ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸಾ–ಬಂಡೂರಿ: ಪರಿಸರ ಇಲಾಖೆ ಅನುಮತಿ ನೀಡಿದರೆ ನಾಳೆಯೇ ಕಾಮಗಾರಿ ಆರಂಭ: ಸಿಎಂ

Published 24 ಫೆಬ್ರುವರಿ 2024, 16:10 IST
Last Updated 24 ಫೆಬ್ರುವರಿ 2024, 16:10 IST
ಅಕ್ಷರ ಗಾತ್ರ

ನವಲಗುಂದ: ‘ಕಳಸಾ–ಬಂಡೂರಿ (ಮಹಾದಾಯಿ) ಯೋಜನೆಯ ಚಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಕೇಂದ್ರ ಪರಿಸರ ಇಲಾಖೆಯ ಇವತ್ತು ಅನುಮತಿ ನೀಡಿದರೆ ನಾಳೆಯೇ ಕೆಲಸ ಆರಂಭಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ನವಲಗುಂದದ ಮಾಡೆಲ್‌ ಹೈಸ್ಕೂಲ್‌ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಗ್ಯಾರಂಟಿ ಕಾರ್ಯಕ್ರಮಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಕಳಸಾ– ಬಂಡೂರಿ ಯೋಜನಗೆ ಟೆಂಡರ್‌ ಆಹ್ವಾನಿಸಲಾಗಿದೆ. ಆದರೆ, ಯೋಜನೆಗೆ ಪರಿಸರ ಇಲಾಖೆ ಅನುಮೋದನೆ ನೀಡಬೇಕಿದೆ, ಆ ಕೆಲಸವನ್ನು ಕೇಂದ್ರ ಸರ್ಕಾರದವರು ಮಾಡಬೇಕು. ಕೇಂದ್ರ ಸಚಿವ ಮತ್ತು ಇಲ್ಲಿನ ಸಂಸದ ಪ್ರಲ್ದಾಹ ಜೋಶಿ ಏನಪ್ಪಾ ಮಾಡುತ್ತಿದ್ದಿಯಾ ನೀನು?’ ಎಂದು ಅವರು ಪ್ರಶ್ನಿಸಿದರು.

‘ಪ್ರಲ್ಹಾದ ಜೋಶಿ ಅವರು ಅನುಮತಿ ಕೊಡಿಸಬೇಕು. ಜೋಶಿ ಅವರನ್ನು ನೀವು ಲೋಕಸಭೆಗೆ ಯಾಕೆ ಆಯ್ಕೆ ಮಾಡುತ್ತೀರಿ? ಅವರು ಕೆಲಸ ಮಾಡಲ್ಲ. ಕರ್ನಾಟಕ ಅಭಿವೃದ್ಧಿ ಬಗ್ಗೆ ಅವರು ತಲೆಕೆಡಿಸಿಕೊಳ್ಳಲ್ಲ. ರಾಜ್ಯದ 25 ಸಂಸದರು ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಧ್ವನಿ ಎತ್ತಿಲ್ಲ’ ಎಂದು ಕುಟುಕಿದರು.

‘ಹಿಂದೊಮ್ಮೆ ಬಿ.ಎಸ್.ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ ಭಾಷಣ ಮಾಡಿದ್ದರು. ಗೋವಾ ಮುಖ್ಯಮಂತ್ರಿಯ ಪತ್ರವನ್ನು ಓದಿದ್ದರು. ಕಾಮಗಾರಿ (ಮಹದಾಯಿ ಯೋಜನೆ) ಶುರು ಮಾಡುತ್ತೇವೆ ಎಂದು ಹೇಳಿದ್ದರು. ಅವರು ಚುನಾವಣೆಗೋಸ್ಕರ ಏನು ಬೇಕಾದರೂ ಭರವಸೆ ನೀಡುತ್ತಾರೆ’ ಎಂದು ಗೇಲಿ ಮಾಡಿದರು.

‘ಗುಜರಾತ್‌ನಿಂದ ತೆರಿಗೆ ವಸೂಲಿ ಮಾಡಬೇಡಿ, ನಾವು (ಗುಜರಾತ್‌ನವರು) ನಿಮ್ಮನ್ನು (ಕೇಂದ್ರವನ್ನು) ಕೇಳಲ್ಲ, ನಿಮಗೆ ಕೊಡಲ್ಲ ಎಂದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಹೇಳಿದ್ದರು. ಈಗ ಪ್ರಧಾನಿಯಾಗಿದ್ದಾರೆ. ನಾವು ತೆರಿಗೆ ಪಾಲು ಕೇಳಿದರೆ ದೇಶ ಒಡೆಯುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಒಂದು ನಾಲಗೆ, ಈಗ ಪ್ರಧಾನಿಯಾದಾಗ ಇನ್ನೊಂದು ನಾಲಗೆ ಈ ರೀತಿಯ ಇಬ್ಬಂದಿ ನಾಲಗೆ ಇರಬಾರದು’ ಎಂದು ಅವರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT