ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕನ್ನಡ ಅಸ್ಮಿತೆಗೆ ಆರ್ಥಿಕ ಇತಿಮಿತಿಯ ಬೇಲಿ

ರಾಜ್ಯದ 16 ಜಿಲ್ಲೆಗಳ 63 ತಾಲ್ಲೂಕುಗಳ ‘ಗಡಿ ಅಭಿವೃದ್ಧಿ‘ಗೆ ಅನುದಾನ ಕೊರತೆ l ₹158 ಕೋಟಿ ಅನುದಾನದ ಬೇಡಿಕೆ
Last Updated 30 ಜುಲೈ 2022, 19:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಗಡಿಯಂಚಿನಲ್ಲಿ ಕನ್ನಡದ ಅಸ್ಮಿತೆ ಗಟ್ಟಿಯಾಗಿ ನೆಲೆಗೊಳ್ಳಬೇಕು ಎಂಬ ಆಶಯದಿಂದ ರೂಪುಗೊಂಡಿದ್ದು ‘ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’.

ಗಡಿಭಾಗದ ಕನ್ನಡಿಗರ ಮನೆ–ಮನಗಳಲ್ಲಿ ಕನ್ನಡ ಪ್ರಜ್ಞೆ ಅರಳಲಿ ಮತ್ತು ಅಭಿವೃದ್ದಿಯಾಗಲಿ ಎಂಬ ಗುರಿ– ಆಶಯ ಪ್ರಾಧಿಕಾರ ಹೊಂದಿದೆ. ಆದರೆ, ಅದರ ‘ಬೆಟ್ಟ’ದಷ್ಟು ಯೋಜನೆಗಳ ಅನುಷ್ಠಾನಕ್ಕೆ ಅನುದಾನದ ಕೊರತೆ, ಆರ್ಥಿಕ ‘ಇತಿಮಿತಿ’ ದೊಡ್ಡ ಸವಾಲಾಗಿದೆ.

ಗಡಿಯಲ್ಲಿರುವ ಕನ್ನಡಿಗರ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ವಿಕಾಸದ ಉದ್ದೇಶದಿಂದ ಗಡಿ ಅಧ್ಯಯನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರ 2010ರಲ್ಲಿ ಈ ಪ್ರಾಧಿಕಾರ ಸ್ಥಾಪಿಸಿತು. 19 ಜಿಲ್ಲೆಗಳ 63 ತಾಲ್ಲೂಕುಗಳಲ್ಲಿ ರಾಜ್ಯದ ಗಡಿ ವ್ಯಾಪಿಸಿದೆ.

ಈ ತಾಲ್ಲೂಕುಗಳಿಗೆ ಹೊಂದಿಕೊಂಡಿರುವ ಆರು ರಾಜ್ಯಗಳ (ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ) ಗಡಿ ಭಾಗದಲ್ಲಿರುವ ಕನ್ನಡಿಗರಲ್ಲಿ ಭಾಷೆ– ಸಂಸ್ಕೃತಿಯ ಅಭಿಮಾನ ಮೂಡಿಸುವುದರ ಜೊತೆಗೆ ಕನ್ನಡಪರ ಸಂಘ-ಸಂಸ್ಥೆ, ಶಾಲೆಗಳಿಗೆ ಸಾಂಸ್ಕೃತಿಕ, ಶೈಕ್ಷಣಿಕವಾಗಿ ಮೂಲಸೌಲಭ್ಯ ಒದಗಿಸುವುದು ಪ್ರಾಧಿಕಾರದ ಕರ್ತವ್ಯ.

ವಿರೇಂದ್ರ ಪಾಟೀಲ ಸರ್ಕಾರದ ಅವಧಿಯಲ್ಲಿ ಗಡಿ ತಾಲ್ಲೂಕುಗಳ ಅಭಿವೃದ್ಧಿಗಾಗಿ ತಲಾ ₹25 ಲಕ್ಷ ನೀಡಲಾಗುತ್ತಿತ್ತು. ಈಗ ವಾರ್ಷಿಕ ₹2 ಲಕ್ಷ ಅಥವಾ ₹3 ಲಕ್ಷ ನೀಡಲಾಗುತ್ತಿದೆ. ಅನುದಾನದ ಕೊರತೆಯಿಂದ ಗಡಿ– ಗಡಿಯಾಚೆಗಿನ ಕನ್ನಡಿಗರನ್ನು ನಿರೀಕ್ಷೆಯಂತೆ ‘ಪೋಷಿಸಲು‘ ಪ್ರಾಧಿಕಾರಕ್ಕೆ ಸಾಧ್ಯವಾಗಿಲ್ಲ. ಅಧ್ಯಕ್ಷ ಹೊಣೆ ವಹಿಸಿದವರು ಅಭಿವೃದ್ಧಿ ಭರವಸೆ ನೀಡಿದರೂ ಸರ್ಕಾರ ಅನುದಾನ ನೀಡದಿರುವುದು ತೊಡಕಾಗಿದೆ. ಬಂದ ಒಂದಷ್ಟು ಅನುದಾನವೂ ಕಳ್ಳ ಮಾರ್ಗಗಳಲ್ಲಿ ಹಂಚಿಕೆಯಾದ ಆರೋಪಗಳೂ ಇವೆ.

ಅನುದಾನ ಕೋರಿ ಪ್ರಾಧಿಕಾರಕ್ಕೆ ಸಲ್ಲಿಕೆಯಾದ ಅರ್ಜಿಗಳು, ವಿಲೇವಾರಿ ವೇಳೆ ಪಕ್ಷಪಾತ, ಸ್ವಜನಪಕ್ಷಪಾತ, ತವರು ಪ್ರೇಮಕ್ಕೆ ಬಲಿಯಾಗಿವೆ. ಸಂಘ-ಸಂಸ್ಥೆಗಳಿಗೆ ನೇರವಾಗಿ ಧನಸಹಾಯ ನೀಡಲಾಗಿದೆ ಎಂಬುದು ಮತ್ತೊಂದು ದೂರು. ಅರ್ಜಿ ಸಲ್ಲಿಸದ ಸಂಸ್ಥೆಗಳಿಗೂ ಅನುದಾನ ನೀಡಲಾಗಿದೆ ಎಂಬ ಆರೋಪ, ಪ್ರಾಧಿಕಾರದ ಹಿಂದಿನ ದಾಖಲೆಗಳು ಭ್ರಷ್ಟಾಚಾರದ ಅನುಮಾನ ಮೂಡಿಸುತ್ತವೆ.

ಬಾಬುರಾವ್‌ ಚಿಂಚನಸೂರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತಲಾ ₹80 ಕೋಟಿ ಹೊರತುಪಡಿಸಿದರೆ, ಇತರ ಅವಧಿಯಲ್ಲಿ ಪ್ರಾಧಿಕಾರಕ್ಕೆ ಅನುದಾನ ಕೊರತೆ ಎದುರಾಗಿದೆ. ಪ್ರಾಧಿಕಾರದ ಮೊದಲ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವಧಿಯಲ್ಲಿ ಅನುದಾನ ಖರ್ಚಾಗದೆ ಹಿಂದಕ್ಕೆ ಹೋಗಿದೆ ಎಂಬ ಆರೋಪವೂ ಕೇಳಿಬಂದಿತ್ತು.

‘ಗಡಿ ಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿದ ಬಳಿಕ ಆಯಾ ಗಡಿ ಭಾಗದ ಸಮಸ್ಯೆಗಳ ಪಟ್ಟಿ ಮಾಡಲಾಗುತ್ತದೆ. ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ವಿಧಾನ ಮಂಡಲ ಅಧಿವೇಶನದಲ್ಲಿ ಗಡಿ ಭಾಗದ ಶಾಸಕರು ಧ್ವನಿ ಎತ್ತುತ್ತಲೇ ಇದ್ದಾರೆ. 2021–22ರಲ್ಲಿ ಅರ್ಜಿ ಆಹ್ವಾನಿಸಿದ ಮೇಲೆ ₹158 ಕೋಟಿ ಅನುದಾನ ಬೇಡಿಕೆ ಬಂದಿದೆ. ಆದರೆ, ಹಣ ಇಲ್ಲದ ಕಾರಣ ಅರ್ಜಿಗಳು ಯಥಾಸ್ಥಿತಿಯಲ್ಲಿವೆ’ ಎನ್ನುತ್ತಾರೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್‌ ಮತ್ತೀಹಳ್ಳಿ.

2020-21ನೇ ಸಾಲಿನಲ್ಲಿ ಪರಿಶಿಷ್ಟರ ಉಪ ಯೋಜನೆಯ (ಎಸ್‌ಸಿಎಸ್‌ಪಿ, ಟಿಎಸ್‌ಪಿ) ಅನುದಾನ ₹26 ಕೋಟಿ, ಯೋಜನಾ ಇಲಾಖೆಯಿಂದ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ (ಆರ್‌ಡಿಪಿಆರ್‌) ಇಲಾಖೆಯಿಂದ ₹36 ಕೋಟಿ ಬಿಡುಗಡೆ ಆಗಿಲ್ಲ.

ಹೆಚ್ಚಿನ ಅನುದಾನ ಹಂಚಿಕೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಡತ ತರಿಸಿಕೊಂಡರೂ ಆರ್ಥಿಕ ಇಲಾಖೆಯ ಅಧಿಕಾರಿಗಳು ಪ್ರಾಧಿಕಾರದ ಆಶಯಗಳಿಗೆ ಮತ್ತು 2010ರ ಗಡಿ ಪ್ರಾಧಿಕಾರ ಕಾಯ್ದೆಯ ವಿರುದ್ಧ ಕಡತ ಮಂಡಿಸಿ ಅನುಮೋದನೆಗೆ ಅಡ್ಡಗಾಲು ಹಾಕಿದ ಆಪಾದನೆಯಿದೆ.

ಸದ್ಯ (2020ರ ಡಿ.2ರಿಂದ) ನಿವೃತ್ತ ಐಎಎಸ್‌ ಅಧಿಕಾರಿ ಸಿ. ಸೋಮಶೇಖರ ಅವರು ಪ್ರಾಧಿಕಾರದ ಅಧ್ಯಕ್ಷ. ಕೋವಿಡ್‌ ಮಧ್ಯೆಯೂ ಅವರು 12 ಗಡಿ ಜಿಲ್ಲೆಗಳಿಗೆ ತೆರಳಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಇತರ ಅಧಿಕಾರಿಗಳ ಜೊತೆ ಗಡಿ ಯೋಜನೆ, ಕಾಮಗಾರಿ, ಶೈಕ್ಷಣಿಕ ಸಮಸ್ಯೆಗಳ ಅಧ್ಯಯನ ನಡೆಸಿದ್ದಾರೆ.

ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ, ಅನುದಾನ ಬಳಕೆಯನ್ನು ಪರಿಶೀಲಿಸಿದ್ದಾರೆ. ಗಡಿಭಾಗದ ಗ್ರಾಮಗಳಲ್ಲಿ ಕನ್ನಡಿಗರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ವಿಶ್ವವಿದ್ಯಾಲಯಗಳಿಂದ ಅಧ್ಯಯನ ಮಾಡಿಸಿ, ಸರ್ಕಾರಕ್ಕೆ ವೈಜ್ಞಾನಿಕ‌ ಸಮೀಕ್ಷಾ ವರದಿ ಸಲ್ಲಿಸಲಿದ್ದಾರೆ.

‘₹75 ಕೋಟಿಗೆ ಪ್ರಸ್ತಾವ’

ಆರ್ಥಿಕ ಇಲಾಖೆ ಮೂಲಕ ಪ್ರಾಧಿಕಾರಕ್ಕೆ ಹೆಚ್ಚುವರಿಯಾಗಿ ₹ 75 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸಹಮತ ವ್ಯಕ್ತಪಡಿಸಿದ್ದು, ಹಣ ಬಿಡುಗಡೆಯ ವಿಶ್ವಾಸವಿದೆ. ಗಡಿ ಭಾಗದ ಕನ್ನಡಿಗರಲ್ಲಿ ಆಸೆ, ಆಕಾಂಕ್ಷೆ ಬಹಳ ಇವೆ. ಈ ಅನುದಾನ ಸಿಕ್ಕಿದರೆ ಸ್ವಲ್ಪ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಸಾಧ್ಯವಾಗಲಿದೆ. ಲಭ್ಯ ಅನುದಾನದ ಇತಿಮಿತಿಯಲ್ಲಿ ನಾವು ಎಲ್ಲವನ್ನೂ ಮಾಡುತ್ತಿದ್ದೇವೆ.

- ಸಿ. ಸೋಮಶೇಖರ,ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT