ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಡು ಕಟ್ಟುವ ತಾಣ ತ್ಯಜಿಸುತ್ತಿರುವ ಹಾರ್ನ್‌ಬಿಲ್; ಪಕ್ಷಿತಜ್ಞರಲ್ಲಿ ಕುತೂಹಲ

ಪವನ ಕುಮಾರ್ ಎಚ್‌.
Published 19 ಏಪ್ರಿಲ್ 2024, 2:51 IST
Last Updated 19 ಏಪ್ರಿಲ್ 2024, 2:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಶ್ಚಿಮಘಟ್ಟಗಳ ಐದು ರಾಜ್ಯಗಳಲ್ಲಿ ಈ ವರ್ಷ ಹೆಣ್ಣು ಹಾರ್ನ್‌ಬಿಲ್‌ಗಳು ವಿಶೇಷವಾಗಿ ‘ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್’ ಗೂಡುಕಟ್ಟುವ ತಾಣಗಳನ್ನುತ್ಯಜಿಸುತ್ತಿರುವ ವಿಚಿತ್ರ ವಿದ್ಯಮಾನವು ಸಂಶೋಧಕರು ಮತ್ತು ಪಕ್ಷಿತಜ್ಞರಿಗೆ ಕುತೂಹಲ ಮೂಡಿಸಿದೆ.

ವಿಜ್ಞಾನಿಗಳ ಪ್ರಕಾರ, ಅವುಗಳ ಸಂತಾನೋತ್ಪತ್ತಿ ಚಕ್ರದಲ್ಲಿ ಆಗುವ ಯಾವುದೇ ಪರಿಣಾಮ ದೀರ್ಘಾವಧಿಯಲ್ಲಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಹಾರ್ನ್‌ಬಿಲ್‌ಗಳು ಒಂದರ್ಥದಲ್ಲಿ ‘ಕಾಡಿನ ರೈತರೂ’ ಹೌದು. ಏಕೆಂದರೆ ಅವು ದಿನಕ್ಕೆ 2 ಸಾವಿರದಿಂದ 3 ಸಾವಿರ ಬೀಜಗಳನ್ನು ಮೂಲ ಮರದಿಂದ 250 ಮೀಟರ್‌ಗಳಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಹರಡುತ್ತವೆ. ಬೀಜ ಪ್ರಸರಣ ಮತ್ತು ಸಸ್ಯ ಪುನರುತ್ಪಾದನೆಯಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ.

ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್‌ನ 4 ತಿಂಗಳ ಗೂಡುಕಟ್ಟುವ ಅವಧಿ ಡಿಸೆಂಬರ್‌ನಲ್ಲಿ ಪ್ರಾರಂಭ ಆಗುತ್ತದೆ. ಒಂಬತ್ತು ವಿಧದ ಹಾರ್ನ್‌ಬಿಲ್‌ಗಳು ದೇಶದಲ್ಲಿವೆ. ಪಶ್ಚಿಮ ಘಟ್ಟಗಳಲ್ಲಿ ಮಲಬಾರ್ ಪೈಡ್ ಹಾರ್ನ್‌ಬಿಲ್, ಮಲಬಾರ್ ಗ್ರೇ ಹಾರ್ನ್‌ಬಿಲ್, ಗ್ರೇಟ್ ಹಾರ್ನ್‌ಬಿಲ್ ಮತ್ತು ಇಂಡಿಯನ್ ಗ್ರೇ ಹಾರ್ನ್‌ಬಿಲ್ ಎಂಬ ನಾಲ್ಕು ಪ್ರಭೇದಗಳಾಗಿವೆ.

‘ಹಾರ್ನ್‌ಬಿಲ್ ಜೀವನ ಚಕ್ರಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ದತ್ತಾಂಶದ ಕೊರತೆ ಇದೆ. ನಿಖರ ಮಾಹಿತಿ ಇಲ್ಲ. ಆದರೆ, ಹಣ್ಣಿನ ಲಭ್ಯತೆ ಕೊರತೆ, ಹೆಚ್ಚಿನ ತಾಪಮಾನ ಮತ್ತು ಸೂಕ್ಷ್ಮ ಮಟ್ಟದಲ್ಲಿ ಹವಾಮಾನದ ಏರಿಳಿತವು ಪಕ್ಷಿಗಳು ಸಂತಾನೋತ್ಪತ್ತಿ ಪ್ರಕ್ರಿಯೆ ತ್ಯಜಿಸಲು ಕಾರಣವಾಗಿರಬಹುದು’ ಎಂಬುದು ಸಂಶೋಧಕರ ಊಹೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪಕ್ಷಿತಜ್ಞ ಗೋಪಾಲಕೃಷ್ಣ ಹೆಗಡೆ ಅವರು ಒಂಬತ್ತು ವರ್ಷಗಳಿಂದ ಹಾರ್ನ್‌ಬಿಲ್ ಗೂಡೊಂದರ ಮೇಲೆ ನಿಗಾ ವಹಿಸಿದ್ದಾರೆ. ‘ಹೆಣ್ಣು ಹಾರ್ನ್‌ಬಿಲ್ ಈ ಋತುವಿನಲ್ಲಿ ತಡವಾಗಿ ಗೂಡುಕಟ್ಟುವ ಸ್ಥಳಗಳಿಗೆ ಹೋಗಿ, ಮರದ ಕುಹರದೊಳಗೆ ಪ್ರವೇಶಿಸಿ ಮೊಟ್ಟೆ ಇಡದೆ ವಾಪಸ್ ಹೋಗಿವೆ’ ಎಂದು ಅವರು ಹೇಳುತ್ತಾರೆ.

ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 13 ಸ್ಥಳಗಳ ಮೇಲೆ ನಿಗಾ ಇರಿಸಿದ್ದ ಅಧಿಕಾರಿಗಳು ಸಹ, ಹಾರ್ನ್‌ಬಿಲ್‌ಗಳು ತಮ್ಮ ಗೂಡುಕಟ್ಟುವ ಮರಗಳನ್ನು ತೊರೆಯುತ್ತಿರುವುದನ್ನು ಗಮನಿಸಿದ್ದಾರೆ.

ಮೈಸೂರಿನ ‘ನೇಚರ್ ಕನ್ಸರ್ವೇಶನ್ ಫೌಂಡೇಶನ್’ನ (ಎನ್‌ಸಿಎಫ್) ಸಂಶೋಧಕಿ ಪೂಜಾ ಪವಾರ್, ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ ಹೆಣ್ಣು ಹಾರ್ನ್‌ಬಿಲ್‌ಗಳು ಈ ಋತುವಿನಲ್ಲಿ ತಡವಾಗಿ ಗೂಡುಕಟ್ಟುವ ಸ್ಥಳಕ್ಕೆ ಬಂದು ಹಾಗೆಯೇ ಹಿಂದಿರುಗುತ್ತಿವೆ ಎಂದು ತಿಳಿಸಿದ್ದಾರೆ.

‘ಹಾರ್ನ್‌ಬಿಲ್‌ಗಳ ಈ ನಡವಳಿಕೆಗೆ ನಿಖರ ಕಾರಣ ನಮಗೆ ತಿಳಿದಿಲ್ಲ. ಆದರೆ ಮೊಟ್ಟಮೊದಲ ಬಾರಿಗೆ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಗೂಡುಗಳನ್ನು ಬಳಸದಿರುವುದನ್ನು ನೋಡುತ್ತಿದ್ದೇವೆ. ಈ ವಿದ್ಯಮಾನವು ಕೇರಳ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಗೋವಾದಲ್ಲಿ ನಡೆದಿವೆ’ ಎಂದು ಪೂಜಾ ಪವಾರ್ ಹೇಳಿದರು.

ಶಿರಸಿಯ ಅರಣ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶ್ರೀಧರ್ ಡಿ. ಭಟ್ ಪ್ರಕಾರ, ‘ಪರಿಸರದ ಪರಿಸ್ಥಿತಿಗಳು ಅನುಕೂಲಕರ ಆಗಿಲ್ಲದಿದ್ದರೆ, ಈ ಸೂಕ್ಷ್ಮ ಪಕ್ಷಿಗಳು ಸಂತಾನೋತ್ಪತ್ತಿ ಪ್ರಕ್ರಿಯೆ ಮುಂದೂಡುತ್ತವೆ. ಈ ಋತುವಿನಲ್ಲಿ ಹಕ್ಕಿಗಳು ಗೂಡು ಕಟ್ಟದಿರಲು ನಿಖರ ಕಾರಣ ಹೇಳಲು ಇದು ಸಕಾಲವಲ್ಲ. ಆದರೆ, ಬರಗಾಲ ಮತ್ತು ಕೆಲ ಬಗೆಯ ಹಣ್ಣುಗಳ ಕೊರತೆ ಇದೆ. ಹೀಗಾಗಿ ಗೂಡಿನಲ್ಲಿರುವ ಹೆಣ್ಣು ಹಾರ್ನ್‌ಬಿಲ್‌ಗೆ ಅಗತ್ಯ ಪ್ರಮಾಣದ ಹಣ್ಣುಗಳನ್ನು ಪೂರೈಸಲು ಗಂಡಿಗೆ ಕಷ್ಟವಾಗಿರ ಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT