ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನ ಹೇಳಿದರೆ ಚನ್ನಪಟ್ಟಣದಲ್ಲಿ ಸ್ಪರ್ಧಿಸುವುದು ಬಿಟ್ಟು ಬೇರೆ ವಿಧಿಯಿಲ್ಲ– ಡಿಕೆಶಿ

‘ಉಪ ಚುನಾವಣೆಯಲ್ಲಿ ಚನ್ನಪಟ್ಟಣದ ಜನ ನನ್ನ ಮೇಲೆ ಒಲವು ತೋರಿಸಿದರೆ, ನಾನು ಸ್ಪರ್ಧೆ ಮಾಡದೇ ಬೇರೆ ವಿಧಿ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Published 19 ಜೂನ್ 2024, 11:17 IST
Last Updated 19 ಜೂನ್ 2024, 11:17 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪ ಚುನಾವಣೆಯಲ್ಲಿ ಚನ್ನಪಟ್ಟಣದ ಜನ ನನ್ನ ಮೇಲೆ ಒಲವು ತೋರಿಸಿದರೆ, ಪಕ್ಷ ತೀರ್ಮಾನಿಸಿದರೆ ನಾನು ಸ್ಪರ್ಧೆ ಮಾಡದೇ ಬೇರೆ ವಿಧಿ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಚನ್ನಪಟ್ಟಣ ನನ್ನ ಹೃದಯದಲ್ಲಿದೆ. ಇದು ಈ ಹಿಂದೆ ಸಾತನೂರು ವಿಧಾನಸಭಾ ಕ್ಷೇತ್ರದ ಭಾಗವಾಗಿತ್ತು. ಆ ಮೂಲಕ, ಈ ಭಾಗ ನನಗೆ ರಾಜಕೀಯವಾಗಿ ಜನ್ಮ ನೀಡಿದ ಸ್ಥಳ. ಈ ಭಾಗದ ಜನ ಕಷ್ಟಕಾಲದಲ್ಲಿ ನಮಗೆ (ಕಾಂಗ್ರೆಸ್‌ಗೆ) ಹೆಚ್ಚಿನ ಮತ ನೀಡಿ ಬೆಂಬಲಿಸಿದ್ದಾರೆ. ನಾನು ಅವರ ಋಣ ತೀರಿಸಬೇಕು’ ಎಂದರು.

‘ಕನಕಪುರ ಯಾವ ರೀತಿ ಅಭಿವೃದ್ಧಿ ಮಾಡಿದ್ದೇನೋ ಅದಕ್ಕಿಂತ ಹೆಚ್ಚಿನ ಅಭಿವೃದ್ಧಿಗೆ ಅವಕಾಶವಿದೆ. ಹೀಗಾಗಿ, ಈ ಕ್ಷೇತ್ರದ ಮೇಲೆ ನನಗೆ ವಿಶೇಷವಾದ ಕಾಳಜಿ ಇದೆ. ಚನ್ನಪಟ್ಟಣ ಅಭಿವೃದ್ಧಿ ಹಾಗು ಬದಲಾವಣೆಗೆ ನಾನು ಬದ್ಧವಾಗಿದ್ದೇನೆ. ಅಲ್ಲಿನ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಮತದಾರರು ಮತ್ತು ನಾಯಕರ ಜತೆ ಮಾತನಾಡುತ್ತೇನೆ. ಅಲ್ಲಿನ ಜನ ಏನು ಹೇಳುತ್ತಾರೆ ಎಂದು ತಿಳಿದು ನಂತರ ತೀರ್ಮಾನಿಸುತ್ತೇನೆ’ ಎಂದು ತಿಳಿಸಿದರು.

ಚನ್ನಪಟ್ಟಣದಲ್ಲಿ ಸಹೋದರ ಡಿ.ಕೆ. ಸುರೇಶ್ ಅವರ ಸ್ಪರ್ಧೆ ಬಗ್ಗೆ ಕೇಳಿದಾಗ, ‘ಈ ವಿಚಾರವಾಗಿ ಇನ್ನೂ ತೀರ್ಮಾನ ಆಗಿಲ್ಲ. ನನಗೆ ಮತ ನೀಡಿ ಎಂದು ನಾನು ಅಲ್ಲಿನ ಮತದಾರರಿಗೆ ಮನವಿ ಮಾಡುತ್ತೇನೆ’ ಎಂದರು.

ಪರಿಶೀಲಿಸಿ ತೀರ್ಮಾನ

‘ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಿಸಿಲ್ಲ. ಪರಿಣಾಮ ಜಲ ಮಂಡಳಿ ದೊಡ್ಡ ನಷ್ಟಕ್ಕೆ ಸಿಲುಕಿದೆ. ಅಧಿಕಾರಿಗಳು ಸಾಧ್ಯಾಸಾಧ್ಯತೆಗಳ ಪರಿಶೀಲಿಸಿದ ನಂತರ ದರ ಏರಿಕೆ ವಿಚಾರವಾಗಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ಬೆಂಗಳೂರು ಜಲಮಂಡಳಿಗೆ ಆರ್ಥಿಕ ನೆರವು ನೀಡಲು ಯಾವುದೇ ಬ್ಯಾಂಕ್‌ಗಳು ಮುಂದೆ ಬರುತ್ತಿಲ್ಲ. ಸದ್ಯದಲ್ಲೇ ಕಾವೇರಿ ಐದನೇ ಹಂತದ ಯೋಜನೆ ಪೂರ್ಣಗೊಳ್ಳಲಿದೆ’ ಎಂದರು.

‘ಪ್ರತಿವರ್ಷ ನಷ್ಟ ಎದುರಾಗುತ್ತಿರುವುದರಿಂದ ಪರಿಹಾರದ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ. ವಿಶ್ವ ಬ್ಯಾಂಕ್ ಸೇರಿದಂತೆ ಎಲ್ಲ ಸಂಸ್ಥೆಗಳು ಮಂಡಳಿ ನಷ್ಟದಿಂದ ಮೇಲೆ ಬರುವ ಪರ್ಯಾಯ ವಿಧಾನವನ್ನು ಕೇಳುತ್ತಿವೆ. ಕಾವೇರಿಯ ಆರು ಟಿಎಂಸಿ ಅಡಿ ನೀರನ್ನು ಬೆಂಗಳೂರಿಗೆ ಬಳಸಲು ನಾನು ಆದೇಶ ಹೊರಡಿಸಿದ್ದು, ಮತ್ತೊಂದು ಹಂತದ ಯೋಜನೆ ಅಗತ್ಯವಿದೆ. ಹೀಗಾಗಿ, ನೀರಿನ ದರ ಪರಿಷ್ಕರಣೆ ವಿಚಾರವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ಪ್ರಧಾನಿಯಿಂದ ಅನಾವರಣ ಮಾಡಿಸಿದ್ದು ಯಾಕೆ?: ‘ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗರು ಕೈ ಹಿಡಿಯಲಿಲ್ಲ ಎಂದು ಕೆಂಪೇಗೌಡ ಜಯಂತಿ ಆಚರಣೆಗೆ ಹೆಚ್ಚಿನ ಅನುದಾನ ನೀಡಲಾಗಿದೆ’ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ಬಿಜೆಪಿಯವರು ವಿಮಾನ ನಿಲ್ದಾಣದ ಬಳಿ ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿದ್ದು ಯಾಕೆ? ಆ ಕಾರ್ಯಕ್ರಮಕ್ಕೆ ಜನ ಸೇರಿಸಲಾಗದೆ ಬಲವಂತವಾಗಿ ಶಾಲಾ, ಕಾಲೇಜು ಮಕ್ಕಳನ್ನು ಕರೆಸಿದ್ದು ಯಾಕೆ? ಆ ಕಾರ್ಯಕ್ರಮದಲ್ಲಿ ಪ್ರತಿಮೆಗೆ ತಗುಲಿದ ವೆಚ್ಚಕ್ಕಿಂತ ಉದ್ಘಾಟನಾ ಕಾರ್ಯಕ್ರಮದ ವೆಚ್ಚವೇ ಹೆಚ್ಚಾಗಿತ್ತು. ಈ ಬಗ್ಗೆ ಕೃಷ್ಣ ಬೈರೇಗೌಡರನ್ನು ಕೇಳಿ ಸಂಪೂರ್ಣ ದಾಖಲೆ ನೀಡುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT