ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ದಂಪತಿ ವಿಚ್ಛೇದನ–18 ತಿಂಗಳು ಕಾಯಲೇಬೇಕು: ಹೈಕೋರ್ಟ್

Published 6 ಡಿಸೆಂಬರ್ 2023, 18:44 IST
Last Updated 6 ಡಿಸೆಂಬರ್ 2023, 18:44 IST
ಅಕ್ಷರ ಗಾತ್ರ

ಬೆಂಗಳೂರು: ‘ದಂಪತಿ ಪರಸ್ಪರ ಸಮ್ಮತಿಯ ಮೇರೆಗೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ವಿಚಾರಣಾ ನ್ಯಾಯಾಲಯ ಅಂತಹ ಅರ್ಜಿಯನ್ನು ಏಕಾಏಕಿ ವಜಾಗೊಳಿಸುವಂತಿಲ್ಲ. ಹಿಂದೂ ವಿವಾಹ ಕಾಯ್ದೆಯ ನಿಯಮದಂತೆ 18 ತಿಂಗಳು ಕಾಯಬೇಕಾಗುತ್ತದೆ‘ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ವಿಚ್ಛೇದನ ಕೋರಿ ದಂಪತಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಕೆ.ಎಸ್‌.ಮುದಗಲ್‌ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠವು, ದಂಪತಿಗೆ ಮಧ್ಯಸ್ಥಿಕೆ ಕೇಂದ್ರಕ್ಕೆ ತೆರಳುವಂತೆ ಸೂಚಿಸಿದೆ.

‘ಮಧ್ಯಸ್ಥಿಕೆ ಕೇಂದ್ರವು ವಿಚಾರಣಾ ನ್ಯಾಯಾಲಯಕ್ಕೆ ಮಧ್ಯಸ್ಥಿಕೆ ವರದಿಯನ್ನು ಸಲ್ಲಿಸಬೇಕು. ಆ ವರದಿ ಆಧರಿಸಿ ವಿಚಾರಣಾ ನ್ಯಾಯಾಲಯ ಕಾನೂನು ಪ್ರಕಾರ ವಿಚ್ಛೇದನದ ಅರ್ಜಿ ಇತ್ಯರ್ಥಪಡಿಸಬಹುದು. ಪಕ್ಷಗಾರರ ಮನವಿ ಇಲ್ಲದೆ ವಿಚಾರಣಾ ನ್ಯಾಯಾಲಯ ತನ್ನಷ್ಟಕ್ಕೆ ತಾನೇ ಅರ್ಜಿ ವಜಾಗೊಳಿಸಬಾರದು‘ ಎಂದು ತಾಕೀತು ಮಾಡಿದೆ.

‘ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಅರ್ಜಿಯನ್ನು ಕೇವಲ 9 ತಿಂಗಳಿಗೇ ವಜಾಗೊಳಿಸಿದೆ. ನಿಗದಿಯಂತೆ ಪ್ರಕರಣದ ಇತ್ಯರ್ಥಕ್ಕೆ 18 ತಿಂಗಳು ಕಾಲಾವಕಾಶ ಇದೆ. ಆದರೆ ಅದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯ ಕಲಂ 13 ಬಿ (2) ಅನ್ನು ಪಾಲನೆ ಮಾಡಿಲ್ಲ. ಹಾಗಾಗಿ ವಿಚಾರಣಾ ನ್ಯಾಯಾಲಯ ತಪ್ಪೆಸಗಿದೆ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಹಿಂದೂ ವಿವಾಹ ಕಾಯ್ದೆ–1955ರ ಕಲಂ 13ಬಿ ಅನ್ವಯ, ದಂಪತಿ ಅರ್ಜಿ ಸಲ್ಲಿಸುವ ಮುನ್ನ ಒಂದು ವರ್ಷ ಪ್ರತ್ಯೇಕವಾಗಿ ವಾಸವಿರಬೇಕು. ಪರಸ್ಪರ ವಿವಾಹ ಸಂಬಂಧ ಮುರಿದುಕೊಳ್ಳಲು ಒಪ್ಪಿರಬೇಕು ಹಾಗೂ ಅರ್ಜಿ ಸಲ್ಲಿಸಿದ ಆರು ತಿಂಗಳವರೆಗೆ ಅವರು ಆ ಅರ್ಜಿಯನ್ನು ನ್ಯಾಯಾಲಯದ ಮುಂದೆ ಮಂಡಿಸುವಂತಿಲ್ಲ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಪ್ರಕರಣವೇನು?: ಅರ್ಜಿದಾರ ದಂಪತಿ 2020ರ ನವೆಂಬರ್ 27ರಂದು ಮದುವೆಯಾಗಿದ್ದರು. 2021ರ ಸೆಪ್ಟೆಂಬರ್‌ನಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ವಿವಾಹ ಬಂಧನ ತೊಡೆದುಕೊಳ್ಳಲು ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹ ವಿಚ್ಛೇದನ ಪಡೆದುಕೊಳ್ಳುತ್ತಿರುವುದಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವಿಚಾರಣಾ ನ್ಯಾಯಾಲಯ, ದಂಪತಿ ಒಂದುಗೂಡುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸಿತ್ತು. ಇಬ್ಬರೂ ಮಧ್ಯಸ್ಥಿಕೆಗೆ ಗೈರು ಹಾಜರಾಗಿದ್ದರು. ಮಧ್ಯಸ್ಥಿಕೆ ಕೇಂದ್ರ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ವರದಿ ಆಧರಿಸಿ ವಿಚಾರಣಾ ನ್ಯಾಯಾಲಯ, ‘ದಂಪತಿಗೆ ಈ ಪ್ರಕರಣ ಮುನ್ನಡೆಸಲು ಆಸಕ್ತಿ ಇಲ್ಲ‘ ಎಂದು ದಾಖಲಿಸಿ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT