ಬೆಂಗಳೂರು: ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅಲ್ಲಾಡಿಸಲು ಯಾರಿಗೂ ಆಗದು’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂದಿರುವುದು ಒಂದು ರಾಜಕೀಯ ತೀರ್ಪು ಎನ್ನುವುದು ನನ್ನ ಅಭಿಪ್ರಾಯ’ ಎಂದರು.
‘ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ. ತನಿಖೆಯಾಗಿ ಸತ್ಯಾಂಶ ಹೊರಗೆ ಬರಲಿ’ ಎಂದರು.
ರಾಜೀನಾಮೆ ಕೇಳುವ ನೈತಿಕತೆ ಇಲ್ಲ: ‘ಮುಡಾ ಪ್ರಕರಣದಲ್ಲಿ ತನಿಖೆಯೇ ಆಗದೇ ಗಲ್ಲಿಗೆ ಹಾಕುವುದು ಎಷ್ಟು ಸರಿ? ನೈತಿಕತೆ ಬಗ್ಗೆ ಮಾತನಾಡಲು ಇಚ್ಚೆ ಇದ್ದರೆ ಬಿಜೆಪಿಯವರು ಗಾಂಧಿ ಪ್ರತಿಮೆ ಮುಂದೆ ಚರ್ಚೆಗೆ ಬರಲಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
‘ಯಡಿಯೂರಪ್ಪ ಪ್ರಕರಣಕ್ಕೂ ಸಿದ್ದರಾಮಯ್ಯ ಅವರ ಪ್ರಕರಣಕ್ಕೂ ವ್ಯತ್ಯಾಸ ಇದೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೊಟ್ಟಿಲ್ಲ. ಮುಡಾ ವಿಷಯದಲ್ಲಿ ಮುಖ್ಯಮಂತ್ರಿ ತಪ್ಪು ಮಾಡಿಲ್ಲ. ತಪ್ಪಾಗಿದೆ ಎಂದು ಎಲ್ಲಿದೆ’ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮುಂದುವರಿಯುತ್ತಾರೆ: ‘ತನಿಖೆಗೆ ಆದೇಶ ನೀಡಿದ ತಕ್ಷಣ ಆರೋಪ ಸಾಬೀತು ಎಂದಲ್ಲ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
‘ಕೇಸ್ ಇರುವವರು ರಾಜ್ಯದಲ್ಲಿ, ಕೇಂದ್ರದಲ್ಲಿ ಸಚಿವರಾಗಿ ಮುಂದುವರೆರಿದಿದ್ದಾರೆ. ಹೀಗಾಗಿ, ನೈತಿಕತೆ ಪ್ರಶ್ನೆ ಎಲ್ಲಿದೆ’ ಎಂದೂ ಪ್ರಶ್ನಿಸಿದರು.