ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಬಹಿರಂಗ ಚರ್ಚೆಗೆ ಬರಲಿ-ಎಚ್.ಡಿ. ದೇವೇಗೌಡ

ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌. ಡಿ. ದೇವೇಗೌಡ ಪಂಥಾಹ್ವಾನ
Last Updated 20 ಅಕ್ಟೋಬರ್ 2022, 20:28 IST
ಅಕ್ಷರ ಗಾತ್ರ

ಮೈಸೂರು: ‘ಮೀಸಲಾತಿ ಬಗ್ಗೆ ಮಾತನಾಡುವ ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರು ಬಹಿರಂಗ ಚರ್ಚೆಗೆ ಬರಲಿ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಪಂಥಾಹ್ವಾನ ನೀಡಿದರು.

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೊರವಲಯದ ರೆಸಾರ್ಟ್‌ನಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಗುರುವಾರ ಆಯೋಜಿಸಿದ್ದ ಸಮಾಲೋಚನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಪ್ರತಿ ವರ್ಗವನ್ನೂ ಗುರುತಿಸಿದ ವ್ಯಕ್ತಿ ಇದ್ದರೆ ಅದು ನಾನು. ಇದು ಅಹಂಕಾರವಲ್ಲ. ಸತ್ಯ ಹೇಳಲು ಯಾರ ಮುಂದೆ ಬೇಕಾದರೂ ನಿಲ್ಲಬಲ್ಲೆ. ಯಾವ ಆತಂಕವೂ ನನಗಿಲ್ಲ. ಮುಸ್ಲಿಮರಿಗೆ ಮೀಸಲಾತಿ ಕೊಟ್ಟವರು ಕಾಂಗ್ರೆಸ್ಸೋ, ಬಿಜೆಪಿಯೋ? ಶಕ್ತಿ ಇದ್ದರೆ ಮುಂದೆ ಬರಲಿ. ಎಲ್ಲೇ ವೇದಿಕೆ ಸಿದ್ಧಪಡಿಸಿದರೂ ಬರುತ್ತೇನೆ’ ಎಂದು ಗುಡುಗಿದರು.

‘ಹೆಣ್ಣು ಮಕ್ಕಳಿಗೆ ಮೀಸಲಾತಿಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೊಡಲಿಲ್ಲ. ರಾಜ್ಯದಲ್ಲಿ ಮೊದಲಿಗೆ ಮೀಸಲಾತಿ ವ್ಯವಸ್ಥೆ ಮಾಡಿದವರು ಯಾರು? ನನಗಿನ್ನೂ ಜ್ಞಾಪಕ ಶಕ್ತಿ ಇದೆ. ನಾವಿದ್ದೇವೆ; ಹೆದರಬೇಡಿ. 2023ರವರೆಗೆ ಕೈಜೋಡಿಸಿ ಹೋರಾಡುತ್ತೇನೆ’ ಎಂದು‌ ಮುಖಂಡರಿಗೆ ಧೈರ್ಯ‌ ತುಂಬಿದರು.

‘ಕುಮಾರಸ್ವಾಮಿ 10 ವರ್ಷಗಳಲ್ಲಿ ಮಾಡಿರುವ ಕೆಲಸಗಳು, ನೀಡಿರುವ ಕೊಡುಗೆಗಳ ಬಗ್ಗೆ ಮಾತನಾಡಲು ಬಹಳ ಇದೆ. ಈಗ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದು ಅತ್ಯಂತ ಅವಶ್ಯ ವಾಗಿದೆ. ಪ್ರತಿಯೊಬ್ಬರ ಶಕ್ತಿಯನ್ನೂ ಬಳಸಿಕೊಳ್ಳಬೇಕು’ ಎಂದರು.

‘ನನ್ನ ಹೋರಾಟ ನಿಲ್ಲಿಸುವುದಿಲ್ಲ. 2023ರ ಚುನಾವಣೆಯಲ್ಲಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದಷ್ಟೇ ಉದ್ದೇಶವಲ್ಲ. ಎಲ್ಲ ಶಕ್ತಿಯನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಿದರೆ ಅನುಕೂಲವಾಗುತ್ತದೆ. ಅದಕ್ಕಾಗಿ ಹೋರಾಟದ ಸಂಕಲ್ಪ ಮಾಡಬೇಕು. ಪಕ್ಷಕ್ಕೆ ಶಕ್ತಿ ಇಲ್ಲ‌ ಎಂಬ ಮನೋಭಾವ ಅನೇಕರಲ್ಲಿದೆ. ಹಾಗೆಂದು ಭಾವಿಸಬೇಡಿ. ಜೆಡಿಎಸ್ ಮುಳುಗೇ‌‌ ಹೋಯಿತು ಎನ್ನುವವರಿದ್ದಾರೆ. ಅವರಿಗೆ ಹೇಗೆ ಉತ್ತರಿಸಬೇಕೆಂದು ಗೊತ್ತಿದೆ. ಅಪಪ್ರಚಾರವನ್ನು ನಿಲ್ಲಿಸಿ. ಪಕ್ಷ‌ ಉಳಿಯಬೇಕೆನ್ನುವುದು ನನ್ನ ಆಶಯ, ದೇವರ ಇಚ್ಛೆಯೂ ಹೌದು’ ಎಂದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ‘ನೀವು ಆರಾಮವಾಗಿ ಇದ್ದರೆ ಸಾಕು. ನಾವೆಲ್ಲರೂ ಪ್ರಾಣ ಕೊಟ್ಟು ಹೋರಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಆತಂಕ ಪಡಬೇಡಿ. ಕುಮಾರಸ್ವಾಮಿ ಎರಡೂ ಪಕ್ಷಗಳನ್ನೂ ಎದುರು ಹಾಕಿಕೊಂಡು ಹೋರಾಡುತ್ತಿದ್ದಾರೆ. ನಮ್ಮನ್ನು ನೀವು ಆಶೀರ್ವದಿಸಬೇಕು’ ಎಂದು ದೇವೇಗೌಡರನ್ನು ಉದ್ದೇಶಿಸಿ ಹೇಳಿದರು.

ಜೆಡಿಸ್‌ನಲ್ಲೇ ಉಳಿಯುವೆ: ಜಿ.ಟಿ.ದೇವೇಗೌಡ

ಮೈಸೂರು: ಮೂರು ವರ್ಷಗಳಿಂದಲೂ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರ ಮನವೊಲಿಸುವಲ್ಲಿ ಎಚ್‌.ಡಿ.ದೇವೇಗೌಡ ಯಶಸ್ವಿಯಾದರು.

ಇಲ್ಲಿನ ವಿ.ವಿ.ಮೊಹಲ್ಲಾದಲ್ಲಿರುವ ಜಿಟಿಡಿ ನಿವಾಸಕ್ಕೆ ಗುರುವಾರ ಬಂದು ಭೋಜನ ಸ್ವೀಕರಿಸಿ ಮುನಿಸು ಮರೆಯುವಂತೆ ಮಾಡಿದರು. ಈ ಭೇಟಿಯು ಭಾವುಕ ಕ್ಷಣಗಳಿಗೂ ಸಾಕ್ಷಿಯಾಯಿತು.

‘ನಾನು ಜೆಡಿಎಸ್ ಬಿಡುವುದಿಲ್ಲ.ಇಲ್ಲೇ ಇರುತ್ತೇನೆ’ ಎಂದು ಘೋಷಿಸುವ ಮೂಲಕ ಜಿ.ಟಿ.ದೇವೇಗೌಡ ಅವರು ಹಲವು ದಿನಗಳ ಉಹಾಪೋಹಗಳಿಗೆ ತೆರೆ ಎಳೆದರು.

ಗೌಡರು ಪ್ರಚಾರಕ್ಕೆ ಸಿದ್ಧವಾಗುತ್ತಿದ್ದಾರೆ: ಎಚ್‌ಡಿಕೆ

‘2023ರ ಚುನಾವಣಾ ಪ್ರಚಾರಕ್ಕೆ ‌ಹೋಗಲು ವಾಹನ‌ ಸಿದ್ಧವಾಗಿದೆಯಾ? ಸಂಚಾರಕ್ಕೆ ತೊಂದರೆಯಾಗದಂತೆ ಸುಸಜ್ಜಿತ ವ್ಯವಸ್ಥೆಯಾಗಬೇಕೆಂದು ದೇವೇಗೌಡರು ವಿಚಾರಿಸುತ್ತಿರುತ್ತಾರೆ. ಇದು ಅವರ ಉತ್ಸಾಹವನ್ನು ತೋರಿಸುತ್ತದೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

‘ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಅಸ್ತಿತ್ವವಿಲ್ಲ ಎಂದು ಕೆಲವರು ಹೇಳುತ್ತಾರೆ. ಈ ಬಾರಿ 35ರಿಂದ 40 ಮಂದಿ ಅಲ್ಲಿನವರೇ ಆಯ್ಕೆಯಾಗಲಿದ್ದಾರೆ’ ಎಂದರು.

‘126ರಲ್ಲಿ ನಿಖಿಲ್ ಹೆಸರು ಕೂಡ ಇರಬಹುದು’

‘ನ.1ರಂದು ಬಿಡುಗಡೆ ಮಾಡಲಿರುವ ಜೆಡಿಎಸ್‌ನ 126 ಅಭ್ಯರ್ಥಿಗಳ ಪಟ್ಟಿಯಲ್ಲಿ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೆಸರೂ ಇರಬಹುದು’ ಎಂದ ಕುಮಾರಸ್ವಾಮಿ, ಚುನಾವಣೆಯಲ್ಲಿ ಪುತ್ರ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದರು.

‘ಕೆಸರೆರಚಾಟದಲ್ಲಿ ತೊಡಗಿರುವ ಕಾಂಗ್ರೆಸ್–ಬಿಜೆಪಿಯವರು, ಮೈತ್ರಿ ಅನಿವಾರ್ಯವಾದರೆ ಅನುಕೂಲವಾಗುತ್ತದೆಂದು ಪಕ್ಷವನ್ನು ಟೀಕಿಸುತ್ತಿಲ್ಲ’ ಎಂದರು.

ಇದಕ್ಕೂ ಮುನ್ನ, ಕುಟುಂಬದವರು ಹಾಗೂ ಟಿಕೆಟ್ ಆಕಾಂಕ್ಷಿಗಳ ಜೊತೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿದರು.

ಶಿವಲಿಂಗೇಗೌಡ ಗೈರು

ಮೈಸೂರು: ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿಲ್ಲ.

‘ಸ್ಥಳೀಯ ಸಮಸ್ಯೆಗಳಿಂದ ಅವರು ಬಂದಿಲ್ಲ. ಜೊತೆಯಲ್ಲೇ ಇರುತ್ತೇನೆಂದಿದ್ದಾರೆ. ಇರುವುದು–ಬಿಡುವುದು ಅವರ ವೈಯಕ್ತಿಕ ನಿರ್ಧಾರ’ ಎಂದು ಎಚ್‌.ಡಿ.ಕುಮಾರಸ್ವಾಮಿ ಪ್ರಯಿಕ್ರಿಯಿಸಿದರು.

‘ದುಡುಕಿ ನಿರ್ಧರಿಸಬೇಡಿ ಎಂದು ಶಿವಲಿಂಗೇಗೌಡರಿಗೆ ಹೇಳಿದ್ದೇನೆ. ಅಷ್ಟೂ ಮೀರಿ ಹೊಸ ರಾಜಕೀಯ ಬೆಳವಣಿಗೆಯಾಗಿ ಬೇರೆಯವರ ಮಾತಿಗೆ ಬೆಲೆ ಕೊಟ್ಟರೆ ನಾನೇನು ಮಾಡಲು ಸಾಧ್ಯ?’ ಎಂದು ಎಚ್‌.ಡಿ.ದೇವೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT