ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ಪ್ರಕರಣ| ಐ.ಟಿ ಎಚ್ಚರಿಕೆ ನಿರ್ಲಕ್ಷಿಸಲಾಯಿತೇ?

ಕಂಪನಿ ಚಟುವಟಿಕೆ ಕುರಿತು ಮಾಹಿತಿ ನೀಡಿದ್ದ ಅಧಿಕಾರಿಗಳು
Last Updated 20 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಐ ಮಾನಿಟರಿ ಅಡ್ವೈಸರಿ‘ (ಐಎಂಎ) ಕಂಪನಿಯ ಸಂಶಯಾಸ್ಪದ ಹಣಕಾಸು ವಹಿವಾಟು ಕುರಿತು ಆದಾಯ ತೆರಿಗೆ ಇಲಾಖೆ ನೀಡಿದ್ದ ಎಚ್ಚರಿಕೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಉಪೇಕ್ಷಿಸಿದ್ದು, ಮಹಮದ್‌ ಮನ್ಸೂರ್‌ ಖಾನ್‌ ಪರಾರಿಯಾಗಲು ನೆರವಾಯಿತು ಎಂಬ ಕಳವಳಕಾರಿ ಸಂಗತಿ ಬಯಲಾಗಿದೆ.

‘ನೋಟು ರದ್ದತಿ ಬಳಿಕ ‘ಐಎಂಎ‘ ಭಾರಿ ಪ್ರಮಾಣದಲ್ಲಿ ಹಣ ಸಂಗ್ರಹಿಸಿದೆ’ ಎಂಬ ಸುಳಿವು ಆಧರಿಸಿ ಕಂಪನಿಯ ಕಚೇರಿಗಳ ಮೇಲೆ 2017ರ ಮಾರ್ಚ್‌ 8ರಂದು ಐ.ಟಿ ದಾಳಿ ನಡೆಸಿತ್ತು. ಆ ಸಮಯದಲ್ಲಿ ಲೆಕ್ಕಕ್ಕೆ ಸಿಗದ ಅಪಾರ ಹಣ ಪತ್ತೆಯಾದ ಕಾರಣ ಕಂಪನಿ ಹಣಕಾಸು ವಹಿವಾಟುಗಳ ಬಗ್ಗೆ ಅನುಮಾನ ದಟ್ಟವಾಗಿತ್ತು.

ಪರಿಣಾಮವಾಗಿ ಕಸ್ಟಮ್ಸ್‌ ಮತ್ತು ಜಿಎಸ್‌ಟಿ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಕಂಪನಿಗಳ ರಿಜಿಸ್ಟ್ರಾರ್‌, ಸಹಕಾರಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ,ಜಾರಿ ನಿರ್ದೇಶನಾಲಯ ಮತ್ತು ಸಿಐಡಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಐ.ಟಿ ಎಚ್ಚರಿಸಿತ್ತು. ಆದರೂ, ಕ್ರಮಕ್ಕೆ ಮುಂದಾಗದೆ ಈ ಇಲಾಖೆಗಳು ಜಾಣಮೌನ ವಹಿಸಿದವು ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅದೇ ವರ್ಷ ಸೆಪ್ಟೆಂಬರ್‌ 7ರಂದು ಸೇರಿದ್ದ ‘ಪ್ರಾದೇಶಿಕ ಆರ್ಥಿಕ ಗುಪ್ತಚರ ಸಭೆ’ಯಲ್ಲಿ (ರೀಜನಲ್‌ ಎಕನಾಮಿಕ್‌ ಇಂಟಲಿಜೆನ್ಸ್‌ ಮೀಟಿಂಗ್‌) ಐಎಂಎ ಕಂಪನಿ ಚಟುವಟಿಕೆ ಕುರಿತು‍ಚರ್ಚೆಯಾಗಿತ್ತು. ಇದಲ್ಲದೆ, ಆರ್‌ಬಿಐನ ರಾಜ್ಯ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲೂ ವಿಷಯ ಪ್ರಸ್ತಾಪವಾಗಿತ್ತು. ಅನೇಕ ಉನ್ನತ ಮಟ್ಟದ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರು.

‘ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ’ (ಆರ್‌ಬಿಐ) ಕೂಡಾ ಐ.ಟಿ ದಾಳಿಗೆ ಮೊದಲೇ ಕಂಪನಿಯ ವಹಿವಾಟು ಕುರಿತು ಜಾಗ್ರತೆ ವಹಿಸುವಂತೆ ಹೇಳಿತ್ತು. ಇಷ್ಟಾದ ಮೇಲೂ ಯಾವ ಇಲಾಖೆಯೂ ಏಕೆ ಐಎಂಎಯ ಸಂಶಯಾಸ್ಪದ ವಹಿವಾಟು ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ? ಕ್ರಮಕ್ಕೆ ಏಕೆ ಮುಂದಾಗಲಿಲ್ಲ? ಎಂಬುದು ಅತ್ಯಂತ ಅಚ್ಚರಿಯ ಸಂಗತಿ.

ಎರಡು ವರ್ಷ ಮೊದಲೇ ಐ.ಟಿ ನೀಡಿದ್ದ ಎಚ್ಚರಿಕೆ ಸಂದೇಶಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಂಡಿದ್ದರೆ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಆಗುವುದನ್ನು ತಪ್ಪಿಸಬಹುದಿತ್ತು ಎಂದೂ ಮೂಲಗಳು ಹೇಳಿವೆ.

‘ಐಎಂಎ ಹಣಕಾಸು ಚಟುವಟಿಕೆ ಕುರಿತು ಮೊದಲು ಪತ್ತೆ ಹಚ್ಚಿದ್ದೇ ಆದಾಯ ತೆರಿಗೆ ಇಲಾಖೆ. ಈ ಇಲಾಖೆಗೆ ಅದರದ್ದೇ ಆದ ಇತಿಮಿತಿಗಳಿವೆ. ಅದನ್ನು ಮೀರಿ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಬೇರೆ ಇಲಾಖೆಗಳಿಗೆ ಮಾಹಿತಿ ನೀಡಲಾಗಿತ್ತು. ಅಲ್ಲಿಗೆ ನಮ್ಮ ಜವಾಬ್ದಾರಿ ಮುಗಿಯಿತು. ಅಲ್ಲಿಂದ ಮುಂದಕ್ಕೆ ಈ ಇಲಾಖೆಗಳು ತಮ್ಮ ಜವಾಬ್ದಾರಿ ನಿರ್ವಹಿಸಬೇಕಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಆದರೆ, ಲೇವಾದೇವಿ ನಿಯಂತ್ರಣ ಕಾಯ್ದೆ, ಕೆಪಿಐಡಿ ಕಾಯ್ದೆ, ಫೆಮಾ ಮುಂತಾದ ಕಾಯ್ದೆಗಳು ಐಎಂಎಗೆ ಅನ್ವಯ ಆಗುವುದಿಲ್ಲ. ಏಕೆಂದರೆ, ಪಾಲುದಾರಿಕೆ ಹೆಸರಿನಲ್ಲಿ ಕಂಪನಿ ಹಣ ಸಂಗ್ರಹಿಸಿದೆ. ಇದರಲ್ಲಿ ಲಾಭ– ನಷ್ಟ ಎರಡೂ ಷೇರುದಾರರಿಗೆ ವರ್ಗಾವಣೆ ಆಗುವುದರಿಂದ ನಿರ್ದಿಷ್ಟ ದೂರುಗಳಿಲ್ಲದೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ನೆಪವೊಡ್ಡಿ ಈ ಇಲಾಖೆಗಳು ಜವಾಬ್ದಾರಿಯಿಂದ ಜಾರಿಕೊಂಡಿವೆ ಎಂಬ ಟೀಕೆಗಳು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT