ಬೆಂಗಳೂರು: ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕನ್ನಡ ಗೀತಗಾಯನ ಕಾರ್ಯಕ್ರಮ ರಾಜ್ಯದ ಮೂಲೆ ಮೂಲೆಗಳಲ್ಲೂ ಅನುರಣಿಸಿತು. ಎಲ್ಲ ಜಿಲ್ಲೆಗಳಲ್ಲೂ ಕನ್ನಡಾಭಿಮಾನಿಗಳು ಬಣ್ಣ ಬಣ್ಣದ ಉಡುಪನ್ನು ತೊಟ್ಟು ಸಂಭ್ರಮದಿಂದ ಕನ್ನಡ ಗೀತೆಯನ್ನು ಮೊಳಗಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯ ಕನ್ನಡಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು...’ ಗೀತೆಯನ್ನು ಹಾಡಿ ಸಂಭ್ರಮಿಸಿದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ ಒಡಿಶಾದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಬಾರಿಸು ಕನ್ನಡ ಡಿಂಡಿಮವ’ ಗೀತೆ ಹಾಡಿದ್ದಲ್ಲದೇ, ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದರು.

ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ, ಮೆಟ್ರೊ ರೈಲು, ಬಸ್ ನಿಲ್ದಾಣ, ಆಟೋ ನಿಲ್ದಾಣ, ಶಾಲಾ–ಕಾಲೇಜುಗಳು, ವಿಶ್ವವಿದ್ಯಾಲಯ, ಸರ್ಕಾರಿ ಕಚೇರಿಗಳು, ಉದ್ಯಾನಗಳು, ಮಂಗಳೂರು–ಉಡುಪಿ ಕಡಲ ಕಿನಾರೆ, ವಿಜಯಪುರದ ಗೋಳಗುಮ್ಮಟ, ಹಂಪಿಯ ಕಲ್ಲಿನ ರಥದ ಮುಂದೆ, ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕವಾಗಿ ಕನ್ನಡ ಗೀತೆಗಳನ್ನು ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಗಳ ಪ್ರಕಾರ, ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಒಟ್ಟು 20 ಲಕ್ಷ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳು ಹಾಗೂ ಎಲ್ಲ ಸರ್ಕಾರಿ ಕಚೇರಿಗಳ ಆವರಣದಲ್ಲಿ ಕನ್ನಡ ಗೀತ ಗಾಯನದ ಕಂಪು ಹರಡಿತ್ತು. ಬೆಂಗಳೂರಿನ ಜನ ನಿಬಿಡ ವೃತ್ತಗಳಲ್ಲಿ ಸಂಚಾರ ಪೊಲೀಸರು ಬೆಳಿಗ್ಗೆ 11 ಕ್ಕೆ ಸರಿಯಾಗಿ ಮೂರು ಕನ್ನಡ ಗೀತೆಗಳಿಗೆ ಧ್ವನಿಗೂಡಿಸಿ ಕನ್ನಡಾಭಿಮಾನ ಮೆರೆದರು.

ಮಂಗಳೂರಿನ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ನಗರದ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಬಿಸಿಲಿನ ತಾಪವನ್ನೂ ಲೆಕ್ಕಿಸದೇ ಗುರುವಾರ ‘ಗೀತಗಾಯನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾಲ ಬುಡದಲ್ಲಿ ಕಾದ ಮರಳು, ತಲೆಯ ಮೇಲೆ ಉರಿವ ಸೂರ್ಯನ ತಾಪವನ್ನು ತಾಳದೆ ಒಂದಿಬ್ಬರು ಮಕ್ಕಳು ಬಸವಳಿದು ಬಿದ್ದರೂ ಒಂದೆರಡು ನಿಮಿಷಗಳಲ್ಲಿ ಸುಧಾರಿಸಿ ಮತ್ತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ. ಮಂಡ್ಯದ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ಸಾವಿರ ವಿದ್ಯಾರ್ಥಿಗಳು ಕನ್ನಡ ಗೀತೆಯನ್ನು ಹಾಡಿದರು.

ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಬಳಿಕ ನಡೆಯುತ್ತಿರುವ ರಾಜ್ಯ ವ್ಯಾಪಿ ಅತಿ ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮ ಇದೆಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಬೆಂಗಳೂರಿನ ಅಧಿಕಾರ ಶಕ್ತಿ ಕೇಂದ್ರ ವಿಧಾನಸೌಧದ ಮೆಟ್ಟಿಲ ಮೇಲೆ ರಂಗು ರಂಗಿನ ವಸ್ತ್ರ ತೊಟ್ಟಿದ್ದ ಸಚಿವಾಲಯದ ಪುರುಷ ಮತ್ತು ಮಹಿಳಾ ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು ಶಿಷ್ಟಾಚಾರವನ್ನು ಬದಿಗಿಟ್ಟು ಒಟ್ಟಿಗೆ ನಿಂತು ಕನ್ನಡ ಗೀತೆಗಳನ್ನು ಹಾಡಿದರು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕೂಡ ಕನ್ನಡ ಗಾಯನಕ್ಕೆ ಧ್ವನಿಗೂಡಿಸಿದ್ದರು. ನಾಡ ಗೀತೆ ಹಾಡುವುದರೊಂದಿಗೆ ಆರಂಭವಾದ ಗೀತಗಾಯನದಲ್ಲಿ ‘ಬಾರಿಸು ಕನ್ನಡ ಡಿಂಡಿಮವ’, ‘ಜೋಗದ ಸಿರಿ ಬೆಳಕಿನಲ್ಲಿ’, ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಹಾಡಲಾಯಿತು.

ಎಲ್ಲೆಲ್ಲಿ ಎಷ್ಟು ಜನರಿಂದ ಗಾಯನ
*ಬೆಂಗಳೂರು ವಿಭಾಗದ 125 ಸ್ಥಳಗಳಲ್ಲಿ 1,61,232 ಮಂದಿ ಕನ್ನಡ ಗೀತೆಗಳಿಗೆ ಧ್ವನಿಗೂಡಿಸಿದರು.
* ಮೈಸೂರು ವಿಭಾಗದಲ್ಲಿ 96 ಸ್ಥಳಗಳಲ್ಲಿ 5,41,365 ಮಂದಿ ಗಾಯನದಲ್ಲಿ ಪಾಲ್ಗೊಂಡಿದ್ದರು.
* ಬೆಳಗಾವಿ ವಿಭಾಗದ 105 ಸ್ಥಳಗಳಲ್ಲಿ 10,74,418 ಮಂದಿ ಭಾಗವಹಿಸಿದ್ದರು.
* ಕಲಬುರಗಿ ವಿಭಾಗದಲ್ಲಿ 60 ಸ್ಥಳಗಳಲ್ಲಿ 77,125 ಮಂದಿ ಗೀತ ಗಾಯನದ ಮಾಧುರ್ಯಕ್ಕೆ ಜೊತೆಯಾದರು.
* ದೆಹಲಿ, ಮುಂಬಯಿ, ಕಾಸರಗೋಡು, ಪುಣೆ ಸೇರಿ ಹೊರ ರಾಜ್ಯಗಳಿಂದ 31 ಸ್ಥಳಗಳಲ್ಲಿ 350 ಮಂದಿ ಭಾಗವಹಿಸಿದ್ದರು.
* ಒಟ್ಟು 447 ಸ್ಥಳಗಳಲ್ಲಿ 20,49,743 ಮಂದಿ ಭಾಗವಹಿಸಿದ್ದರು

ಕನ್ನಡಕ್ಕಾಗಿ ಕಟಿಬದ್ಧರಾಗುವ ಪ್ರತಿಜ್ಞೆ
‘ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ, ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರರಿಗೂ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆ ಉಳಿಸಲು ಕಟಿಬದ್ಧವಾಗಿರುತ್ತೇನೆ’ ಎಂದು ಸಚಿವ ಸುನಿಲ್ ಕುಮಾರ್ ವಿಧಾನಸೌಧದ ಮುಂಭಾಗ ನೆರೆದವರಿಗೆ ಪ್ರತಿಜ್ಞೆ ಬೋಧಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ರಚಿಸಿದ ಬಾರಿಸು ಕನ್ನಡ ಡಿಂಡಿಮವ.. ಓ ಕರ್ನಾಟಕ ಹೃದಯ ಶಿವ.. ಗಾನದೊಂದಿಗೆ ಓಡಿಶಾದಿಂದ ಭಾಗಿಯಾಗಿದ್ದೇನೆ.
-ಪ್ರಲ್ಹಾದ ಜೋಷಿ, ಕೇಂದ್ರ ಸಚಿವ

ಸಾಮಾನ್ಯ ಕನ್ನಡಿಗರು ಪ್ರೀತಿ ಮತ್ತು ಅಭಿಮಾನದಿಂದ ಭಾಗವಹಿಸಿದ ಈ ಕಾರ್ಯಕ್ರಮ ದಾಖಲೆ ಸೃಷ್ಟಿಸಿದೆ. ‘ಕನ್ನಡತನ’ ಪುಟಿದೇಳಲು ಇದು ಸಹಾಯಕವಾಗಿದೆ.
-ವಿ.ಸುನಿಲ್ ಕುಮಾರ್,ಕನ್ನಡ ಮತ್ತು ಸಂಸ್ಕೃತಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.