ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆ, ಬಟ್ಟೆಗಳ ಬದಲಿಗೆ, ಪುಸ್ತಕ ಖರೀದಿಸಿ: ಸುಧಾಮೂರ್ತಿ

Published 24 ಮಾರ್ಚ್ 2024, 8:30 IST
Last Updated 24 ಮಾರ್ಚ್ 2024, 8:30 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರತಿವರ್ಷ ಯುಗಾದಿ, ದೀಪಾವಳಿಯಲ್ಲಿ ಮಹಿಳೆಯರು ಸೀರೆ, ಹೊಸ ಬಟ್ಟೆ ಖರೀದಿಸಿ ಸಂಭ್ರಮಿಸುತ್ತಾರೆ. ಆದರೆ, ಒಂದು ಹಬ್ಬದಲ್ಲಿ ಬಟ್ಟೆಗಳ ಬದಲಿಗೆ, ಪುಸ್ತಕ ಖರೀದಿಸಿ ಓದಿ’ ಎಂದು ರಾಜ್ಯಸಭಾ ಸದಸ್ಯೆ, ಲೇಖಕಿ ಸುಧಾಮೂರ್ತಿ ಕರೆ ನೀಡಿದರು.

ಇಲ್ಲಿನ ಶ್ರೀಕೃಷ್ಣದೇವರಾಯ ವೃತ್ತದ ಬಳಿಯ ಸಪ್ನ ಬುಕ್‌ಹೌಸ್‌ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುಧಾಮೂರ್ತಿ ಅವರೊಂದಿಗೆ ‘ಮನದ ಮಾತು’ ಮುಕ್ತ ಮಾತುಕತೆ, ಸಂವಾದ ಮತ್ತು ಸಲ್ಲಾಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡಿಗರಷ್ಟೇ ಅಲ್ಲ;ಮರಾಠಿ ಭಾಷಿಕ ಮಹಿಳೆಯರು ಪುಸ್ತಕ ಖರೀದಿಸಿ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ನಾನು ಬರೆದ ಪುಸ್ತಕವನ್ನೇ ಖರೀದಿಸಿ ಎಂದಲ್ಲ. ನಿಮಗಿಷ್ಟವಾದ ಪುಸ್ತಕವನ್ನು ಕೊಂಡು ಓದಿ’ ಎಂದರು.

‘ಸಂಕಷ್ಟದಲ್ಲಿ ಇರುವವರಿಗೆ ನೆರವಿನಹಸ್ತ ಚಾಚಲು ಹಣದ ಅವಶ್ಯಕತೆಯೇ ಇಲ್ಲ. ಬದಲಿಗೆ, ನಮಗೆ ಸಹಾಯ ಮಾಡುವ ಮನಸ್ಸು ಇರಬೇಕು. ದಾನ ಮಾಡಲು ಸಹೃದಯ ಇರಬೇಕು. ಯಾರಿಗೆ ಸಹೃದ ಇದೆಯೋ, ಮತ್ತೊಬ್ಬರ ಕಷ್ಟ ಕಂಡು ಮನಸ್ಸು ಕರಗುತ್ತದೆಯೋ, ಅಂಥವರು ಮಾತ್ರ ಸಹಾಯ ಮಾಡಬಲ್ಲರು’ ಎಂದು ತಿಳಿಸಿದರು.

‘ಬದುಕಿನಲ್ಲಿ ಶ್ರೀಮಂತಿಕೆ ಮತ್ತು ಸೌಂದರ್ಯದ ಬಗ್ಗೆ ಅತಿಯಾದ ವ್ಯಾಮೋಹ ಬೇಡ. ನಮ್ಮ ಜೀವನ ತೃಪ್ತಿದಾಯಕವಾಗಿರಬೇಕು. ನಿತ್ಯ ತೃಪ್ತರಾಗಬೇಕು. ಆಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದು ಸಲಹೆ ನೀಡಿದರು.

‘ಬರವಣಿಗೆ ಎಂಬುದು ಸೃಜನಾತ್ಮಕ ಕಲೆ. ಹಾಗಾಗಿ ನಾನು ಪುಸ್ತಕಗಳನ್ನು ಬರೆಯುತ್ತೇನೆ. ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣ, ಲಂಡನ್, ದಕ್ಷಿಣ ಆಫ್ರಿಕಾ, ಅಮೆರಿಕ ಮತ್ತಿತರ ಕಡೆ ನನ್ನ ಪುಸ್ತಕಗಳನ್ನು ಮಾರಾಟವಾಗುವುದನ್ನು ಕಂಡು ಖುಷಿಯಾಗಿದೆ’ ಎಂದರು.

‘ನನಗೆ ಉತ್ತರ ಕರ್ನಾಟಕವೆಂದರೆ ಬಹಳ ಪ್ರೀತಿ. ಇಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನನಗೆ ಇಷ್ಟೊಂದು ಪದವಿ, ಗೌರವ ಸಿಕ್ಕಿದ್ದು ನಿಮ್ಮೆಲ್ಲರ ಪ್ರೀತಿಯಿಂದ. ನಾನು ಅದ್ಭುತವಲ್ಲ. ನನ್ನ ಕನ್ನಡ ಭಾಷೆ ಅದ್ಭುತ’ ಎಂದ ಸುಧಾಮೂರ್ತಿ, ‘ನಾನು ಕೋಟ್ಯಂತರ ರೂಪಾಯಿ ಹಣ ಗಳಿಸಿರಬಹುದು. ಆದರೆ, ನನಗೆ ಶ್ರೀಮಂತರೊಬ್ಬರ ಪತ್ನಿ ಎನ್ನುವುದಕ್ಕಿಂತ ಲೇಖಕಿ ಎಂದು ಕರೆಯಿಸಿಕೊಳ್ಳುವುದಕ್ಕೆ ಹೆಮ್ಮೆ’ ಎಂದು ಹೇಳಿದರು.

ಪತ್ರಕರ್ತ ವಿಶ್ವೇಶ್ವರ ಭಟ್‌, ‘ಸುಧಾಮೂರ್ತಿ ತಮ್ಮ ವ್ಯಕ್ತಿತ್ವದ ಮೂಲಕವೇ ಎಲ್ಲರಲ್ಲೂ ಬೆರುಗು ಮೂಡಿಸುತ್ತಾರೆ. ಇನ್ಫೋಸಿಸ್‌ ಫೌಂಡೇಷನ್‌ ಮೂಲಕ ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ. ಒಂದು ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಸುಧಾಮೂರ್ತಿ ರಚಿಸಿದ 46 ಕೃತಿಗಳು ಭಾರತದಲ್ಲಿ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಕವನ ಹೊರತುಪಡಿಸಿ, ಎಲ್ಲ ಪ್ರಕಾರಗಳ ಸಾಹಿತ್ಯ ಕೃಷಿ ಮಾಡಿದ್ದಾರೆ’ ಎಂದರು.

ಸಪ್ನ ಬುಕ್‌ಹೌಸ್‌ ಕನ್ನಡ ವಿಭಾಗದ ಮುಖ್ಯಸ್ಥ ಆರ್.ದೊಡ್ಡೇಗೌಡ, ಬೆಳಗಾವಿ ಶಾಖೆ ವ್ಯವಸ್ಥಾಪಕ ರಘು ಎಂ.ವಿ ಇತರರಿದ್ದರು.

ನಂತರದಲ್ಲಿ, ತಮ್ಮ ವೈಯಕ್ತಿಕ ಬದುಕು, ವೃತ್ತಿ ಬದುಕು, ಸಾಹಿತ್ಯ ಕೃಷಿಗೆ ಸಂಬಂಧಿಸಿದ ಸಭಿಕರ ಹಲವು ಪ್ರಶ್ನೆಗಳಿಗೆ ಸುಧಾಮೂರ್ತಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT