಲಿ 115ಕ್ಕೂ ಹೆಚ್ಚು ಮಂದಿ ಹಾಗೂ ಕಾಪು ತಾಲ್ಲೂಕಿನ ಪಾಂಗಳ, ಉಳಿಯಾರಗೋಳಿ, ಮಲ್ಲಾರು, ಎಲ್ಲೂರು, ನಂದಿಕೂರು, ಪಾದೆಬೆಟ್ಟು, ಮಟ್ಟು, ತೆಂಕ, ಮಜೂರಿನಲ್ಲಿ 154 ಸಂತ್ರಸ್ತರನ್ನು ರಕ್ಷಿಸಲಾಯಿತು. ಸಂತ್ರಸ್ತರಿಗೆ ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಕಾಪು ತಾಲ್ಲೂಕಿನಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಾದ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಶ್ರೀಭಗವತಿ ದೇವಸ್ಥಾನ, ಶಿಮಂತೂರು ಶ್ರೀಆದಿ ಜನಾರ್ದನ ದೇವಸ್ಥಾನಗಳು ಜಲಾವೃತಗೊಂಡಿವೆ.
ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದ ಸ್ನಾನ ಘಟ್ಟ ಭಾಗಶಃ ಮುಳುಗಡೆಯಾಗಿದೆ. ಭಕ್ತರು ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ಪುತ್ತೂರು ತಾಲ್ಲೂಕಿನ ಇರ್ದೆ ಗ್ರಾಮದ ಚೆಲ್ಯಡ್ಕದಲ್ಲಿರುವ ಪರ್ಲಡ್ಕ- ಕುಂಜೂರುಪಂಜ- ಪಾಣಾಜೆ ರಸ್ತೆಯ ಸೇತುವೆ ಮುಳುಗಡೆಯಾಗಿತ್ತು. ಸುಳ್ಯ ತಾಲ್ಲೂಕಿನ ಬಾಳುಗೋಡು ಗ್ರಾಮದ ಪದಕದಲ್ಲಿ ಸೇತುವೆ ಮುಳುಗಡೆಯಾಗಿ ವಾಹನಗಳ ಸಂಚಾರಕ್ಕೆ ಕೆಲ ಹೊತ್ತು ತೊಂದರೆ ಉಂಟಾಗಿತ್ತು. ವಿಟ್ಲ- ಮಂಗಳೂರು ರಸ್ತೆಯ ವೀರಕಂಭ ಶಾಲೆ ಸಮೀಪ ಗುಡ್ಡ ರಸ್ತೆಗೆ ಕುಸಿದಿದೆ.
ಇದೇ 9ರ ವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ (ಜುಲೈ 7 ) ಆರೆಂಜ್ ಅಲರ್ಟ್, ಶನಿವಾರ ಮತ್ತು ಭಾನುವಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಮಧುವಾಹಿನಿ ನದಿ ಉಕ್ಕಿ ಹರಿದು ಮಧೂರು ಶ್ರೀಮದನಂತೇಶ್ವರ ವಿನಾಯಕ ದೇವಾಲಯ ಜಲಾವೃತವಾಗಿದೆ. ಹೊಸಂಗಡಿಯ ರಾಷ್ಟ್ರೀಯ ಹೆದ್ದಾರಿ ನವೀಕರಣ ಕಾಮಗಾರಿ ನಡೆಯುತ್ತಿರುವ ಕೆಲವು ಪ್ರದೇಶಗಳಲ್ಲಿ ಜಲಾವೃತವಾಗಿವೆ. ಬಂದ್ಯೋಡು ಬಳಿಯ ಜೋಡುಕಲ್ಲು-ಮಡಂತೂರು-ದೇರ್ಬಳ ರಸ್ತೆ ಕುಸಿದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ನದಿಗಳು ಭರ್ತಿಯಾಗಿ ಹರಿಯುತ್ತಿವೆ. ಹಲವೆಡೆ ಸಣ್ಣ ಸಣ್ಣ ಭೂಕುಸಿತ ಉಂಟಾಗಿದ್ದು, 50ಕ್ಕೂ ಹೆಚ್ಚು ಅಡಿಕೆ ಮರಗಳು ಮುರಿದು ಬಿದ್ದಿವೆ.
ಶಾಲೆ–ಕಾಲೇಜಿಗೆ ರಜೆ
ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ–ಕಾಲೇಜುಗಳಿಗೆ, ಉಡುಪಿ ಜಿಲ್ಲೆಯ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಕಳಸ ಮತ್ತು ಚಿಕ್ಕಮಗಳೂರು ತಾಲ್ಲೂಕಿನ 5 ಹೋಬಳಿಗಳ ಶಾಲೆ ಮತ್ತು ಅಂಗನವಾಡಿಗಳಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ತಾಲ್ಲೂಕುಗಳ ಶಾಲಾ–ಕಾಲೇಜುಗಳಿಗೆ 7ರಂದು ರಜೆ ಘೋಷಿಸಲಾಗಿದೆ.
ಜಲಾಶಯಗಳಿಗೆ ಒಳಹರಿವು ಹೆಚ್ಚಳ
ಶಿವಮೊಗ್ಗ ಜಿಲ್ಲೆಯಲ್ಲಿ ಆರಿದ್ರಾ ಮಳೆ ಮತ್ತೆ ಬಿರುಸು ಪಡೆದಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಲಕ್ಕವಳ್ಳಿಯ ಭದ್ರಾ ಜಲಾಶಯದ ನೀರಿನ ಮಟ್ಟ 138 ಅಡಿಗೆ ಏರಿದ್ದು, ಒಳಹರಿವು 6,479 ಕ್ಯುಸೆಕ್‌ಗೆ ಏರಿಕೆಯಾಗಿದೆ. ಲಿಂಗನಮಕ್ಕಿಯಲ್ಲಿ ಗುರುವಾರ 15,466 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಸದ್ಯ 1,698 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಚಾರಣಕ್ಕೆ ನಿಷೇಧ
ಭಾರಿ ಮಳೆಯಾಗುತ್ತಿದ್ದು ಕಲ್ಲುಗಳು ಜಾರುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದ ಗಡಾಯಿಕಲ್ಲು (ಜಮಾಲಾಬಾದ್/ ನರಸಿಂಹಗಡ) ಚಾರಣಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಗಡಾಯಿಕಲ್ಲಿಗೆ ಜುಲೈ 7ರಿಂದ ಮುಂದಿನ ಆದೇಶದ ವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಸ್ವಾತಿ ತಿಳಿಸಿದ್ದಾರೆ.
ಕೆಲ ಗ್ರಾಮಗಳು ಜಲಾವೃತ
ಹುಬ್ಬಳ್ಳಿ/ಮಡಿಕೇರಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು ಜಿಲ್ಲೆಯ ಕರಾವಳಿ ಭಾಗದಲ್ಲಿ ಗುರುವಾರ ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಭಟ್ಕಳ ತಾಲ್ಲೂಕಿನಲ್ಲಿ 13 ಮನೆಗಳಿಗೆ ಹಾನಿಯಾಗಿದೆ. ಕಾರವಾರ ತಾಲ್ಲೂಕಿನ ಬಿಣಗಾದ ಒಕ್ಕಲು ಕೇರಿ ಇಡೂರು ಗ್ರಾಮಗಳು ಜಲಾವೃತಗೊಂಡಿವೆ. ಗಂಗಾವಳಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರ-ಹೆಗ್ಗಾರ ಸಂಪರ್ಕಿಸುವ ತಾತ್ಕಾಲಿಕ ಸೇತುವೆ ಮುಳುಗಿದೆ. ಇದರಿಂದ ಅಂಕೋಲಾ ತಾಲ್ಲೂಕಿನ ಐದಕ್ಕೂ ಹೆಚ್ಚು ಗ್ರಾಮಗಳಿಗೆ ಯಲ್ಲಾಪುರದ ಸಂಪರ್ಕ ತಪ್ಪಿದೆ. ಶಿರಸಿ ತಾಲ್ಲೂಕಿನ ನೀರಕೋಣೆಯಲ್ಲಿ ದೊಡ್ಡ ಗಾತ್ರದ ಮರ ಉರುಳಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಕೊಡಗು ಜಿಲ್ಲೆಯಲ್ಲಿ ಗುರುವಾರ ಭಾರಿ ಮಳೆ ಸುರಿದಿದ್ದು ಮೂರ್ನಾಡು– ಪಾರಣೆ ಮಧ್ಯದ ಬಲಮುರಿಯ ಕಿರು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಆದರೆ ಇಲ್ಲಿ ಎತ್ತರದ ಸೇತುವೆ ಇದ್ದು ಸಂಚಾರಕ್ಕೆ ತೊಂದರೆಯಾಗಿಲ್ಲ. ಸಮೀಪದ ಕಕ್ಕಬೆಯಲ್ಲಿ ಕಕ್ಕಬೆ ಹೊಳೆ ತುಂಬಿ ಹರಿಯುತ್ತಿದೆ. ನಾಲಡಿ ಗ್ರಾಮದ ಸಂಪರ್ಕ ರಸ್ತೆಯ ಮೇಲೂ ನೀರು ಉಕ್ಕಿ ಹರಿಯುತ್ತಿದೆ.
ಲಾಂಚ್‌ನಲ್ಲಿ ವಾಹನ ಸಾಗಾಟ ಇಂದಿನಿಂದ
ಶಿವಮೊಗ್ಗ: ಶರಾವತಿ ಹಿನ್ನೀರಿನ ಹೊಳೆಬಾಗಿಲು- ಅಂಬಾರಗೋಡ್ಲು ಮಾರ್ಗದ ಸಿಗಂದೂರು ಲಾಂಚ್‌ನಲ್ಲಿ ವಾಹನ ಸಾಗಾಟಕ್ಕೆ ಶುಕ್ರವಾರದಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದು ಶರಾವತಿ ಹಿನ್ನೀರಿನಲ್ಲೂ ನೀರಿನ ಕೊರತೆ ಉಂಟಾಗಿದ್ದರಿಂದ ಲಾಂಚ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಜೂನ್ 14ರಿಂದ ಸಿಗಂದೂರು ಲಾಂಚಿನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.