ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣುವರ್ಧನ್ ಸ್ಮಾರಕ ಭವನ’ ಉದ್ಘಾಟನೆ: ಅಭಿಮಾನಿಗಳಲ್ಲಿ‌ ಸಂತಸದ ಹೊನಲು

ಅಭಿಮಾನಿಗಳಲ್ಲಿ‌ ಸಂತಸದ ಹೊನಲು l ಸ್ಮಾರಕ ವೀಕ್ಷಣೆಗೆ ನೂಕುನುಗ್ಗಲು
Last Updated 29 ಜನವರಿ 2023, 19:31 IST
ಅಕ್ಷರ ಗಾತ್ರ

ಮೈಸೂರು: ಚಲನಚಿತ್ರ ನಟ ವಿಷ್ಣುವರ್ಧನ್ ಅಭಿಮಾನಿಗಳ ಜಯಘೋಷದ ನಡುವೆ ‘ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ಭವನ’ ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಲೋಕಾರ್ಪಣೆಗೊಳಿಸಿದರು.

ತಾಲ್ಲೂಕಿನ ಹಾಲಾಳು ಗ್ರಾಮದ ಉದ್ಬೂರು ಗೇಟ್ ಬಳಿ ನಿರ್ಮಿಸಿರುವ ಸ್ಮಾರಕದಲ್ಲಿ ‘ಆಪ್ತರಕ್ಷಕ’ ಚಲನಚಿತ್ರ ಪಾತ್ರದ ಮಾದರಿಯಲ್ಲಿ ಕೆತ್ತಲಾದ 7 ಅಡಿ ಎತ್ತರದ ಪ್ರತಿಮೆಯನ್ನೂ ಅನಾವರಣಗೊಳಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘70ರ ದಶಕದಲ್ಲಿ ‘ನಾಗರಹಾವು’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ 4 ದಶಕದ ಕಾಲ ಚಿತ್ರಗಳ ಮೂಲಕ‌ ಕನ್ನಡ ಸಂಸ್ಕೃತಿಯ ಧ್ವಜ ಎತ್ತಿ‌ಹಿಡಿದರು. ಅವರ ಅಭಿಮಾನಿಯಾಗಿ ಇಲ್ಲಿಗೆ ಬಂದಿದ್ದೇನೆ’ ಎಂದರು.

‘ಮಾನವೀಯತೆ ಮೆರೆದ ವಿಷ್ಣು ಅವರ ಶಕ್ತಿಯಾಗಿದ್ದವರು ಭಾರತಿ. ಸ್ಮಾರಕ ನಿರ್ಮಾಣಕ್ಕೆ ಸ್ಥಳ ವಿವಾದ ಸೇರಿ
ದಂತೆ ಹಲವು ಕಷ್ಟಗಳು‌ ಎದುರಾದಾಗ ಮೈಸೂರಿನಲ್ಲೇ ಸ್ಥಾಪಿಸುವ ಗಟ್ಟಿ ನಿಲುವು ತೆಗೆದುಕೊಂಡರು’ ಎಂದು ಹೇಳಿದರು.

‘ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿ ಆಗಿದ್ದಾಗ ₹ 11 ಕೋಟಿ ಅನುದಾನ ನೀಡಿದ್ದರಿಂದ ಸ್ಮಾರಕ ಎಲ್ಲರ ಎದುರು ಭವ್ಯವಾಗಿ ನಿಂತಿದೆ. ಸಿನಿಮಾ ಕಲಿಕಾ ಸಂಸ್ಥೆ ನಿರ್ಮಾಣ ಕನಸಿದ್ದು, ಅದಕ್ಕೂ ಸರ್ಕಾರದ ಸಹಕಾರವಿದೆ' ಎಂದು ಭರವಸೆ ನೀಡಿದರು.‌

ಬೊಮ್ಮಾಯಿ ಅವರೇ ಬರಲಿ: ನಟಿ ಭಾರತಿ ಮಾತನಾಡಿ, ‘ದಶಕದ ತಪಸ್ಸಿಗೆಫಲ ಸಿಕ್ಕಿದೆ. ಹೆರಿಗೆ ನೋವು ಮಗುವಿನ ಮುಖ‌ ನೋಡಿದಾಗ ನಿವಾರಣೆಯಾಗುವಂತೆ ಸಂತೃಪ್ತ ಭಾವ ಮೂಡಿದೆ. ಬೊಮ್ಮಾಯಿ ಅವರು ಸ್ಮಾರಕ ನಿರ್ಮಾಣಕ್ಕೆ ಒತ್ತಾಸೆಯಾಗಿ‌ ನಿಂತರು. ಅವರು ಮತ್ತೆ ಬಂದರೆ ಒಳ್ಳೆಯದೇ ಅಲ್ಲವೇ?’ ಎಂದರು.

ನಟಿ ಭವ್ಯಾ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ರಮೇಶ್ ಭಟ್ ಹಾಗೂ ವಿಷ್ಣುವರ್ಧನ್ ಕುಟುಂಬದ ಸದಸ್ಯರು ಇದ್ದರು.

ಸ್ಮಾರಕ ವೀಕ್ಷಣೆಗೆ ನೂಕುನುಗ್ಗಲು: ನಾಡಿನ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಅಭಿಮಾನಿಗಳಿ‌ಗೆ ಆರಂಭದಲ್ಲಿ ಸ್ಮಾರಕ ವೀಕ್ಷಣೆಗೆ ಅವಕಾಶ ಸಿಗದೆ‌ ನಿರಾಶರಾದರು. ಸ್ಥಳದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

‘ಸ್ಮಾರಕ ಒಳಗೆ ಭದ್ರತೆಯ ವ್ಯವಸ್ಥೆ ಇಲ್ಲ. ಹೀಗಾಗಿ, ನಾಳೆ ಬರುವಂತೆ ಪೊಲೀಸರು ಹೇಳಿದ್ದಾರೆ. ದಯವಿಟ್ಟು ಸಹಕರಿಸಿ’ ಎಂದು ನಟ ಅನಿರುದ್ಧ ಮನವೊಲಿಸಲು ಯತ್ನಿಸಿದರು‌. ಆದರೂ ಅಭಿಮಾನಿಗಳು ಆವರಣಕ್ಕೆ ನುಗ್ಗಿ ಸ್ಮಾರಕ ವೀಕ್ಷಿಸಿದರು. ಈ ವೇಳೆ ನೂಕುನುಗ್ಗಲು ಉಂಟಾಗಿತ್ತು.

‘ವಿಷ್ಣು ಕರ್ನಾಟಕ ರತ್ನ ಅಲ್ಲವೇ?’

ವಿಷ್ಣುಗೆ ಕರ್ನಾಟಕ ರತ್ನ ನೀಡಬೇಕು ಎಂಬ ಒತ್ತಾಯ ಅಭಿಮಾನಿಗಳಿಂದ ಕೇಳಿಬಂತು.

‘ಸಾಹಸಸಿಂಹ ವಿಷ್ಣುವರ್ಧನ್‌ ಅವರು ಕರ್ನಾಟಕ ರತ್ನ ಅಲ್ಲವೇ' ಎಂಬ ಪ್ಲೆಕಾರ್ಡ್ ಹಿಡಿದು ಮುಖ್ಯಮಂತ್ರಿ ಅವರ ಗಮನ‌ಸೆಳೆದರು.

‘ನಿಮ್ಮ‌ ಭಾವನೆಗಳಿಗೆ ಮುಂದಿನ ದಿನಗಳಲ್ಲಿ ಸಕಾರಾತ್ಮಕವಾಗಿ‌ ಸ್ಪಂದಿಸಲಾಗುವುದು’ ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರಿಂದ ಅಭಿಮಾನಿಗಳು ಸುಮ್ಮನಾದರು.

ಇದಕ್ಕೂ ಮುನ್ನ, ಮೈಸೂರಿನಿಂದ ಸ್ಮಾರಕ ಸ್ಥಳದವರೆಗೆ ಅಭಿಮಾನಿಗಳು ಪಲ್ಲಕ್ಕಿ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT