ಕಲಬುರಗಿ: ‘ದೇಶ ಉಳಿಯಬೇಕಾದರೆ I.N.D.I.A ಮೈತ್ರಿಕೂಟ ಅಧಿಕಾರಕ್ಕೆ ಬರಬೇಕು ಎಂದು ರಾಜ್ಯಸಭೆಯ ವಿರೋಧಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಎನ್‌ವಿ ಮೈದಾನದಲ್ಲಿ ಶನಿವಾರ ನಡೆದ ‘ಗೃಹ ಜ್ಯೋತಿ’ ಯೋಜನೆಯ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಬ್ಬ ವ್ಯಕ್ತಿಗಾಗಿ I.N.D.I.A ಕೂಟ ಅಧಿಕಾರಕ್ಕೆ ಬರಬೇಕು ಎಂದು ಹೇಳುತ್ತಿಲ್ಲ. ಬಡವರು, ಮಹಿಳೆಯರು, ದಲಿತರು, ಕೂಲಿಕಾರ್ಮಿಕರು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಈ ಕೂಟ ಅಧಿಕಾರಕ್ಕೆ ಬರಬೇಕಿದೆ’ ಎಂದರು.
‘ಪ್ರಧಾನಿ ಮೋದಿ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಯೋಜನೆಗಳ ಬಗ್ಗೆಯೇ ಮಾತನಾಡುತ್ತಾರೆ. ಕರ್ನಾಟಕ ಸರ್ಕಾರ ಘೋಷಿಸಿದ ಗ್ಯಾರಂಟಿಗಳು ಏನೇ ಮಾಡಿದರು ಜಾರಿ ಮಾಡಲು ಸಾಧ್ಯ ಇಲ್ಲ. ಜಾರಿಯಾದರೆ ಕರ್ನಾಟಕ ದಿವಾಳಿಯಾಗುತ್ತದೆ ಎನ್ನುತ್ತಾರೆ. ತಮ್ಮ ಬಳಿ ಇರುವ ಗುಪ್ತಚರ ಏಜೆನ್ಸಿಗಳಿಂದ ಮಾಹಿತಿ ತರಿಸಿಕೊಂಡು ಮಾತನಾಡಲಿ. ಆಗ ನೈಜಾಂಶ ತಿಳಿಯುತ್ತದೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದ ಸರ್ಕಾರ ಐದು ಗ್ಯಾರಂಟಿಗಳ ಬಗ್ಗೆ ಇಡೀ ದೇಶವೇ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದೆ. ಕಾರ್ಯಕ್ರಮಕ್ಕೆ ಬರುವ ಮುನ್ನ ಹಿಮಾಚಲಪ್ರದೇಶದ ಮುಖ್ಯಮಂತ್ರಿ ನನ್ನನ್ನು ಭೇಟಿ ಮಾಡಿ, ಐದು ಗ್ಯಾರಂಟಿಯ ಭರವಸೆ ಕೊಟ್ಟು ಬಾರಿ ಬಹುಮತದಿಂದ ಜಯಿಸಿದ್ದೀರಾ. ಅವುಗಳನ್ನು ಹೇಗೆ ಜಾರಿಗೆ ತರುತ್ತೀರಾ ತಿಳಿಸಿ ಎಂದಿದ್ದರು. ಅದಕ್ಕೆ ನಾನು, ಮನಸು ಇದ್ದಲ್ಲಿ ಮಾರ್ಗ ಸಿಗುತ್ತದೆ. ಬಡವರ ಬಗ್ಗೆ ಚಿಂತನೆ ಮಾಡುವವರಿಗೆ ಹಣ ಹೊಂದಿಸುವ ಮಾರ್ಗ ಸಿಗುತ್ತದೆ. ಯೋಜನೆ ಜಾರಿ ಮತ್ತು ಹಣ ಹೊಂದಿಸುವ ಕೆಲಸವನ್ನು ನಮ್ಮ ಇಬ್ಬರೂ ನಾಯಕರು ಮಾಡುತ್ತಿದ್ದಾರೆ ಎಂದು ಅವರಿಗೆ ತಿಳಿಸಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.