ಬೆಂಗಳೂರು: ‘ಕನ್ನಡ ಸಾಹಿತ್ಯಕ್ಕೆ ವಿಭಿನ್ನ ಆಯಾಮ ಕೊಟ್ಟ ಸೃಜನಶೀಲ ಲೇಖಕರಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರಮುಖರು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಬಣ್ಣಿಸಿದರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ 85ನೇ ಜನ್ಮದಿನ ಪ್ರಯುಕ್ತ ಕಸಾಪ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಲವು ಬಗೆಯ ಆಸಕ್ತಿಗಳು, ವಿಭಿನ್ನ ಪ್ರಯೋಗಗಳು, ತಲಸ್ಪರ್ಶಿಯಾದ ಬದುಕಿನ ಶೋಧ, ದಿಟ್ಟ ವೈಚಾರಿಕ ನಿಲುವು ಮತ್ತು ಕಲಾತ್ಮಕ ಆಭಿವ್ಯಕ್ತಿ ತೇಜಸ್ವಿಯವರನ್ನು ಅನನ್ಯ ಲೇಖಕರನ್ನಾಗಿ ಮಾಡಿತು. ತೇಜಸ್ವಿ ಅವರ ಅಭಿವ್ಯಕ್ತಿಯ ಹರಹೂ ವಿಸ್ತಾರವಾಗಿದೆ. ಕಥೆ, ಕವಿತೆ, ನಾಟಕ, ಕಾದಂಬರಿ, ವೈಚಾರಿಕ ಲೇಖನಗಳು, ಪರಿಸರ, ಶಿಕಾರಿ ಸಂಬಂಧಿತ ಬರಹಗಳು, ಇತಿಹಾಸ, ತತ್ವಜ್ಞಾನ, ಮಾನವಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ ಹೀಗೆ ಹಲವು ಜ್ಞಾನಶಾಖೆಗಳನ್ನು ಒಳಗೊಳ್ಳುವಂತೆ, ಅವುಗಳ ಸಂಬಂಧದ ಎಳೆಗಳನ್ನು ಹಿಡಿದು ಕೂಡಿಸುವಂತೆ ರಚಿಸಿದ್ದಾರೆ. ಕನ್ನಡಕ್ಕೆ ಅಪರೂಪವೆನ್ನಿಸುವ ಬರಹಗಳಿಂದಲೇ ತೇಜಸ್ವಿಯವರು ವಿಭಿನ್ನ ಲೇಖಕರಾಗಿ ಹೊರಹೊಮ್ಮಿದ್ದಾರೆ’ ಎಂದು ಹೇಳಿದರು.
ಕಸಾಪ ಪ್ರಕಟಣಾ ವಿಭಾಗದ ಮುಖ್ಯಸ್ಥ ಎನ್.ಎಸ್.ಶ್ರೀಧರಮೂರ್ತಿ, ‘ತೇಜಸ್ವಿಯವರ ‘ತಬರನ ಕತೆ’ಯನ್ನು ಗಿರೀಶ ಕಾಸರವಳ್ಳಿಯವರು ಚಲನಚಿತ್ರವಾಗಿಸಿದರು. ಇದಕ್ಕೆ ಸ್ವರ್ಣ ಕಮಲ ಪುರಸ್ಕಾರವೂ ಲಭಿಸಿತು. ಅವರ ‘ಕರ್ವಾಲೋ’, ‘ಚಿದಂಬರ ರಹಸ್ಯ’, ‘ಕೃಷ್ಣೇಗೌಡರ ಆನೆ’, ‘ಕಿರಗೂರಿನ ಗಯ್ಯಾಳಿಗಳು’ ರಂಗಭೂಮಿಯ ಮೇಲೆ ಜನಪ್ರಿಯತೆ ಪಡೆದವು. ಇತ್ತೀಚೆಗೆ ಅವರ ‘ಡೇರ್ ಡೆವಿಲ್ ಮುಸ್ತಾಫಾ’ ಬಹು ಯಶಸ್ವಿ ಚಿತ್ರವಾಯಿತು. ಹೊಸ ಪೀಳಿಗೆಯ ಬರಹಗಾರರಿಗೆ ದಿಕ್ಸೂಚಿಯಂತಿದ್ದ ಅವರು, ವಿಜ್ಞಾನ, ಮಾಹಿತಿ ತಂತ್ರಜ್ಞಾನದ ಕುರಿತೂ ವಿಪುಲವಾಗಿ ಬರೆದಿದ್ದಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.