ಬೆಳಗಾವಿ: ‘ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿಕೊಂಡು ಯಾರಾದರೂ ಪಕ್ಷಕ್ಕೆ ಬರುವುದಾದರೆ ನಾವು ಬೇಡ ಎನ್ನುವುದಿಲ್ಲ. ನಾವೇನು 'ಆಪರೇಷನ್ ಹಸ್ತ' ಮಾಡುತ್ತಿಲ್ಲ. ಬೇರೆ ಪಕ್ಷಗಳ ಶಾಸಕರು ತಾವಾಗಿಯೇ ಬಂದರೆ ಬೇಡ ಎನ್ನುವುದಿಲ್ಲ’ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸಾಮರ್ಥ್ಯ ಗಮನಿಸಿದವರು ನಮ್ಮೊಂದಿಗೆ ಬರುವ ಇಚ್ಚೆ ವ್ಯಕ್ತಪಡಿಸಿರಬಹುದು. ನನ್ನೊಂದಿಗೆ ಯಾರೂ ಮಾತನಾಡಿಲ್ಲ. ಕೆಪಿಸಿಸಿ ಅಧ್ಯಕ್ಷರ ಜತೆಗೆ ಮಾತನಾಡಿರಬಹುದು’ ಎಂದರು.
‘ಬಿಜೆಪಿಯವರಿಗೆ ಸೋಲಾದ ಮೇಲೆ ಭವಿಷ್ಯ ನುಡಿಯಲು ಶುರು ಮಾಡಿದ್ದಾರೆ. ರಾಜ್ಯ ಸರ್ಕಾರ ಉರುಳುತ್ತದೆ ಎಂದು ಆಗಾಗ ಬಡಬಡಿಸುತ್ತಾರೆ. ಆದರೆ, ಪೂರ್ಣ ಬಲದ ಮೇಲೆ ಬಂದಿರುವ ನಮ್ಮ ಸರ್ಕಾರ ಸ್ಥಿರವಾಗಿದೆ. ಜನರಿಗೆ ನೀಡಿದ ಗ್ಯಾರಂಟಿ ಆಶ್ವಾಸನೆಗಳನ್ನು ಮೂರೇ ತಿಂಗಳಲ್ಲಿ ಈಡೇರಿಸಿದ್ದೇವೆ. ಇಷ್ಟೊಂದು ಸುಭದ್ರ ಸರ್ಕಾರ ಇದ್ದಾಗಲೂ ಅವರು ಹೇಗೆ ಭವಿಷ್ಯ ನುಡಿಯುತ್ತಾರೋ ಗೊತ್ತಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ರಾಜ್ಯ ಸರ್ಕಾರ 50:50 ಸೂತ್ರದ ಮೇಲೆ ನಡೆಯುತ್ತಿದೆ ಎಂಬುದು ಸುಳ್ಳು. ಇದನ್ನು ಮಾಧ್ಯಮಗಳೇ ಅಂದಾಜಿಸಿ ಸುದ್ದಿ ಮಾಡುತ್ತಿವೆ. ಸರ್ಕಾರದಲ್ಲಿ ಇಂಥ ನಿಯಮಗಳೇನೂ ಇಲ್ಲ’ ಎಂದೂ ಹೇಳಿದರು.
‘ನಗರದ ಉದ್ಯಮಭಾಗದಲ್ಲಿ ಅಂಗವಿಕಲನಿಗೆ ಪೊಲೀಸರು ಥಳಿಸಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಿಂದ ಗೊತ್ತಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು. ಇಂಥ ಘಟನೆ ನಡೆದಿದ್ದರೆ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ’ ಎಂದರು.
‘ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನ ಮುನಿ ಅವರ ಕೊಲೆ ಪ್ರಕರಣದ ತನಿಖೆ ಸಿಐಡಿ ಮೂಲಕ ನಡೆಯುತ್ತಿದೆ. ಇದು ಒಂದು ಸಮುದಾಯಕ್ಕೆ ನೋವು ನೀಡಿದ ಕಾರಣ ನಮ್ಮ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ತನಿಖೆ ನಡೆಯುವ ವೇಳೆ ಏನೂ ಹೇಳಿಕೆ ನೀಡಲು ಬರುವುದಿಲ್ಲ. ವರದಿ ಬಂದ ಬಳಿಕ ನಾನೇ ಬಹಿರಂಗ ಮಾಡುತ್ತೇನೆ. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ’ ಎಂದರು.
‘ರಾಜ್ಯದ ಪ್ರತಿ ಜಿಲ್ಲೆಗೂ ಭೇಟಿ ನಿಡಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪರಿಶೀಲನೆ ಆರಂಭಿಸಿದ್ದೇನೆ. ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡಿ ಇಲಾಖೆಯ ಕಾಮಗಾರಿ, ಬಾಕಿ ಪ್ರಕರಣಗಳು, ದೂರುಗಳ ಅಧ್ಯಯನ ಮುಂತಾದ ವಿಷಯಗಳನ್ನು ಪರಿಶೀಲನೆ ಮಾಡುತ್ತಿದ್ದೇನೆ’ ಎಂದು ಡಾ.ಜಿ.ಪರಮೇಶ್ವರ ತಿಳಿಸಿದರು.
‘ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅವ್ಯವಸ್ಥೆ ಆರೋಪಗಳಿವೆ. ಪರಿಶೀಲನೆ ಮಾಡಲಾಗುವುದು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಹಾಕಿದ ವಿಚಾರವೂ ನನಗೆ ತಿಳಿದಿದೆ. ಬೆಳಗಾವಿಗೆ ಭೇಟಿ ನೀಡುವ ಸಂದರ್ಭದಲ್ಲಿ ಜೈಲಿನ ಪ್ರಕರಣಗಳನ್ನೂ ಪರಿಶೀಲಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.