ಬೆಂಗಳೂರು: ‘ಮತದಾನಕ್ಕೆ 21 ವರ್ಷಗಳನ್ನು ನಿಗದಿ ಮಾಡಿರುವ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣ ಬಳಕೆಗೂ ವಯೋಮಿತಿ ನಿಗದಿ ಮಾಡಲು ಸಾಧ್ಯವೇ ಎಂಬುದರ ಬಗ್ಗೆ ಚಿಂತನೆ ನಡೆಸಿ‘ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸಲಹೆ ನೀಡಿದೆ.
ಎಕ್ಸ್ ಕಾರ್ಪ್ (ಟ್ವಿಟರ್) ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ನ್ಯಾಯಪೀಠವು, ‘ಶಾಲೆಗೆ ಹೋಗುವ ಮಕ್ಕಳೂ ಸಾಮಾಜಿಕ ಮಾಧ್ಯಮಗಳ ದಾಸರಾಗಿದ್ದಾರೆ. 17 ಅಥವಾ 18 ವಯೋಮಿತಿಯ ಮಕ್ಕಳಿಗೆ ದೇಶದ ಹಿತಾಸಕ್ತಿಗೆ ಪೂರಕ ಯಾವುದು ಮಾರಕ ಯಾವುದು ಎಂಬುದನ್ನು ನಿರ್ಧರಿಸುವ ಪ್ರೌಢಿಮೆ ಇರುವುದಿಲ್ಲ. ಹೀಗಾಗಿ, ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮ ಬಳಕೆಗೆ ಕನಿಷ್ಠ ವಯೋಮಿತಿ ನಿಗದಿಪಡಿಸಬೇಕು‘ ಎಂದು ಹೇಳಿತು.
‘ಆಕ್ಷೇಪಾರ್ಹ ವಿಷಯವು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂಗಳಾದ 69–ಎ (1) ಮತ್ತು (2) ಅನ್ನು ಉಲ್ಲಂಘಿಸುತ್ತವೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಇದನ್ನು ಉಲ್ಲಂಘಿಸುವುದು ಕಂಡುಬಂದರೆ ಎಕ್ಸ್ ಕಾರ್ಪ್ ನಿರ್ಬಂಧದ ಆದೇಶಗಳನ್ನು ಪಾಲಿಸಬೇಕಾಗುತ್ತದೆ‘ ಎಂದು ನ್ಯಾಯಪೀಠವು ತಿಳಿಸಿತು.
ಮಧ್ಯಂತರ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಬುಧವಾರ (ಸೆ.20) ಪ್ರಕಟಿಸುವುದಾಗಿ ಹೇಳಿ, ವಿಚಾರಣೆ ಮುಂದೂಡಿತು. ಕೇಂದ್ರ ಸರ್ಕಾರದ ಪರ ವಕೀಲ ಎಂ. ಎನ್. ಕುಮಾರ್ ಹಾಜರಿದ್ದರು.
ಕೆಲವು ವೈಯಕ್ತಿಕ ಖಾತೆಗಳ ಮೇಲೆ ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ 2021ರ ಫೆಬ್ರುವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಎಕ್ಸ್ ಕಾರ್ಪ್ ಈ ಮೇಲ್ಮನವಿ ಸಲ್ಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.