ಬೆಂಗಳೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ದೊಡ್ಡ ಹುದ್ದೆ. ಅದನ್ನು ಕೇಳಿ ಪಡೆಯಲು ಆಗುವುದಿಲ್ಲ. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.
ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ನನಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಕೊಡುತ್ತಾರೆಯೆ ಎಂಬುದು ತಿಳಿದಿಲ್ಲ. ನಾನೀಗ ಪಕ್ಷದ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಭವಿಷ್ಯದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಪಕ್ಷದ ವರಿಷ್ಠರು ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ’ ಎಂದರು.
‘ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು ಹಿರಿಯ ರಾಜಕಾರಣಿ. ಯಾವ ಅರ್ಥದಲ್ಲಿ ನನ್ನ ಬಗ್ಗೆ ಹೇಳಿದ್ದಾರೋ ಗೊತ್ತಿಲ್ಲ. ಬಿಜೆಪಿ ವರಿಷ್ಠರು ಚರ್ಚೆ ನಡೆಸಿದ್ದಾರೆ ಎಂದಷ್ಟೇ ಅವರು ಹೇಳಿರುವುದು. ನಿರ್ಣಯ ಆಗಿದೆ ಎಂದೇನೂ ಹೇಳಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಯಾವ ಹುದ್ದೆಯೂ ಶಾಶ್ವತ ಅಲ್ಲ. ಹಲವು ಅವಕಾಶ ನೀಡಿದ್ದರು. ನಾನು ಯಾವಾಗಲೂ ಪಕ್ಷದ ಕಾರ್ಯಕರ್ತ, ಆಗಲೂ, ಈಗಲೂ’ ಎಂದರು.
ದೆಹಲಿ ಪ್ರವಾಸದ ಕುರಿತು ಕೇಳಿದಾಗ, ‘ದೆಹಲಿಯಲ್ಲಿರುವ ಕಚೇರಿಯನ್ನು ಖಾಲಿ ಮಾಡಬೇಕಿದೆ. ಅದಕ್ಕಾಗಿ ದೆಹಲಿಗೆ ಹೋಗುತ್ತಿದ್ದೇನೆ’ ಎಂದು ಹೇಳಿದರು.
‘35 ವರ್ಷಗಳಿಂದ ಪಕ್ಷದಲ್ಲಿದ್ದೇನೆ. ಆಗಿನಿಂದಲೂ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದ ಪಡೆಯುತ್ತಿದ್ದೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.