ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಸಹಕಾರಿ ಬ್ಯಾಂಕ್‌ಗಳಲ್ಲಿ ಅಕ್ರಮ: ಸಿಬಿಐ ತನಿಖೆಗೆ ಬಾರದ ಶಿಫಾರಸು

Published 8 ಆಗಸ್ಟ್ 2023, 22:15 IST
Last Updated 8 ಆಗಸ್ಟ್ 2023, 22:15 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಕೆಲವು ಸಹಕಾರಿ ಬ್ಯಾಂಕ್‌ಗಳಲ್ಲಿ ನಡೆದಿರುವ ಹಣಕಾಸು ಅವ್ಯವಹಾರಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರವು ಯಾವುದೇ ಶಿಫಾರಸು ಮಾಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. 

ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯ ಲಹರ್ ಸಿಂಗ್ ಸರೋಯಾ ಮಂಗಳವಾರ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಹಣಕಾಸು ಖಾತೆಯ ರಾಜ್ಯ ಸಚಿವ ಭಾಗವತ್‌ ಕರಾಡ್‌ ಈ ಉತ್ತರ ನೀಡಿದ್ದಾರೆ.

ದೇಶದ ವಿವಿಧ ಸಹಕಾರಿ ಬ್ಯಾಂಕ್‌ಗಳಲ್ಲಿ 2020–21ನೇ ಸಾಲಿನಲ್ಲಿ ₹1,985 ಕೋಟಿ, 2021–22ರಲ್ಲಿ ₹536 ಕೋಟಿ ಹಾಗೂ 2022–23ರಲ್ಲಿ ₹791 ಕೋಟಿ ಅಕ್ರಮ ನಡೆದಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. 

ಬೆಂಗಳೂರಿನ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ ಅವ್ಯವಹಾರ ಹಗರಣವನ್ನು ಸಿಬಿಐ‌ಗೆ ವಹಿಸಲು ಎಲ್ಲ ರೀತಿಯ ತಯಾರಿ ನಡೆದಿದೆ ಎಂದು ಕರ್ನಾಟಕದ ಸಹಕಾರ ಸಚಿವರು ಈ ವರ್ಷದ ಜನವರಿಯಲ್ಲಿ ತಿಳಿಸಿದ್ದರು. ಸಿಐಡಿ, ಸಹಕಾರ ಇಲಾಖೆ ಮತ್ತು ಇ.ಡಿ (ಜಾರಿ ನಿರ್ದೇಶನಾಲಯ) ಹಗರಣದ ತನಿಖೆ ನಡೆಸಿ, ₹1,290 ಕೋಟಿ ವಂಚನೆ ಪತ್ತೆಹಚ್ಚಿವೆ. ಸಿಐಡಿ ತನಿಖೆ ಸಮರ್ಪಕವಾಗಿ ನಡೆಯುತ್ತಿದೆ. ಈ ಹಂತದಲ್ಲಿ ಸಿಬಿಐಗೆ ವಹಿಸಿದರೆ ತನಿಖೆ ವಿಳಂಬ ಆಗಬಹುದು ಎಂಬ ಕಾರಣಕ್ಕೆ ತಡೆಹಿಡಿಯಲಾಗಿತ್ತು ಎಂದೂ ಸಮಜಾಯಿಷಿ ನೀಡಿದ್ದರು. 

ಜೂನ್‌ನಲ್ಲಿ ನಡೆದ ವಿಧಾನ ಪರಿಷತ್‌ ಅಧಿವೇಶನದಲ್ಲಿ ಉತ್ತರಿಸಿದ್ದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ‘ಈ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸುವ ಬಗ್ಗೆ ಇದೇ ವರ್ಷದ ಜನವರಿ 17ರಂದೇ ಅಂದಿನ ಸಹಕಾರ ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ನಿರ್ಣಯವನ್ನು ಜಾರಿಗೊಳಿಸಲಿಲ್ಲ’ ಎಂದು ಹೇಳಿದ್ದರು.  ಅವ್ಯವಹಾರದ ತನಿಖೆಯನ್ನು ಸಿಬಿಐಗೆ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ಭರವಸೆ ನೀಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT