ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ರಾಚಯ್ಯನವರ ಪ್ರಾಡಕ್ಟ್; ಮುಖ್ಯಮಂತ್ರಿ ಸಿದ್ದರಾಮಯ್ಯ

Published 10 ಆಗಸ್ಟ್ 2024, 12:21 IST
Last Updated 10 ಆಗಸ್ಟ್ 2024, 12:21 IST
ಅಕ್ಷರ ಗಾತ್ರ

ಚಾಮರಾಜನಗರ: 'ನನ್ನ ರಾಜಕೀಯ ಏಳ್ಗೆಗೆ ಬಿ.ರಾಚಯ್ಯ ಕಾರಣಕರ್ತರಾಗಿದ್ದು ನಾನು ಅವರ ಪ್ರಾಡಕ್ಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಆಲೂರಿನಲ್ಲಿ ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ ಸ್ಮಾರಕ ಉದ್ಘಾಟಿಸಿ ಮಾತನಾಡಿದ ಅವರು, 'ರಾಚಯ್ಯ ಸದಾ ಬಡವರ, ಶೋಷಿತರ, ಅಲ್ಪಸಂಖ್ಯಾತರ ಪರವಾಗಿದ್ದರು, ಅವರ ಸಲಹೆ

ಮಾರ್ಗದರ್ಶನದಂತೆ ನಾನೂ ಶೋಷಿತರ ಪರವಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ರಾಜ್ಯ ರಾಜಕಾರಣ ಕಂಡ ಅತ್ಯಂತ ಮುತ್ಸದ್ದಿ ರಾಜಕಾರಣಿಯಾಗಿರುವ ರಾಚಯ್ಯ ಮಿತಭಾಷಿಯಾದರೂ ಸದಾ ಬಡವರ ಪರ, ಶೋಷಿತರ ಪರವಾಗಿ ತುಡಿಯುತ್ತಿದ್ದರು.

ರಾಮಕೃಷ್ಣ ಹೆಗಡೆ ಅವರ ಮಂತ್ರಿ ಮಂಡಲದಲ್ಲಿ ಪ್ರಭಾವಿಯಾಗಿದ್ದ ರಾಚಯ್ಯನವರಿಗೆ ಪ್ರತಿಭಾವಂತ, ಜನಪರ ಕಾಳಜಿಯುಳ್ಳ ರಾಜಕಾರಣಿಗಳನ್ನು ಬೆಳೆಸುವ ಗುಣವಿತ್ತು.

ನಾನು ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಲು ಹಾಗೂ ಮೊದಲ ಬಾರಿ ಸಚಿವನಾಗಲು ರಾಚಯ್ಯ ಅವರೇ ಕಾರಣ ಎಂದು ಸ್ಮರಿಸಿದರು.

ಅಂದು ಅವರು ಮಂತ್ರಿಯಾಗಲು ಶಿಫಾರಸು ಮಾಡದಿದ್ದರೆ ಪ್ರಸ್ತುತ ಎರಡು ಬಾರಿಗೆ ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ. ನಾನು ಮುಖ್ಯಮಂತ್ರಿಯಾಗಿರುವುದು ಕೆಲವರಿಗೆ ಹೊಟ್ಟೆ ಉರಿಯುತ್ತಿದೆ ಎಂದು ಹಾಸ್ಯಧಾಟಿಯಲ್ಲಿ ಹೇಳಿದರು.

ಮೈಸೂರು, ಚಾಮರಾಜನಗರ ಜಿಲ್ಲೆಯ ಬಹುತೇಕ ಕಾಂಗ್ರೆಸ್ ಮುಖಂಡರು ರಾಚಯ್ಯನವರ ಪ್ರಾಡಕ್ಟ್‌ಗಳಾಗಿದ್ದಾರೆ. ರಾಜಕಾರಣದಲ್ಲಿ ಮೌಲ್ಯಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ರಾಚಯ್ಯನವರು ಆದರ್ಶವಾಗಿ ನಿಲ್ಲುತ್ತಾರೆ. ಸ್ಮಾರಕದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಸ್ಥಾಪಿಸುವ ಅವರ ಪುತ್ರ ಹಾಗೂ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಚಪ್ಪ ಅವರ ಪತ್ನಿ ಗೌರಮ್ಮ, ಸಂಸದರಾದ ಸುನಿಲ್ ಬೋಸ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ಎಂ.ಆರ್.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ ಇದ್ದರು.

ನಮಗೆ ತಂಗಳು ಇರ್ತಿತ್ತು...
‘ಹಳ್ಳಿಗಳಲ್ಲಿ ಈಗ ಜೀವನ ಪದ್ಧತಿ ಬದಲಾಗಿದ್ದು, ರೈತರು ಬೆಳಿಗ್ಗೆ ಉಪಾಹಾರ ಸೇವನೆ ರೂಢಿಸಿಕೊಂಡಿದ್ದಾರೆ. ನಮಗೆ ಮನೆಯಲ್ಲಿ ತಂಗಳು ಇರ್ತಿತ್ತೇ ಹೊರತು, ಇಡ್ಲಿ, ದೋಸೆ, ಉಪ್ಪಿಟ್ಟು ಏನೂ ಇರುತ್ತಿರಲಿಲ್ಲ. ರಾತ್ರಿ ಉಳಿದ ಮುದ್ದೆಗೆ ಮಜ್ಜಿಗೆ ಬೆರೆಸಿ ತಂಗಳು ತಿನ್ನುತ್ತಿದ್ದೆವು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಲ್ಯದ ದಿನಗಳನ್ನು ನೆನೆದರು. ರಾಯಚ್ಯನವರ ಸ್ಮಾರಕ‌ ಉದ್ಘಾಟನಾ ಭಾಷಣ ಶುರು ಮಾಡುವ ವೇಳೆಗೆ ಸಂಜೆ 4 ಗಂಟೆ ಆಗಿತ್ತು. ಊಟದ ಸಮಯ ತಡವಾದದ್ದನ್ನು ಪ್ರಸ್ತಾಪಿಸಿ ಕ್ಷಮೆ ಕೋರಿ ಮೇಲಿನ‌ ಪ್ರಸಂಗವನ್ನು ತಿಳಿಸಿದರು. ‘ರಾಚಯ್ಯ ಅವರ ಮನೆಯಲ್ಲೂ ಇಡ್ಲಿ, ದೋಸೆ ಇರುತ್ತಿರಲಿಲ್ಲ ಎಂದು ಕಾಣಿಸು ತ್ತದೆ. ಅವರೂ ನನ್ನಂತೆ ತಂಗಳು ತಿಂದು ಗಟ್ಟಿಯಾದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT