ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಡ್ಡಾಯ: ಸುಗ್ರೀವಾಜ್ಞೆ ತಿರಸ್ಕರಿಸಿಲ್ಲ– ರಾಜ್ಯಪಾಲ ಥಾವರ ಚಂದ್ ಗೆಹಲೋತ್‌

Published 31 ಜನವರಿ 2024, 15:32 IST
Last Updated 31 ಜನವರಿ 2024, 15:32 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿರುವ ಎಲ್ಲ ಅಂಗಡಿ, ಹೋಟೆಲ್‌, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮಗಳ ನಾಮಫಲಕಗಳಲ್ಲಿ ಶೇ 60‌ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಿ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿಲ್ಲ. ಅದರ ಬದಲು ವಿಧಾನಮಂಡಲ ಅದಿವೇಶನದಲ್ಲಿ ಮಸೂದೆ ಮಂಡಿಸುವಂತೆ ಸಲಹೆ ನೀಡಿ ಹಿಂದಿರುಗಿಸಲಾಗಿದೆ’ ಎಂದು ರಾಜ್ಯಪಾಲರು ಸ್ಪಷ್ಟನೆ ನೀಡಿದ್ದಾರೆ.

‘ಸುಗ್ರೀವಾಜ್ಞೆಗೆ ‌ಅಂಕಿತ ಹಾಕದೆ ರಾಜ್ಯಪಾಲರು ವಾಪಸು ಮಾಡಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಂಗಳವಾರ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಪರವಾಗಿ ಪ್ರಕಟಣೆ ನೀಡಿರುವ ವಿಶೇಷ ಕಾರ್ಯದರ್ಶಿ, ‘ಫೆ. 12ರಿಂದ ವಿಧಾನಮಂಡಲ ಅಧಿವೇಶನ ಕರೆಯಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ, ಸುಗ್ರೀವಾಜ್ಞೆಯನ್ನು ಹಿಂದಿರುಗಿಸಲಾಗಿದೆ’ ಎಂದಿದ್ದಾರೆ. 

ಮಸೂದೆ ಮಂಡನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಮಾತನಾಡಿ, ‘ಕನ್ನಡ ಬಳಕೆ ಕಡ್ಡಾಯದ ಬಗ್ಗೆ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ, ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವ ಮೊದಲೇ ಅಧಿವೇಶನ ಆರಂಭದ ಅಧಿಸೂಚನೆ ಹೊರಡಿಸಿರುವ ಕಾರಣ ವಾಪಸು ಕಳುಹಿಸಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು’ ಎಂದರು.

ರಾಜಕಾರಣ ಮಾಡುವ ಅಗತ್ಯವಿಲ್ಲ: ‘ಕನ್ನಡ ಭಾಷಾ ಸಮಗ್ರ‌‌ ಅಭಿವೃದ್ಧಿ ತಿದ್ದುಪಡಿ ಸುಗ್ರೀವಾಜ್ಞೆ ರಾಜ್ಯಪಾಲರಿಂದ ವಾಪಸ್ ಬಂದಿರುವುದಕ್ಕೆ ಯಾವುದೇ ರಾಜಕೀಯ ಕಾರಣಗಳು ಇಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

‘ಸುಗ್ರೀವಾಜ್ಞೆಗೆ ಯಾರಿಂದಲೂ ವಿರೋಧವಿಲ್ಲ. ಬಜೆಟ್ ಅಧಿವೇಶನದ ದಿನಾಂಕ‌ ನಿಗದಿಯಾಗಿರುವುದರಿಂದ ಎರಡೂ ಸದನಗಳಲ್ಲಿ ಮಸೂದೆ ‌ಮಂಡಿಸಿ ಒಪ್ಪಿಗೆ ಪಡೆಯುವಂತೆ ‌ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿದ್ದಾರೆ. ನಾವು ಅಧಿವೇಶನದ ದಿನ ನಿಗದಿಪಡಿಸುವ ಮೊದಲೇ, ಜ.5ರಂದೇ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದೆವು. ಆದರೆ‌, ರಾಜ್ಯಪಾಲರ ಅನಾರೋಗ್ಯ ಮತ್ತು ಅವರು ಊರಲ್ಲಿ ಇಲ್ಲದ ಕಾರಣ ಸಹಿ ಹಾಕುವುದು ತಡ ಆಗಿದೆ. ಎರಡೂ ಸದನಗಳಲ್ಲಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು‌’ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ರಾಜ್ಯದ ನೆಲ, ಜಲ‌ ಹಾಗೂ ಭಾಷೆ ವಿಚಾರದಲ್ಲಿ ರಾಜ್ಯಪಾಲರು ಬೇರೆ ರೀತಿ ನಡೆದುಕೊಳ್ಳುವುದಿಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ತಾಂತ್ರಿಕ ‌ಕಾರಣದಿಂದ‌ ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT