ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಹುಂಡಿ ಇಟ್ಟುಬಿಡಲಿ: ವಿಜಯೇಂದ್ರ

Published 22 ಫೆಬ್ರುವರಿ 2024, 4:57 IST
Last Updated 22 ಫೆಬ್ರುವರಿ 2024, 4:57 IST
ಅಕ್ಷರ ಗಾತ್ರ

ಮೈಸೂರು: 'ಶ್ರೀಮಂತ ದೇವಾಲಯಗಳಿಗೆ ಕನ್ನ ಹಾಕಲು ಸರ್ಕಾರ ಮುಂದಾಗಿದೆ. ಇದರ ಬದಲಿಗೆ ವಿಧಾನಸೌಧದ ಮುಂದೆ ಒಂದು ಹುಂಡಿ ಇಟ್ಟು ಬಿಡಲಿ. ದಾನಿಗಳು ಅಲ್ಲಿಗೇ ಬಂದು ದಾನ ಮಾಡುತ್ತಾರೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, 'ಈ ಸರ್ಕಾರದ ದುರಾಡಳಿತದಿಂದಾಗಿ ಸರ್ಕಾರಿ ನೌಕರರಿಗೆ ಸಂಬಳವನ್ನೂ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ' ಎಂದು ಆರೋಪಿಸಿದರು.

'224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಒಂದು ರೂಪಾಯಿ ಅನುದಾನವನ್ನೂ ಸರ್ಕಾರ ಕೊಟ್ಟಿಲ್ಲ' ಎಂದು ದೂರಿದರು.

'ನಾಡಗೀತೆ ವಿಚಾರದಲ್ಲಿ ಸರ್ಕಾರ ಎಡವಟ್ಟುಗಳನ್ನು ಮಾಡಿದೆ. ಈ ಸರ್ಕಾರದ ಕಾರ್ಯಸೂಚಿ ಏನು ಎಂಬುದು ಈ ಆದೇಶಗಳಿಂದ ಗೊತ್ತಾಗುತ್ತದೆ. ಕನ್ನಡ ವಿರೋಧಿ ಚಿಂತನೆಯಲ್ಲಿದೆ. ಕನ್ನಡ ನಾಡು - ನುಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧಕ್ಕೆ ತರುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಕಾಂಗ್ರೆಸ್ ಪ್ರಕಾರ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲ. ಅದೇ ಭ್ರಮೆಯಲ್ಲೇ ಮುಖ್ಯಮಂತ್ರಿಯೂ ಇದ್ದಾರೆ. ಹೀಗಾಗಿಯೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ' ಎಂದು ಆರೋಪಿಸಿದರು.

'ಲೋಕಸಭಾ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಆತಂಕದಲ್ಲಿದೆ. ಆದ್ದರಿಂದಲೇ ದೆಹಲಿ ಚಲೋ ಮೊದಲಾದ ನಾಟಕ ಮಾಡಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ನಡೆಸುತ್ತಿದೆ' ಎಂದು ಟೀಕಿಸಿದರು.

'ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು‌ ಬಿಜೆಪಿ ವರಿಷ್ಠರ ಭೇಟಿಗಾಗಿ ದೆಹಲಿಗೆ ಹೋಗಿರುವ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿಯಿಂದ ಕೆಲವರನ್ನು ಕಾಂಗ್ರೆಸ್‌ಗೆ ಸೆಳೆಯುವ ವಿಚಾರವೂ ನನಗೆ ಗೊತ್ತಿಲ್ಲ. ಊಹಾಪೋಹಗಳಿಗೆ ಪ್ರತಿಕ್ರಿಯೆ ಕೊಡುವುದಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT