ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಸಂಸ್ಥೆಗಳ ದುರ್ನಡತೆ: ಹೈಕೋರ್ಟ್ ಕಿಡಿ

Published 25 ಜುಲೈ 2023, 15:57 IST
Last Updated 25 ಜುಲೈ 2023, 15:57 IST
ಅಕ್ಷರ ಗಾತ್ರ

ಬೆಂಗಳೂರು: ‘ಸೂಪರ್‌ ನ್ಯೂಮರರಿ (ಹೆಚ್ಚುವರಿ) ಕೋಟಾ ಸೃಷ್ಟಿಸಿರುವುದೇ ದುರ್ಬಲ ವರ್ಗದವರಿಗೆ ಸಮಾನ ಅವಕಾಶಗಳನ್ನು ನೀಡುವುದು ಮತ್ತು ಅವರನ್ನು ರಕ್ಷಿಸುವುದಕ್ಕಾಗಿ. ಆದರೆ, ಈ ಕೋಟಾದಡಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗೆ ಬೋಧನಾ ಶುಲ್ಕ ವಿಧಿಸಿದ್ದ ಕ್ರಮ ವ್ಯವಸ್ಥಿತ ತಾರತಮ್ಯದಿಂದ ಕೂಡಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಮೈಸೂರಿನ ‘ಅಕಾಡೆಮಿ ಫಾರ್ ಟೆಕ್ನಿಕಲ್ ಅಂಡ್ ಮ್ಯಾನೇಜ್ಮೆಂಟ್ ಎಕ್ಸಲೆನ್ಸ್’ ಎಂಜಿನಿಯರಿಂಗ್ ಕಾಲೇಜಿನ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಸಂಬಂಧ ವಿದ್ಯಾರ್ಥಿ ಆದಿತ್ಯ ದೀಪಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ, ‘ವಿದ್ಯಾರ್ಥಿಗೆ ಶುಲ್ಕವನ್ನು ಹಿಂತಿರುಗಿಸಬೇಕು ಮತ್ತು ವಿದ್ಯಾರ್ಥಿಯು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದಕ್ಕಾಗಿ ₹ 1 ಲಕ್ಷ ಠೇವಣಿ ಇಡಬೇಕು’ ಎಂದು ಕಾಲೇಜಿಗೆ ನಿರ್ದೇಶಿಸಿದೆ.

‘ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯು ಕಾಲೇಜಿಗೆ ಷೋಕಾಸ್ ನೋಟಿಸ್ ನೀಡಬೇಕು ಮತ್ತು ಸೂಪರ್ ನ್ಯೂಮರರಿ ಕೋಟಾದ ವಿದ್ಯಾರ್ಥಿಯಿಂದ ಅಕ್ರಮವಾಗಿ ಬೋಧನಾ ಶುಲ್ಕ ಸಂಗ್ರಹ ಮಾಡಿದ್ದಕ್ಕಾಗಿ ಸೂಕ್ತ ಕ್ರಮ ಜರುಗಿಸತಕ್ಕದ್ದು’ ಎಂದೂ ನಿರ್ದೇಶಿಸಿದೆ.

‘ಕೆಲವು ಶೈಕ್ಷಣಿಕ ಸಂಸ್ಥೆಗಳು ದುರ್ನಡತೆಯಿಂದ ಸೂಪರ್ ನ್ಯೂಮರರಿ ಕೋಟಾದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ವಿಧಿಸುವ ಆಘಾತಕಾರಿ ಪ್ರವೃತ್ತಿ ಕಂಡುಬರುತ್ತಿದೆ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.

‘ಖಾಸಗಿ ಅನುದಾನರಹಿತ ಎಂಜಿನಿಯರಿಂಗ್ ಕಾಲೇಜುಗಳು ಒಕ್ಕೂಟವನ್ನು ರಚಿಸಿಕೊಂಡು, ಆರ್ಥಿಕವಾಗಿ ಸುಲಭವಾದ ದುರ್ಬಲ ವರ್ಗದವರಿಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ಕೊಡಿಸಲು ಒಪ್ಪಂದ ಮಾಡಿಕೊಂಡಿವೆ. ಹೀಗಾಗಿ, ಪ್ರತಿವಾದಿ ಕಾಲೇಜಿನ ಕ್ರಮ ಪ್ರಶ್ನಾರ್ಹವಾಗಿದೆ. ಕಾಲೇಜು ಸೂಪರ್ ನ್ಯೂಮರರಿ ಕೋಟಾದ ವ್ಯಾಖ್ಯಾನವನ್ನು ಅರ್ಥ ಮಾಡಿಕೊಳ್ಳದೇ ಇರುವುದು ಅನ್ಯಾಯದ ಕ್ರಮ’ ಎಂದು ಕಿಡಿ ಕಾರಿದೆ.

‘ಇಡಬ್ಲ್ಯುಎಸ್ (ಆರ್ಥಿಕವಾಗಿ ಹಿಂದುಳಿದ ವರ್ಗ) ಮೀಸಲು ನೀತಿಯನ್ನು ಸುಪ್ರೀಂ ಕೋರ್ಟ್
ಎತ್ತಿ ಹಿಡಿದಿದೆ ಮತ್ತು ಜಾತಿ ಹೊರತುಪಡಿಸಿ ಆರ್ಥಿಕವಾಗಿ ದುರ್ಬಲ ವರ್ಗದವರನ್ನು ಗುರುತಿಸಿ ಮೀಸಲು ಒದಗಿಸಬೇಕು ಎಂದು ಹೇಳಿದೆ. ಇದು ಸ್ವಾತಂತ್ರ್ಯಾನಂತರ ದೇಶದಲ್ಲಿ ಇದ್ದ ಮೀಸಲು ನೀತಿಯನ್ನು ಬದಲಾಯಿಸಿದೆ. ಐತಿಹಾಸಿಕವಾಗಿ ಹಿಂದುಳಿದ ಜಾತಿ ಆಧಾರಿತ ಸಮುದಾಯಗಳನ್ನು ಸಾಮಾಜಿಕ ದೌರ್ಜನ್ಯ, ತಾರತಮ್ಯದಿಂದ ದೂರ ಮಾಡುವುದೇ ಆಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಾಲೇಜು ಅರ್ಜಿದಾರರ ವಿದ್ಯಾರ್ಥಿ ವೇತನದ ಹಣವನ್ನು ಬೋಧನಾ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಂಡಿತ್ತು. ಅರ್ಜಿದಾರರು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT