ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಹೆಸರಲ್ಲಿ ತೆರಿಗೆದಾರರ ಹಣ ಲೂಟಿ: ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

Published 20 ಮೇ 2024, 15:33 IST
Last Updated 20 ಮೇ 2024, 15:33 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ಯಾರಂಟಿ’ ಹೆಸರಿನಲ್ಲಿ ರಾಜ್ಯದ ತೆರಿಗೆದಾರರ ಹಣವನ್ನು ಲೂಟಿ ಮಾಡಿದ್ದು, ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡದೇ ಕಾಲ ಹರಣ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರದ ಒಂದು ವರ್ಷದ ಸಾಧನೆ. ಹೆಣ್ಣು ಮಕ್ಕಳ ಸರಣಿ ಕೊಲೆ ಈ ಸರ್ಕಾರದ ಸಾಧನೆಗೆ ಮತ್ತೊಂದು ಕೈಗನ್ನಡಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಅವರು ಸಿದ್ದರಾಮಯ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

‘ಕಾಂಗ್ರೆಸ್‌ ಸರ್ಕಾರ ಕೇವಲ ಒಂದು ವರ್ಷದಲ್ಲಿ ಖಜಾನೆಯನ್ನು ಸಂಪೂರ್ಣ ಖಾಲಿ ಮಾಡಿದೆ. ರಾಜ್ಯ ಕೊಲೆಗಡುಕರ ಸ್ವರ್ಗವಾಗಿ ಬದಲಾಗಿದೆ. ಶೂನ್ಯ ಸಾಧನೆ ಮಾಡಿರುವ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು; ಇಲ್ಲವೇ ರಾಜ್ಯಪಾಲರು ಈ ಸರ್ಕಾರವನ್ನು ವಜಾ ಮಾಡಬೇಕು’ ಎಂದು ಆಗ್ರಹಿಸಿದರು.

ಬಿ.ವೈ.ವಿಜಯೇಂದ್ರ ಮಾತನಾಡಿ, ಆರ್ಥಿಕವಾಗಿ ಸಮೃದ್ಧವಾಗಿದ್ದ ರಾಜ್ಯವನ್ನು ಗ್ಯಾರಂಟಿ ಹೆಸರಿನಲ್ಲಿ ದಿವಾಳಿ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯಕ್ಕೂ ಚಾಲನೆ ನೀಡಿಲ್ಲ, ಗುದ್ದಲಿ ಪೂಜೆ ನಡೆಸಿದ ಉದಾಹರಣೆ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಗ್ಯಾರಂಟಿ ಕೊಡುವುದನ್ನೇ ಅಭಿವೃದ್ಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕಾಗಿ ಹಣ ಕೊಟ್ಟು ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಆ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಗಿದೆ ಎಂದು ಭ್ರಮೆ ಹುಟ್ಟಿಸುವ ಪ್ರಯತ್ನ ಸರ್ಕಾರ ಮಾಡಿದೆ ಎಂದರು.

ಯಾತಕ್ಕಾಗಿ ಧನ್ಯವಾದ?:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಅವಧಿ ಮುಗಿಯಿತೆಂಬ ಕಾರಣಕ್ಕೆ ಜನರಿಗೆ ಧನ್ಯವಾದ ತಿಳಿಸಿದ್ದಾರೆಯೋ ಅಥವಾ ಕಾನೂನು ಸುವ್ಯವಸ್ಥೆ ಹಾಳು ಮಾಡಿರುವ ಕೊಲೆಗಡುಕರಿಗೆ ಧನ್ಯವಾದ ಹೇಳಿದ್ದಾರೆಯೋ ಗೊತ್ತಿಲ್ಲ. ನೇಹಾ, ಅಂಜಲಿ ಕೊಲೆಯಾದರು. ಇನ್ನು ಯಾವ ಹೆಣ್ಣು ಮಕ್ಕಳ ಕೊಲೆಯಾಗುತ್ತದೆ ಎಂಬ ಆತಂಕವಿದೆ. ಹೆಣ್ಣು ಮಕ್ಕಳು ಕಾಲೇಜಿಗೆ ಹೋದರೆ ಗ್ಯಾರಂಟಿ ಇಲ್ಲ. ಮನೆಯಿಂದ ಹೊರಬಂದರೆ ಗ್ಯಾರಂಟಿ ಇಲ್ಲ. ಸರ್ಕಾರ ಎಷ್ಟು ಉಚಿತ ನೀಡಿದರೂ ಜನಕ್ಕೆ ಬದುಕುವ ಗ್ಯಾರಂಟಿಯೇ ಇಲ್ಲ ಎಂದು ಅಶೋಕ ಕಿಡಿಕಾರಿದರು.

ಅಂಜಲಿ ಕೊಲೆಯ ಹಿಂದೆ ಪೊಲೀಸರ ಲೋಪವಿದೆ ಎಂದು ಗೃಹ ಸಚಿವರೇ ಹೇಳಿದ್ದಾರೆ ಎಂದ ಮೇಲೆ ಸರ್ಕಾರ ಯಾಕೆ ಬದುಕಿರಬೇಕು. ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮವಾದರೂ ಇಲ್ಲಿ ಕೇಳುವವರಿಲ್ಲ. ಬೆಂಗಳೂರಿನಲ್ಲಿ ಮುಸ್ಲಿಮರು ಪೊಲೀಸ್ ಠಾಣೆಗೆ ಹೋಗಿ ಕಪಾಳ ಮೋಕ್ಷ ಮಾಡುವ ಸ್ಥಿತಿ ಇದೆ. ಕೊಲೆಗಾರರನ್ನು ನೇಣಿಗೇರಿಸುವ ಬದಲು ಈ ಸರ್ಕಾರವನ್ನೇ ನೇಣಿಗೇರಿಸಬೇಕು ಎಂದರು.

ಸಾಮಾನ್ಯವಾಗಿ ಒಂದು ವರ್ಷದಲ್ಲಿ ಮಗು ಅಂಬೆಗಾಲಿಡುತ್ತದೆ. ಆದರೆ, ಸರ್ಕಾರ ಇನ್ನೂ ಟೇಕಾಫ್‌ ಆಗಿಲ್ಲ. ರಸ್ತೆ, ನೀರಾವರಿ, ಸೇತುವೆಗಳಂತಹ ಮೂಲಸೌಕರ್ಯಗಳ ಕೆಲಸ ಆಗುತ್ತಿಲ್ಲ. ಶಾಲೆ ಕಟ್ಟಡಗಳ ದುರಸ್ತಿಗೂ ಹಣವಿಲ್ಲ. ಬಸ್‌ ಚಾಲಕರಿಗೆ, ಆಂಬುಲೆನ್ಸ್‌ ಚಾಲಕರಿಗೆ ಸಂಬಳವಿಲ್ಲ. ರೈತರಿಗೆ ಹಾಲಿನ ಪ್ರೋತ್ಸಾಹ ಧನ ಸಿಕ್ಕಿಲ್ಲ. ರಾಜ್ಯ ಆರ್ಥಿಕ ಸ್ಥಿತಿ ವೆಂಟಿಲೇಟರ್‌ನಲ್ಲಿದೆ ಎಂದು ಹೇಳಿದರು.

₹300 ₹500 ನೀಡಿರುವುದು ಬರ ಪರಿಹಾರವೇ?

ಬರ ಪರಿಹಾರದ ಹೆಸರಿನಲ್ಲಿ ₹300 ₹500 ₹600 ನಂತೆ ಪರಿಹಾರ ಕೊಟ್ಟಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಬೇಡ್ವಾ? ರೈತರಿಗೆ ಬೆಲೆ ಇಲ್ವಾ? ಇನ್ನೂ 2 ಲಕ್ಷ ರೈತರಿಗೆ ಪರಿಹಾರ ಕೊಟ್ಟಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕೇಂದ್ರ ಸರ್ಕಾರ ಹಿಂದೆಂದೂ ಕೊಡದಷ್ಟು ಪ್ರಮಾಣದಲ್ಲಿ ಪರಿಹಾರ ನೀಡಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಎಷ್ಟು ನೀಡಿದೆ? ಇಲ್ಲಿರುವವರು ಕರ್ನಾಟಕದ ರೈತರೇ ಹೊರತು ಗುಜರಾತ್‌ ಪಶ್ಚಿಮ ಬಂಗಾಳದ ರೈತರಲ್ಲ  ಎಂದರು. ನಿಮ್ಮ ಯೋಗ್ಯತೆಗೆ ಬೆಂಕಿ ಹಾಕ ಬೆಳೆ ಬೆಳೆಯ ಬೇಡಿ ಎಂದು ರೈತರಿಗೆ ನೀವೇ ಹೇಳಿ ಈಗ ಬೆಳೆ ಬೆಳೆದಿಲ್ಲ ಎಂದು ರೈತರಿಗೆ ಪರಿಹಾರ ನಿರಾಕರಿಸುತ್ತಿದ್ದೀರಿ. ರೈತರು ಸತ್ತರೆ ತಮಗೇನು ನಷ್ಟ ಎನ್ನುವುದು ಈ ಸರ್ಕಾರದ ಧೋರಣೆ ಎಂದು ಹರಿಹಾಯ್ದರು.

‘ರಾಜ್ಯದಲ್ಲಿ ಶಿಕ್ಷಣ ಸಚಿವರಿಗೇ ಕನ್ನಡ ಬರುವುದಿಲ್ಲ. ಒಂದು ಕಾಲಕ್ಕೆ ಶಿಕ್ಷಣಕ್ಕೆ ಕರ್ನಾಟಕ ಹೆಸರಾಗಿತ್ತು. ಈಗ ಅಧೋಗತಿ ತಲುಪಿದೆ. ಮಾರ್ಕ್ಸ್‌ಗೂ ಬರ ಬಂದಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ 20 ಕೃಪಾಂಕ ನೀಡಿದ್ದಾರೆ. ಮುಂದಿನ ವರ್ಷ 100 ಕೃಪಾಂಕ ಕೊಟ್ಟರೂ ಅಚ್ಚರಿ ಇಲ್ಲ. 100 ಮಾರ್ಕ್ಸ್‌ ಕೂಡಾ ಫ್ರೀ ಆಗಿ ನೀಡಬಹುದು. ಕಷ್ಟಪಟ್ಟು ಓದುವ ಮಕ್ಕಳ ಕಥೆ ಏನು? ಸಿಇಟಿ ವ್ಯವಸ್ಥೆಯನ್ನೂ ಹಾಳು ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT