ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

JDS-BJP alliance | ಜೆಡಿಎಸ್‌ ತೊರೆಯಲು ಮುಸ್ಲಿಂ ಮುಖಂಡರ ನಿರ್ಧಾರ

Published 23 ಸೆಪ್ಟೆಂಬರ್ 2023, 16:17 IST
Last Updated 23 ಸೆಪ್ಟೆಂಬರ್ 2023, 16:17 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಸೇರುವ ಜೆಡಿಎಸ್‌ ನಿರ್ಧಾರ ವಿರೋಧಿಸಿ ಮಾಜಿ ಸಚಿವ ಎನ್‌.ಎಂ.ನಬಿ ಸೇರಿದಂತೆ ಹಿರಿಯ ಮುಸ್ಲಿಂ ಮುಖಂಡರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ನಂತರ ಜೆಡಿಎಸ್‌ನ ಹಲವು ಮುಸ್ಲಿಂ ಮುಖಂಡರು ಪ್ರತ್ಯೇಕ ಸಭೆ ನಡೆಸಿದರು.

ನಬಿ ಅವರೊಂದಿಗೆ ಜೆಡಿಎಸ್‌ನ ಹಿರಿಯ ಉಪಾಧ್ಯಕ್ಷ ಸೈಯದ್‌ ಶಫಿವುಲ್ಲಾ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಯಾಗಿದ್ದ ಮೊಹಿದ್‌ ಅಲ್ತಾಫ್‌, ಯುವ ಘಟಕದ ಅಧ್ಯಕ್ಷ ಎನ್‌.ಎಂ. ನೂರ್‌, ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ನಾಸಿರ್‌ ಹುಸೇನ್‌ ಉಸ್ತಾದ್‌ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಮುಸ್ಲಿಂ ಮತಗಳನ್ನು ಪಡೆಯಲು ಕಾಂಗ್ರೆಸ್‌ನಲ್ಲಿದ್ದ ಸಿ.ಎಂ. ಇಬ್ರಾಹಿಂ ಅವರನ್ನು ಸೆಳೆದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ, ಚುನಾವಣೆಯಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದ್ದರು.

‘ಜೆಡಿಎಸ್‌ ಬಿಜೆಪಿಯ ‘ಬಿ’ ಟೀಮ್‌ ಎಂದು ಕಾಂಗ್ರೆಸ್‌ ಚುನಾವಣೆ ಸಮಯದಲ್ಲಿ ಬಿಂಬಿಸಿತ್ತು. ಇದರಿಂದ ಕಾಂಗ್ರೆಸ್‌ಗೆ ಲಾಭವಾಗಿತ್ತು. ಪಕ್ಷದ ನಾಯಕರು ತೆಗೆದುಕೊಂಡಿರುವ ನಿರ್ಧಾರ ಕಾಂಗ್ರೆಸ್‌ ಆರೋಪವನ್ನು ಪುಷ್ಟೀಕರಿಸಿದೆ. ಜಾತ್ಯತೀತ ನಿಲುವು ಸಡಿಲಗೊಂಡಿರುವ ಕಾರಣ ಪಕ್ಷ ತೊರೆಯಲು ನಿರ್ಧರಿಸಲಾಗಿದೆ. ಈ ಬೆಳವಣಿಗೆಯಿಂದ ಮುಸ್ಲಿಂ ಮುಖಂಡರು ಅಸಮಾಧಾನಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪದಾಧಿಕಾರಿಗಳು ರಾಜೀನಾಮೆ ನೀಡಲಿದ್ದಾರೆ’ ಎಂದು ಸೈಯದ್‌ ಶಫಿವುಲ್ಲಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

 ‘ಉಳಿದ ಮುಸ್ಲಿಮರೂ ಸೇರಿದಂತೆ ಇತರೆ ಸಮುದಾಯಗಳ ಜಾತ್ಯತೀತ ನಾಯಕರ ಜತೆ ಚರ್ಚಿಸಿದ ನಂತರ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT