ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶೋತ್ತರ ಈಡೇರಿಸದ ಅಧಿವೇಶನ

ಸುವರ್ಣ ವಿಧಾನಸೌಧ ಮತ್ತೆ ಖಾಲಿಖಾಲಿ: ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಬದ್ಧತೆ ತೋರದ ಸರ್ಕಾರ
Last Updated 31 ಡಿಸೆಂಬರ್ 2022, 23:00 IST
ಅಕ್ಷರ ಗಾತ್ರ

ಬೆಳಗಾವಿ: ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡಬೇಕು ಎಂಬ ಉದ್ದೇಶದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಿಸಲಾಯಿತು. ಇಲ್ಲಿಯವರೆಗೆ 11 ಅಧಿವೇಶನಗಳು ಮುಗಿದರೂ ಜನರ ಆಶೋತ್ತರ ಮಾತ್ರ ಈಡೇರಲಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚೆ ಮಾಡುವ ಬದ್ಧತೆಯನ್ನೂ ಸರ್ಕಾರ ತೋರಲಿಲ್ಲ. ಹೀಗಾಗಿ, ಮಂತ್ರಿಗಳು ಮತ್ತೊಂದು ‘ಪಿಕ್ನಿಕ್‌’ ಮಾಡಿ ಹೋದರು ಎಂಬ ಆಕ್ರೋಶ ಜನವಲಯದಿಂದ ಕೇಳಿಬರುತ್ತಿದೆ.

ಚಳಿಗಾಲದ ಅಧಿವೇಶನಕ್ಕಾಗಿ ಜನಜಂಗುಳಿಯಿಂದ ತುಂಬಿದ ಸೌಧ ಈಗ ಖಾಲಿಖಾಲಿ. ಮಂತ್ರಿಗಳು, ಶಾಸಕರು, ಅಧಿಕಾರಿಗಳು, ಪೊಲೀಸರು, ಪ್ರತಿಭಟನಾಕಾರರು ಹೀಗೆ... ಒಂಬತ್ತು ದಿನ ಜನಜಾತ್ರೆಯೇ ಅಲ್ಲಿ ಸೇರಿತ್ತು. ವಿಧಾನಸಭೆ, ವಿಧಾನ ಪರಿಷತ್‌ ಸಭಾಂಗಣಗಳು, ಮೊಗಸಾಲೆ, ಕಚೇರಿಗಳಲ್ಲಿ ಹಗಲಿರುಳು ಗಡಿಬಿಡಿ ಕೆಲಸಗಳು. ಆದರೆ, ಈಗ ಇಡೀ ಸೌಧ ನಿಟ್ಟುಸಿರು ಬಿಟ್ಟು ಮೌನ ಹೊದ್ದು ಮಲಗಿದೆ.

ಶಕ್ತಿಸೌಧ ಇಡೀ ವರ್ಷ ಕ್ರಿಯಾಶೀಲವಾಗಬೇಕು ಎಂಬ ಜನರ ಕೂಗು ದಶಕವಾದರೂ ಸರ್ಕಾರಕ್ಕೆ ಕೇಳಿಸಲೇ ಇಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳಿಗಾಗಿಯೇ ಅವಧಿ ಮೀಸಲಿಡಬೇಕು ಎಂಬ ಧ್ವನಿ ಆರ್ತನಾದವಾಗಿಯೇ ಉಳಿಯಿತು.

10 ದಿನಗಳ ಅಧಿವೇಶನವನ್ನು 9 ದಿನಕ್ಕೇ ಮೊಟಕುಗೊಳಿಸಲಾಯಿತು. ಕೊನೆಯ ದಿನ ಮಾತ್ರ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಚರ್ಚೆ ಆರಂಭಿಸಲಾಯಿತು. ಆದರೆ, ಆಗ ಸದನದಲ್ಲಿ ಇದ್ದುದು ಕೇವಲ 29 ಶಾಸಕರು!

‘ಇದು ಕಾಟಾಚಾರದ ಚರ್ಚೆ’ ಎಂದು ಸ್ವತಃ ಸಭಾಧ್ಯಕ್ಷರೇ ಬೇಸರ ವ್ಯಕ್ತಪಡಿಸಿದ್ದೂ ಆಯಿತು.

45 ದಿನಗಳಲ್ಲಿ ಒಂದು ದಿನವೂ ಇಲ್ಲ: ಈ ಬಾರಿ ನಡೆದಿದ್ದು 15ನೇ ವಿಧಾನಸಭೆಯ 14ನೇ ಅಧಿವೇಶನ (2018ರಿಂದ). ಒಟ್ಟು 45 ದಿನಗಳ ಚರ್ಚೆ ನಡೆದಿದೆ. ಆದರೆ, ಉತ್ತರ ಕರ್ನಾಟಕದ ವಿಷಯಗಳಿಗೆ ಒಂದು ದಿನವೂ ನೀಡಿಲ್ಲ ಎನ್ನವ ಸಂಗತಿ ಜನರ ಅಸಮಾಧಾನಕ್ಕೆ ಕಾರಣ.

‘ಬೇರೆಬೇರೆ ಸಂದರ್ಭಗಳಲ್ಲಿ ಈ ಭಾಗದ ಸಮಸ್ಯೆಗಳ ಚರ್ಚೆ ನಡೆದಿರಬಹುದು. ಆದರೆ, ಪ್ರತ್ಯೇಕ ಸಮಯ ಮೀಸಲಾಗಿಲ್ಲ. ಇದು ನನಗೂ ಸಮಾಧಾನ ತಂದಿಲ್ಲ’ ಎಂಬ ಸ್ಪೀಕರ್‌ ಅವರ ಮಾತೇ ಸರ್ಕಾರದ ನಿಲುವಿಗೆ ಕನ್ನಡಿ ಹಿಡಿದಿದೆ.

ಯಾರಿಗೆ, ಏನು ಪ್ರಯೋಜನ?

l ಸುವರ್ಣ ಸೌಧದ ಮುಂದೆ ಚನ್ನಮ್ಮ, ರಾಯಣ್ಣ, ಗಾಂಧಿ ಮತ್ತು ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆ ಮಾಡಬೇಕು ಎಂಬುದು ದಶಕದ ಕೂಗು. ಕಳೆದ ಬಾರಿ ಅಧಿವೇಶನದಲ್ಲಿ ಇದರ ಭರವಸೆ ನೀಡಿದ್ದ ಸರ್ಕಾರಿ, ಈಗ ಭೂಮಿಪೂಜೆ ನೆರವೇರಿಸಿದೆ.

l ಹೊರ ಜಿಲ್ಲೆಗಳಿಂದ ಬಂದ ಅಪಾರ ಜನ, ಅಧಿಕಾರಿಗಳು, ಜನಪ್ರತಿನಿಧಿಗಳು ಬೆಳಗಾವಿ ಸಿಹಿತಿನಿಸುಗಳಾದ ಕುಂದಾ, ಕರದಂಟು ಖರೀದಿಸಿದರು. ಇದು ಬೇಕರಿ ವ್ಯಾಪಾರಿಗಳಿಗೆ ತುಸು ನೆಮ್ಮದಿ ತಂದಿತು.

l800ಕ್ಕೂ ಹೆಚ್ಚು ರೂಮುಗಳ ಬಾಡಿಗೆ ಮಾಡಿದ್ದರಿಂದ ಹೋಟೆಲ್‌, ರೆಸ್ಟೊರೆಂಟ್‌ ಉದ್ಯಮಿಗಳಿಗೆ ಲಾಭವಾಯಿತು.

ಜನರ ನಿರಾಸೆಗೆ ಕಾರಣಗಳೇನು?

l ಚರ್ಮಗಂಟು ರೋಗ ಬಾಧೆಯ ಕಾರಣ ಜಿಲ್ಲೆಯೂ ಸೇರಿದಂತೆ ಉತ್ತರ ಕರ್ನಾಟಕದ ಬಹುಪಾಲು ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯೊಂದರಲ್ಲೇ 6,000ಕ್ಕೂ ಜಾನುವಾರು ಸತ್ತಿವೆ. ರೈತರಿಗೆ ಪರಿಹಾರ ಪರಿಷ್ಕರಣೆ ಮಾಡುವ ಸಂಬಂಧ ಸೂಕ್ತ ಚರ್ಚೆ ನಡೆಯಲಿಲ್ಲ.

l ಬೆಳಗಾವಿ, ಬೀದರ್‌, ಭಾಲ್ಕಿ, ನಿಪ್ಪಾಣಿ, ಕಾರವಾರ ನಗರಗಳೂ ಸೇರಿ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಸದನದಲ್ಲಿ ಗೊತ್ತುವಳಿ ಮಂಡಿಸಲಾಯಿತು. ಇದೇ ಸಮಯಕ್ಕೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಅದನ್ನು ಖಂಡನಾ ನಿರ್ಣಯವನ್ನೂ ಮಂಡಿಸಲಿಲ್ಲ.

l ನಾಡು– ನುಡಿ– ಗಡಿ ವಿಷಯದಲ್ಲಿ ಪದೇಪದೇ ಕಾಲು ಕೆರೆದು ಜಗಳಕ್ಕೆ ಬರುವ ಮತ್ತು ಪುಂಡಾಟಿಕೆ ನಡೆಸುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಿಸಬೇಕು ಎಂಬ ಬೇಡಿಕೆಗೆ ಮನ್ನಣೆ ಸಿಗಲಿಲ್ಲ.

l ನೀರಾವರಿ, ಗಡಿ ಸಂರಕ್ಷಣಾ ಆಯೋಗ, ಗಡಿ ಅಭಿವೃದ್ಧಿ ಪ್ರಾಧಿಕಾರ ಈ ತರದ ಪ್ರಮುಖ ಕಚೇರಿಗಳನ್ನು ತ್ವರಿತಸ್ಥಳಾಂತರಿಸಬೇಕು ಎಂಬ ಬೇಡಿಕೆ ಚರ್ಚೆಗೇ ಬರಲಿಲ್ಲ.

l ಚಿಕ್ಕೋಡಿ ಜಿಲ್ಲೆ ರಚಿಸಬೇಕು ಎಂಬ ಆ ಭಾಗದ ಜನರ ಬೇಡಿಕೆಗೆ ಸ್ಪಂದನೆ ದೊರೆಯಲಿಲ್ಲ. ಜನ ನಡೆಸಿದ ಪಾದಯಾತ್ರೆಗೂ ಸ್ಪಂದನೆ ಸಿಗಲಿಲ್ಲ.

l ಮುಖ್ಯಮಂತ್ರಿ ಹೊಸ ಬಸ್‌ ನಿಲ್ದಾಣ ಉದ್ಘಾಟಿಸಿದರು. ಆದರೆ, ನಿಲ್ದಾಣಕ್ಕೆ ಚನ್ನಮ್ಮನ ನಾಮಕರಣ ಮಾಡಬೇಕೆಂಬ ಬೇಡಿಕೆ ಈಡೇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT