ಬೆಂಗಳೂರು: ‘ಯಾವುದೇ ಪ್ರಕರಣದ ವಿಚಾರಣೆಯಲ್ಲಿ ವಕೀಲರು ತಮ್ಮ ಕೇಸುಗಳನ್ನು ಮೆರಿಟ್ ಮೂಲಕ ಪ್ರತಿಪಾದಿಸಿ ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿ, ಸಂತುಷ್ಟಗೊಳಿಸಬೇಕೇ ಹೊರತು ಏರಿದ ಧ್ವನಿಯಿಂದ ವಾದ ಮಂಡಿಸಿದಾಕ್ಷಣ ನ್ಯಾಯ ಸಿಗುವುದಿಲ್ಲ’ ಎಂದು ನಿವೃತ್ತಿ ಹೊಂದುತ್ತಿರುವ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಕಿರಿಯ ವಕೀಲರಿಗೆ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್ಬಿಸಿ) ವತಿಯಿಂದ ಕೋರ್ಟ್ ಹಾಲ್ 1ರಲ್ಲಿ ಶುಕ್ರವಾರ ತಮಗೆ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾನು ಮೊದಲಿಗೆ ತಾಲ್ಲೂಕು ಮಟ್ಟದಲ್ಲಿ ವಕೀಲಿಕೆ ನಡೆಸಿ ನಂತರ 1995ರಲ್ಲಿ ಸಿವಿಲ್ ನ್ಯಾಯಾಧೀಶನಾಗಿ ಇಂದು ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಯಾರನ್ನೂ ನೋಯಿಸಿಲ್ಲ’ ಎಂದು ಭಾವುಕರಾಗಿ ನುಡಿದರು.

ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರು ಶಿವಶಂಕರೇಗೌಡ ಅವರ ಕಾನೂನು ಜ್ಞಾನ ಮತ್ತು ಆಡಳಿತ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಎಸ್ಬಿಸಿ ಅಧ್ಯಕ್ಷ ಎಚ್.ಎಲ್.ವಿಶಾಲ ರಘು, ‘ನ್ಯಾ.ಶಿವಶಂಕರೇಗೌಡ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ತಲಕಾಡುವಿನಂತಹ ಗ್ರಾಮೀಣ ಪ್ರದೇಶದವರು. ಕೃಷಿಕ ಕುಟುಂಬದಿಂದ ಗ್ರಾಮೀಣ ಭಾಗದಲ್ಲಿ ವಕೀಲಿಕೆ ನಡೆಸಿ ಹೈಕೋರ್ಟ್ ನ್ಯಾಯಮೂರ್ತಿಯಾಗುವರೆಗಿನ ಅವರ ಪಯಣ ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕ’ ಎಂದರು.

‘ನ್ಯಾ.ಶಿವಶಂಕರೇಗೌಡ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ತಮ್ಮ ಕಿರು ಅವಧಿಯಲ್ಲಿ ಹಲವು ಮಹತ್ವದ ತೀರ್ಪುಗಳನ್ನು ಒಳಗೊಂಡಂತೆ ಒಟ್ಟು 4,600ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ’ ಎಂದು ವಿಶಾಲ ರಘು ನೆನಪಿಸಿದರು.

ಜೀವಾ ಆತ್ಮಹತ್ಯೆ: ಕನಕಲಕ್ಷ್ಮಿ ಬಂಧಿಸಲು ವಕೀಲರ ಆಗ್ರಹ

ಬೆಂಗಳೂರು: ‘ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದಲ್ಲಿ ಡಿವೈಎಸ್ಪಿ ಕನಕಲಕ್ಷ್ಮಿ ಅವರು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸುತ್ತಿದ್ದು ಕೂಡಲೇ ಅವರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಬೆಂಗಳೂರು ವಕೀಲರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ನೇತೃತ್ವದಲ್ಲಿ ನೂರಾರು ವಕೀಲರು ಬೆಳಿಗ್ಗೆ ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಜಮಾವಣೆಗೊಂಡು ಭಿತ್ತಿಪತ್ರ ಬ್ಯಾನರ್ಗಳನ್ನು ಹಿಡಿದು ‘ಜೀವಾ ಅವರ ಸಾವಿಗೆ ಕಾರಣರಾದವರನ್ನು ಬಂಧಿಸಿ ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು. ‘ಜನಸಾಮಾನ್ಯರಿಗೆ ಒಂದು ಕಾನೂನು ಕನಕಲಕ್ಷ್ಮಿ ಅವರಿಗೆ ಒಂದು ಕಾನೂನೇ’ ಎಂದು ಪ್ರಶ್ನಿಸಿದ ವಿವೇಕ್ ರೆಡ್ಡಿ ‘ಕನಕಲಕ್ಷ್ಮಿ ಅವರ ಕಿರುಕುಳದಿಂದಲೇ ಜೀವಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ವಿಶೇಷ ತನಿಖಾ ತಂಡ (ಎಸ್ಐಟಿ) ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕನಕಲಕ್ಷ್ಮಿ ಅವರು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿರುವುದಕ್ಕೆ ಸಾಕ್ಷಿಯಾಗಿ ಲಾಟರಿ ಟಿಕೆಟ್ ಮಧುಗಿರಿ ಮತ್ತು ರೈಸ್ ಪುಲ್ಲಿಂಗ್ ಪ್ರಕರಣಗಳು ನಮ್ಮ ಕಣ್ಣಮುಂದಿವೆ’ ಎಂದರು. ‘ಕನಕಲಕ್ಷ್ಮಿ ವಿರುದ್ಧ ಹಲವಾರು ಪ್ರಕರಣಗಳು ಇದ್ದರೂ ಈ ಪ್ರಕರಣದಲ್ಲೂ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅವರ ವಿರುದ್ಧ ಎಸ್ಐಟಿ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸುತ್ತಿದ್ದು ಕೂಡಲೇ ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಬಿಬಿಎಂಪಿ ಜಾಗದ ತಕರಾರು: ವಿವರಣೆಗೆ ನಿರ್ದೇಶನ

ಬೆಂಗಳೂರು: ‘ಕೋರಮಂಗಲದ ಸರ್ವೆ ನಂಬರ್ 9 ಮತ್ತು 10ರ ವ್ಯಾಪ್ತಿಯ ಜಾಗವನ್ನು ಆಟದ ಮೈದಾನವನ್ನಾಗಿ ಬಳಕೆ ಮಾಡಲಾಗುತ್ತಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ನಿಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ನಿರ್ದೇಶಿಸಿದೆ. ಈ ಸಂಬಂಧ ‘ಡಾ.ಬಿ.ಆರ್.ಅಂಬೇಡ್ಕರ್ ಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲ್ಯಾಣ ಸಂಘ’ದ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಡೇವಿಡ್ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಪಾಸ್ಪೋರ್ಟ್ ಕಚೇರಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ ಕಾಮತ್ ‘ಇದೊಂದು ಸಿವಿಲ್ ವ್ಯಾಜ್ಯವಾಗಿದ್ದು ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ರೂಪದಲ್ಲಿ ಸಲ್ಲಿಸಲಾಗಿದೆ. ಜಾಗವು ಬಿಬಿಎಂಪಿಗೆ ಸೇರಿದ್ದು ಎಂದು ಅರ್ಜಿದಾರರು ಹೇಳುತ್ತಾರೆ. ಆದರೆ ಜಾಗ ತನ್ನದು ಎಂದು ಬಿಬಿಎಂಪಿ ಈವರೆಗೆ ಹೇಳಿಲ್ಲ. ಈ ಜಾಗವು 1993ರಲ್ಲಿ ಪಾಸ್ಪೋರ್ಟ್ ಕಚೇರಿಗೆ ಹಂಚಿಕೆಯಾಗಿದೆ. ಸರ್ವೆ ನಂಬರ್ ಗೊಂದಲವನ್ನು 2023ರಲ್ಲೇ ಸರಿಪಡಿಸಲಾಗಿದೆ’ ಎಂದು ವಿವರಿಸಿದರು. ಇದನ್ನು ಆಲಿಸಿದ ನ್ಯಾಯಪೀಠ ‘ಈ ಬಗ್ಗೆ ಸೂಕ್ತ ವಿವರಣೆ ನೀಡಿ’ ಎಂದು ಬಿಬಿಎಂಪಿ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ಫೆಬ್ರುವರಿ 20ಕ್ಕೆ ಮುಂದೂಡಿತು. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಸದಾನಂದ ಜಿ.ಶಾಸ್ತ್ರಿ ವಾದ ಮಂಡಿಸಿದರು. ಕೋರಿಕೆ ಏನು?: ‘ಕೋರಮಂಗಲದ ಸರ್ವೇ ನಂಬರ್ 10ರಲ್ಲಿನ ಬಯಲು ಪ್ರದೇಶವನ್ನು 70 ವರ್ಷಗಳಿಂದ ಆಟದ ಮೈದಾನವನ್ನಾಗಿ ಬಳಕೆ ಮಾಡಲಾಗುತ್ತಿದೆ. ಈಜೀಪುರದ ಸುತ್ತಲಿನ 30ಕ್ಕೂ ಅಧಿಕ ಶಾಲೆಗಳ 10ರಿಂದ 20 ಸಾವಿರ ವಿದ್ಯಾರ್ಥಿಗಳು ಈ ಆಟದ ಮೈದಾನವನ್ನು ಉಪಯೋಗಿಸುತ್ತಿದ್ದಾರೆ. ಇದೀಗ ಪಾಸ್ಪೋರ್ಟ್ ಸೇವಾ ಕೇಂದ್ರ ಈ ಮೈದಾನದಲ್ಲಿ ಸಭಾಂಗಣ ನಿರ್ಮಿಸುತ್ತಿದೆ. ಕಾಂಪೌಂಡ್ ಕಟ್ಟಿ 10 ತಿಂಗಳಿಂದ ಪ್ರವೇಶ ನಿರ್ಬಂಧಿಸಿದೆ. ಆದ್ದರಿಂದ ಈ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶಿಸಬೇಕು. ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಪಾಸ್ಪೋರ್ಟ್ ಸೇವಾ ಕೇಂದ್ರಕ್ಕೆ ಸೂಚಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ವರದಕ್ಷಿಣೆ ಸಾವುಗಳಿಗೆ ಕೊನೆಯಿಲ್ಲವೇ?: ಹೈಕೋರ್ಟ್ ಕಳವಳ

ಬೆಂಗಳೂರು: ‘ನಮ್ಮ ಸಮಾಜದಲ್ಲಿ ವರದಕ್ಷಿಣೆ ಎಂಬ ಪಿಡುಗು ಇಂದಿಗೂ ಚಾಲ್ತಿಯಲ್ಲಿರುವುದು ದುರುದೃಷ್ಟಕರ ಸಂಗತಿ’ ಎಂದು ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್ ಈ ಸಂಬಂಧ ಪತಿ ಮತ್ತು ಅವರ ಸಂಬಂಧಿಗಳ ವಿರುದ್ಧದ ವರದಕ್ಷಿಣೆ ಕಿರುಕುಳ ಆರೋಪದ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದೆ. ‘ನಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಬೆಂಗಳೂರಿನ ನಾಗಸಂದ್ರದ ಸಿ.ವಿ.ವಿಕಾಸ್ ಮತ್ತು ಅವರ ತಂದೆ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ‘ಆಧುನಿಕ ಯುಗದಲ್ಲಿ ಸಮಾಜ ಎಷ್ಟೆಲ್ಲಾ ಮುಂದುವರಿದಿದೆ. ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸುತ್ತಿದ್ದಾಳೆ. ಆದರೂ ಈ ರೀತಿಯ ವರದಕ್ಷಿಣೆ ಸಾವಿನ ಘಟನೆಗಳು ಸಮಾಜವನ್ನು ಘಾಸಿಗೊಳಿಸುತ್ತಿವೆ’ ಎಂದು ನ್ಯಾಯಪೀಠ ದಿಗ್ಭ್ರಮೆ ವ್ಯಕ್ತಪಡಿಸಿದೆ. ‘ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಮರಣ ಪತ್ರ ಬರೆದಿಟ್ಟು ಸಾವನ್ನಪ್ಪುವ ಪ್ರಕರಣಗಳಲ್ಲಿ ಯಾರ ಮೇಲೂ ನಿರ್ದಿಷ್ಟ ಆರೋಪಗಳಿರದಿದ್ದರೂ; ಪತಿ ಮತ್ತವರ ಕುಟುಂಬದ ಸದಸ್ಯರ ವಿರುದ್ಧದ ಶಿಕ್ಷೆ ದೃಢಪಡಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿದೆ’ ಎಂಬುದನ್ನು ಉಲ್ಲೇಖಿಸಿರುವ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ. ಪ್ರಕರಣವೇನು?: ಆಂಧ್ರದ ಅನಂತಪುರ ಜಿಲ್ಲೆಯ ಅಗಳಿ ಗ್ರಾಮದ ಆರ್.ರೋಜಾ ಮತ್ತು ನಾಗಸಂದ್ರದ ವಿಕಾಸ್ 2019ರ ಅಕ್ಟೋಬರ್ 24ರಂದು ವಿವಾಹವಾಗಿದ್ದರು. ಬಳಿಕ ಪತ್ನಿ ಗಂಡನ ಮನೆಯಲ್ಲಿ ನೆಲೆಸಿದ್ದರು. ಮದುವೆಯಾದ 13 ತಿಂಗಳ ಬಳಿಕ ರೋಜಾ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಘಟನೆ ಕುರಿತಂತೆ ರೋಜಾ ತಂದೆ ರಾಮಕೃಷ್ಣ ರೆಡ್ಡಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣ ಕಿರುಕುಳದ ಕೊಲೆ ಆರೋಪದಲ್ಲಿ ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.