ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ವಿರುದ್ಧ ರಾಜ್ಯದ ‘ಯುದ್ಧ’; ಫೆ.7ಕ್ಕೆ ದೆಹಲಿಯಲ್ಲಿ ಪ್ರತಿಭಟನೆ

ಮೋದಿ, ನಿರ್ಮಲಾರಿಂದ ₹1.87 ಲಕ್ಷ ಕೋಟಿ ನಷ್ಟ
Published 6 ಫೆಬ್ರುವರಿ 2024, 0:29 IST
Last Updated 6 ಫೆಬ್ರುವರಿ 2024, 0:29 IST
ಅಕ್ಷರ ಗಾತ್ರ

ಬೆಂಗಳೂರು: ತೆರಿಗೆ ಪಾಲು ಹಂಚಿಕೆ, ಅನುದಾನ, ನೆರವು ನೀಡಿಕೆಯ ವಿಷಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಅಣಿಯಾಗಿದೆ.

ದೆಹಲಿಯ ಜಂತರ್‌ಮಂತರ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬಿಂಬಿಸಲು ಕಾಂಗ್ರೆಸ್ ಮುಂದಾಗಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಪ್ರಧಾನಿ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ವಾಗ್ದಾಳಿ ನಡೆಸಿದರು. ‘ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಯ್ಯುವ ಕೆಲಸ ಮಾಡುತ್ತಿದ್ದಾರೆ. ಹಾಲು ಕೊಡುವ ಹಸುವಿನ ಕೆಚ್ಚಲು ಕೊಯ್ಯಲು ಹೊರಟಿದ್ದಾರೆ’ ಎಂದು ಕೆಂಡಕಾರಿದರು.

‘ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ಹಂಚಿಕೆ, ಸೆಸ್‌, ಸರ್‌ಚಾರ್ಜ್‌ ಮತ್ತು ವಿಶೇಷ ಅನುದಾನದ ನೀಡಿಕೆಯಲ್ಲಿ 2017ರಿಂದ ಇಲ್ಲಿಯವರೆಗೆ ರಾಜ್ಯಕ್ಕೆ ₹1,87,867 ಕೋಟಿ ನಷ್ಟ ಆಗಿದೆ. ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಿ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯದ ವಿರುದ್ಧದ ಕೇಂದ್ರದ ಧೋರಣೆಯನ್ನು ನಾವು ವಿರೋಧಿಸುತ್ತೇವೆ’ ಎಂದರು.

‘ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿಗೆ ಹಣ ಕೊಡಬೇಡಿ ಎಂದು ನಾವು ಹೇಳುವುದಿಲ್ಲ. ಅವರೂ ಅಭಿವೃದ್ಧಿ ಹೊಂದಲಿ. ಆದರೆ, ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುವುದನ್ನು ಸಹಿಸುವುದಿಲ್ಲ. ಆದ್ದರಿಂದ ಜಂತರ್‌ ಮಂತರ್‌ನಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಪ್ರತಿಭಟನೆಯಲ್ಲಿ ಎಲ್ಲ ಸಚಿವರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಮತ್ತು ಸಂಸದರು ಭಾಗವಹಿಸಲಿದ್ದಾರೆ. ಬಿಜೆಪಿ ಶಾಸಕರು, ಸಂಸದರೂ ಬಂದು ಸೇರಿಕೊಳ್ಳಲಿ’ ಎಂದು ಸಿದ್ದರಾಮಯ್ಯ ಆಹ್ವಾನ ನೀಡಿದರು.

‘ಬಿಜೆಪಿ ವಿರುದ್ಧ ರಾಜಕೀಯ ಕಾರಣಕ್ಕಾಗಲಿ, ಚುನಾವಣೆಯ ಹಿನ್ನೆಲೆಯಲ್ಲಾಗಲಿ ನಾವು ಈ ಪ್ರತಿಭಟನೆ ಮಾಡುತ್ತಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಎಂಬುದನ್ನು ದೇಶಕ್ಕೇ ಮನವರಿಕೆ ಮಾಡಲು ಹೊರಟಿದ್ದೇವೆ. ಈ ಬಗ್ಗೆ ಶ್ವೇತಪತ್ರವನ್ನು ಹೊರಡಿಸುವ ಬಗ್ಗೆ ಗಂಭೀರ ಆಲೋಚನೆ ಮಾಡುತ್ತಿದ್ದೇವೆ’ ಎಂದೂ ಹೇಳಿದರು.

‘₹100 ಕ್ಕೆ ₹12 ಮಾತ್ರ ಸಿಗುತ್ತಿದೆ’

* ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಮೇಲೆ ರಾಜ್ಯದ ಜಿಎಸ್‌ಟಿ ಸಂಗ್ರಹದ ದರದಲ್ಲಿ ಗಮನಾರ್ಹ ಸಾಧನೆ (ಶೇ 17) ಮಾಡಿದ್ದೇವೆ. ಇಷ್ಟೆಲ್ಲ ಮಾಡಿದರೂ ಸಂಗ್ರಹವಾದ ಜಿಎಸ್‌ಟಿ ಮೊತ್ತದಲ್ಲಿ ರಾಜ್ಯಕ್ಕೆ ಶೇ 52ರಷ್ಟು ಮಾತ್ರ ಸಿಗುತ್ತಿದೆ. ಈ ವರ್ಷ ಸುಮಾರು ₹ 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ, ಸೆಸ್‌, ಸುಂಕ ರೂಪದಲ್ಲಿ ಸಂಗ್ರಹಿಸುತ್ತಿದೆ. ಆದರೆ, ನಮಗೆ ಕೇಂದ್ರ ನೀಡುತ್ತಿರುವುದು ಕೇವಲ ₹ 50,000 ಕೋಟಿಯಿಂದ ₹ 53,000 ಕೋಟಿ. ರಾಜ್ಯ ₹ 100 ಸಂಗ್ರಹಿಸಿ ಕೇಂದ್ರಕ್ಕೆ ಕೊಟ್ಟರೆ ಕರ್ನಾಟಕಕ್ಕೆ ವಾಪಸ್‌ ಕೊಡುವುದು ₹ 12ರಿಂದ ₹ 13 ಮಾತ್ರ

* 2018–19 ರಲ್ಲಿ ಕೇಂದ್ರ ಬಜೆಟ್‌ನ ಒಟ್ಟು ಗಾತ್ರ ₹ 24,42,213 ಕೋಟಿ ಇತ್ತು. ಆಗ ತೆರಿಗೆ ಪಾಲು ₹ 35,895 ಕೋಟಿ ಮತ್ತು ಕೇಂದ್ರ ಪುರಸ್ಕೃತ ಯೋಜನೆಯಡಿ ₹ 16,082 ಕೋಟಿ ಅನುದಾನ ಸಿಗುತ್ತಿತ್ತು. ಎರಡರಿಂದ ಒಟ್ಟಾರೆ ₹ 46,288 ಕೋಟಿಯಷ್ಟು ರಾಜ್ಯಕ್ಕೆ ಸಿಕ್ಕಿದೆ. 2023–24 ರ ಸಾಲಿನಲ್ಲಿ ಕೇಂದ್ರ ಬಜೆಟ್‌ ಗಾತ್ರ ₹ 45,03,097 ಕೋಟಿ. ಆದರೆ, ಈ ಬಾರಿ ಒಟ್ಟಾರೆ ₹ 50,257 ಮಾತ್ರ ಸಿಗುವ ಅಂದಾಜಿದೆ

* ಜಿಎಸ್‌ಟಿ ಅನುಷ್ಠಾನದಿಂದ ₹ 59,2754 ಕೋಟಿ (2017ರಿಂದ 2024), 15 ನೇ ಹಣಕಾಸು ಆಯೋಗದ ತೆರಿಗೆ ಪಾಲು ಹಂಚಿಕೆ ₹ 62,098 ಕೋಟಿ (2020ರಿಂದ 2025–26), ಸೆಸ್‌ ಮತ್ತು ಸರ್‌ಚಾರ್ಜ್‌ ಬಾಬ್ತಿನಿಂದ ₹ 55,000 ಕೋಟಿ (2017ರಿಂದ 2023–24), 15ನೇ ಹಣಕಾಸು ಆಯೋಗದ ವಿಶೇಷ ಅನುದಾನ ₹ 11,495 ಕೋಟಿ (2020ರಿಂದ 2021–22). ಒಟ್ಟು ₹ 1,87,867 ಕೋಟಿ ನಷ್ಟ ಆಗಿದೆ

* ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡುತ್ತಿರುವ ತೆರಿಗೆ ಪಾಲು ಮತ್ತು ಅನುದಾನ 2018–19 ಕ್ಕೆ ಹೋಲಿಸಿದರೆ ಶೇ 40ರಿಂದ ಶೇ 45 ರಷ್ಟು ಕಡಿಮೆ ಆಗಿದೆ

ರಾಜಸ್ವ ಸ್ವೀಕೃತಿ ಹಿನ್ನಡೆ ಏಕೆ ಉತ್ತರಿಸಿ

ರಾಜಸ್ವ ಸ್ವೀಕೃತಿ ಗುರಿ (ರೆವಿನ್ಯೂ ರಿಸೀಟ್‌)₹2 ಲಕ್ಷ 38 ಸಾವಿರ ಕೋಟಿ ಇದ್ದು, ಡಿಸೆಂಬರ್ ಅಂತ್ಯಕ್ಕೆ ₹1 ಲಕ್ಷ 61 ಸಾವಿರ ಕೋಟಿ ಮಾತ್ರ ಸ್ವೀಕಾರ ಆಗಿದೆ. ಶೇ 67 ರಷ್ಟು ಮಾತ್ರ ಸಾಧನೆ ಆಗಿದೆ. ನಮ್ಮ ಸರ್ಕಾರ ಇದ್ದಾಗ ಶೇ 82 ರಷ್ಟು ಗುರಿ ಸಾಧಿಸಿದ್ದೆವು. ಸಿಎಂಗೆ ಗುರಿ ಸಾಧಿಸಲು ಆಗುತ್ತಿಲ್ಲ. ಶೇ 82 ರಿಂದ ಶೇ 67 ಕ್ಕೆ ಇಳಿದುದಕ್ಕೆ ಮೋದಿ ಅವರು ಮೇಲೆ ಆರೋಪ ಮಾಡುವುದನ್ನು ಬಿಡಲಿ. ಗುರಿ ಮುಟ್ಟಲು ಏಕೆ ಸಾಧ್ಯವಾಗಿಲ್ಲ ಎಂದು ಜನರಿಗೆ ಉತ್ತರಿಸಲಿ

– ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

‘ಸಿದ್ದರಾಮಯ್ಯ ಅವರಿಂದಲೇ ರಾಜ್ಯಕ್ಕೆ ಅನ್ಯಾಯ’ : ಕೇಂದ್ರ ಕೊಟ್ಟಿದ್ದು ₹2,82,791 ಕೋಟಿ : ಬೊಮ್ಮಾಯಿ

ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ₹2,82,791 ಕೋಟಿ ಹಣ ಬಂದಿದ್ದು, ಯುಪಿಎ ಅವಧಿಯಲ್ಲಿ(2004–14) ತೆರಿಗೆ ಮೂಲಕ ಕೇವಲ ₹81,795 ಕೋಟಿ ಬಂದಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, 15 ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಅನ್ಯಾಯ ಆಗಲು ಮೂಲ ಪುರುಷ ಸಿದ್ದರಾಮಯ್ಯ ಅವರೇ ವಿನಃ ಬೇರೆ ಯಾರೂ ಅಲ್ಲ ಎಂದೂ ಆರೋಪಿಸಿದರು.

ಬೊಮ್ಮಾಯಿ ಹೇಳಿದ್ದೇನು?

15 ನೇ ಹಣಕಾಸು ಆಯೋಗ ರಾಜ್ಯಕ್ಕೆ ಹಣ ಕಡಿಮೆ ನೀಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. 15 ನೇ ಹಣಕಾಸು ಆಯೋಗದ ಸಮಿತಿಯು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರದ್ದೇ ಸರ್ಕಾರ ಇತ್ತು. ಇವರು ರಾಜ್ಯದ ಆರ್ಥಿಕ ಪರಿಸ್ಥಿತಿಯ ಚಿತ್ರಣ ಸರಿಯಾಗಿ ನೀಡದ ಕಾರಣ 15 ನೇ ಹಣಕಾಸು ಆಯೋಗ ತೆರಿಗೆ ಪಾಲನ್ನು ಶೇ 4.7 ರಿಂದ ಶೇ 3.6 ಕ್ಕೆ ಕಡಿಮೆ ಮಾಡಿತು. ಇದಕ್ಕೆ ಸಿದ್ದರಾಮಯ್ಯ ಅವರೇ ನೇರ ಕಾರಣ.

 * ಅಭಿವೃದ್ಧಿ ಅನುದಾನ ಯುಪಿಎ ಅವಧಿಯಲ್ಲಿ₹60,779 ಕೋಟಿ ಬಂದಿದ್ದರೆ, ನರೇಂದ್ರಮೋದಿ ಅವಧಿಯಲ್ಲಿ ₹2,08,882 ಕೋಟಿ ಬಿಡುಗಡೆಯಾಗಿದೆ. 15ನೇ ಹಣಕಾಸು ಆಯೋಗದ ಅವಧಿ ಇನ್ನೂ ಎರಡು ವರ್ಷ ಇದೆ. 2026 ರ ವೇಳೆಗೆ ₹2.5 ಲಕ್ಷ ಕೋಟಿ ಮೀರಿ ತೆರಿಗೆ ಹಂಚಿಕೆ ಬರಲಿದೆ. ಇದು ಯುಪಿಎ ಅವಧಿಯಲ್ಲಿದ್ದ 14 ನೇ ಹಣಕಾಸು ಆಯೋಗದ ಶಿಫಾರಸಿಗಿಂತ ₹1,52,309 ಕೋಟಿ ಅಧಿಕ.

*ಇದಲ್ಲದೇ ಕೇಂದ್ರದಿಂದ ರಾಜ್ಯಕ್ಕೆ ಬೇರೆ ಬೇರೆ ರೂಪದಲ್ಲಿ ಅನುದಾನ ಬರುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದ 2014 ರವರೆಗೆ ರಾಜ್ಯದಲ್ಲಿ ಕೇವಲ 6,000 ಕಿ.ಮೀ ಹೆದ್ದಾರಿ ಅಭಿವೃದ್ಧಿ ಆಗಿತ್ತು. ಮೋದಿ ಅವಧಿಯಲ್ಲಿ 13,500 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಗಿದೆ.

*ರಾಜ್ಯದ ರೈಲ್ವೆಗೆ ಯುಪಿಎ ಅವಧಿಯ 10 ವರ್ಷದಲ್ಲಿ ₹835 ಕೋಟಿ ಬಂದಿದ್ದರೆ, ಎನ್‌ಡಿಎ ಅವಧಿಯಲ್ಲಿ ₹11,000 ಕೋಟಿ ಬಂದಿದೆ. 2023–24 ನೇ ಬಜೆಟ್‌ನಲ್ಲಿ ₹7,524 ಕೋಟಿ ಹಂಚಿಕೆಯಾಗಿದೆ. ರೈಲ್ವೇ ವಿದ್ಯುದ್ದೀಕರಣಕ್ಕೆ 1947 ರಿಂದ 2014 ರವರೆಗೆ ರಾಜ್ಯದಲ್ಲಿ ಕೇವಲ 16 ಕಿ.ಮೀ ಅಭಿವೃದ್ಧಿ ಆಗಿದ್ದರೆ, ಎನ್‌ಡಿಎ ಅವಧಿಯಲ್ಲಿ 3,265 ಕಿ.ಮೀ ಅಭಿವೃದ್ಧಿ ಆಗಿದೆ.

*ಅನ್ನಭಾಗ್ಯದ  ಐದು ಕೆ.ಜಿ. ಅಕ್ಕಿ ನೀಡುತ್ತಿರುವುದೂ ಕೇಂದ್ರ ಸರ್ಕಾರವೇ. ಆದರೆ ಸಿದ್ದರಾಮಯ್ಯ ತಾವೇ ಅದನ್ನು ಕೊಡುತ್ತಿರುವುದಾಗಿ ಸುಳ್ಳು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ.

*ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ₹5,300 ಕೋಟಿ ಘೋಷಿಸಿದೆ. ಕೇಂದ್ರದ ಹಣ ಬಿಡುಗಡೆ ಮಾಡಬೇಕಾದರೆ ರಾಜ್ಯ ಶೇ 50 ರಷ್ಟ ಭರಿಸಬೇಕು. ರಾಜ್ಯ ಸರ್ಕಾರ ಈವರೆಗೆ ಒಂದು ಪೈಸೆ ಬಿಡುಗಡೆ ಮಾಡಿಲ್ಲ.

*ರಾಜ್ಯ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ್ದು ಸಿದ್ದರಾಮಯ್ಯ ಅವಧಿಯಲ್ಲಿಯೇ. ಮುಂದೆಯೂ ಅವರು ಸಾಲ ಮಾಡಲಿದ್ದಾರೆ.

* ಗ್ಯಾರಂಟಿ ಯೋಜನೆಯ ಯಶಸ್ಸಿನ ಬಗ್ಗೆ ಸಿದ್ದರಾಮಯ್ಯ ಶ್ವೇತ ಪತ್ರ ಹೊರಡಿಸಲಿ.

ಕೇಂದ್ರದ ಬಳಿ ಮಾತನಾಡಲು ಯಡಿಯೂರಪ್ಪ ಮತ್ತು ಬೊಮ್ಮಾಯಿಗೆ ಬಾಯಿಯೇ ಇಲ್ಲ. ವಿಜಯೇಂದ್ರಗೆ ಲೆಕ್ಕ ಗೊತ್ತೇನ್ರಿ, ಅಶೋಕನಿಗೆ ಏನೂ ಗೊತ್ತಾಗುವುದಿಲ್ಲ. ಬಿಜೆಪಿ ಸಂಸದರು ಬಾಯಿಯೇ ಬಿಡೋದಿಲ್ಲ
ಸಿದ್ದರಾಮಯ್ಯ, ಮುಖ್ಯಮಂತ್ರಿ
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಈ ಅನ್ಯಾಯವನ್ನು ನೋಡಿಕೊಂಡು ಇನ್ನೆಷ್ಟು ದಿನ ಸುಮ್ಮನೆ ಕೂರಬೇಕು? ಅದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ
ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ
ಅಧಿಕಾರಕ್ಕೆ ಬಂದ 9 ತಿಂಗಳಲ್ಲೇ ಸಿದ್ದರಾಮಯ್ಯ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ. ಜನರ ಗಮನ ಬೇರೆಡೆ ಸೆಳೆಯಲು ದೆಹಲಿಯಲ್ಲಿ ಪ್ರತಿಭಟನೆಯ ಬೀದಿನಾಟಕ ಮಾಡಲು ಹೊರಟಿದೆ.
ಆರ್‌.ಅಶೋಕ, ವಿರೋಧ ಪಕ್ಷದ ನಾಯಕ, ವಿಧಾನಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಸತ್ಯ ಮುಚ್ಚಿಟ್ಟು ರಾಜಕೀಯ ಸ್ಟಂಟ್‌ ಮಾಡುತ್ತಿದ್ದಾರೆ. ಇವರ ವೈಫಲ್ಯದಿಂದ ರಾಜ್ಯ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಅದನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ
ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT