ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಸೂಚನೆ

ಶಾಹೀನ್ ಶಾಲಾ ಮಕ್ಕಳ ವಿಚಾರಣೆ ವೇಳೆ ಬಾಲನ್ಯಾಯ ಕಾಯ್ದೆ ಉಲ್ಲಂಘನೆ
Last Updated 3 ಸೆಪ್ಟೆಂಬರ್ 2021, 16:43 IST
ಅಕ್ಷರ ಗಾತ್ರ

ಬೆಂಗಳೂರು: ‘ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗಿರುವ ಸಂಬಂಧ ಇಲಾಖಾ ವಿಚಾರಣೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ತಿಳಿಸಲಾಗಿದೆ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಾಟಕ ಪ್ರದರ್ಶನ ಮಾಡಿದ್ದ ಮಕ್ಕಳನ್ನು ವಿಚಾರಣೆ ನಡೆಸುವ ವೇಳೆ ಪೊಲೀಸರು ಆಯುಧಗಳ ಸಹಿತ ಸಮವಸ್ತ್ರ ಧರಿಸಿದ್ದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಿದ ಸರ್ಕಾರದ ಪರ ವಕೀಲರು, ವಿದ್ಯಾರ್ಥಿಗಳನ್ನು ಪ್ರಶ್ನಿಸುವಾಗ ತನಿಖಾಧಿಕಾರಿ ಸಮವಸ್ತ್ರ ಧರಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಪರಿಶೀಲನೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮುರ್ತಿ ಸತೀಶ್‌ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಇಲಾಖಾ ವಿಚಾರಣೆ ನಡೆಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಹೊಸ ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶನ ನೀಡಿತು. ವಿಚಾರಣೆಯನ್ನು ಅ.21ಕ್ಕೆ ಮುಂದೂಡಿತು.

‘ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲು ರಾಜ್ಯದ ಎಲ್ಲಾ ಪೊಲೀಸರಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಆ.16ರಂದು ನೀಡಿದ್ದ ನಿರ್ದೇಶನದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

‘ಮಕ್ಕಳನ್ನು ವಿಚಾರಣೆ ನಡೆಸಿದ ಛಾಯಾಚಿತ್ರಗಳನ್ನು ನೋಡಿದರೆ ನಾಲ್ವರು ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗಳಲ್ಲಿ ಇಬ್ಬರು ಬಂದೂಕುಗಳನ್ನು ಹೊಂದಿದ್ದು, ಮೂವರು ಮಕ್ಕಳನ್ನು ಕೂರಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಈ ರೀತಿ ನಡೆಸಿರುವ ವಿಚಾರಣೆಯು ಬಾಲ ನ್ಯಾಯ ಕಾಯ್ದೆಯ ಉಲ್ಲಂಘನೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ’ ಎಂದು ಪೀಠ ಈ ಹಿಂದಿನ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿತು.

2020 ಜ.21ರಂದು ಶಾಲಾ ಆವರಣದಲ್ಲಿ ನಾಟಕ ಪ್ರದರ್ಶನ ಮಾಡಲಾಗಿತ್ತು. ಈ ಸಂಬಂಧ ಸಲ್ಲಿಕೆಯಾದ ದೂರು ಆಧರಿಸಿ ಆಡಳಿತ ಮಂಡಳಿ ವಿರುದ್ಧ ದೇಶದ್ರೋಹ ಪ್ರಕರಣವನ್ನು ಪೊಲೀಸರು ದಾಖಲಿಸಿ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು.

ವಿಚಾರಣೆಯನ್ನು ಪ್ರಶ್ನಿಸಿ ವಕೀಲರಾದ ನಯನಾ ಜ್ಯೋತಿ ಮತ್ತು ದಕ್ಷಿಣ ಭಾರತ ಮಾನವ ಹಕ್ಕುಗಳ ಶಿಕ್ಷಣ ಮತ್ತು ಮೇಲ್ವಿಚಾರಣಾ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಬಾಲನ್ಯಾಯ ಕಾಯ್ದೆ ಉಲ್ಲಂಘಿಸಿರುವ ಪೊಲೀಸರ ವಿರುದ್ಧ ತನಿಖೆಗೆ ನಿರ್ದೇಶನ ನೀಡಬೇಕು ಅರ್ಜಿದಾರರು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT