ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತೂರು ಕೇಳಿದ್ದಕ್ಕೆ ಕೋಲಾರಕ್ಕೆ ₹10 ಕೋಟಿ ವಿಶೇಷ ಅನುದಾನ: ಶ್ರೀನಿವಾಸ ಗೌಡ

ಮಾಜಿ ಶಾಸಕ ವರ್ತೂರು ಪ್ರಕಾಶ್‌ ಮನವಿಗೆ ಮುಖ್ಯಮಂತ್ರಿ ಮನ್ನಣೆ: ಆರೋಪ
Last Updated 2 ಮಾರ್ಚ್ 2023, 20:58 IST
ಅಕ್ಷರ ಗಾತ್ರ

ಕೋಲಾರ: ‘ಮಾಜಿ ಶಾಸಕ ವರ್ತೂರು ಪ್ರಕಾಶ್‌ ಕೋರಿಕೆಯಂತೆರ ಕೋಲಾರ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ₹10 ಕೋಟಿ ಅನುದಾನ ನೀಡಿರುವುದು ಕ್ಷೇತ್ರದ ಜನಪ್ರತಿನಿಧಿಗಳಿಗೆ ಮಾಡಿದ ಅವಮಾನ. ಇದರಿಂದ ಹಾಲಿ ಶಾಸಕನಾದ ನನ್ನ ಹಕ್ಕುಚ್ಯುತಿಯಾಗಿದೆ ಎಂದು ಕೆ.ಶ್ರೀನಿವಾಸಗೌಡ ಟೀಕಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಾನು ಕ್ಷೇತ್ರದ ಚುನಾಯಿತ ಶಾಸಕ. ನನ್ನ ಗಮನಕ್ಕೆ ತಾರದೆ ಮಾಜಿ ಶಾಸಕರ ಕೋರಿಕೆಯಂತೆ ₹10 ಕೋಟಿ ಅನುದಾನ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಧೋರಣೆ ಖಂಡನೀಯ. ಈ ಸಂಬಂಧ ಅವರನ್ನೇ ಭೇಟಿಯಾಗಿ ಚರ್ಚಿಸುತ್ತೇನೆ’ ಎಂದರು.

‘ಕ್ಷೇತ್ರದ ವ್ಯಾಪ್ತಿಯಲ್ಲಿ 433 ಕಾಮಗಾರಿಗಳಿಗೆ ಸಂಬಂಧಿಸಿ ಅನುದಾನ ಮಂಜೂರು ಮಾಡಲು ಡಿ.15ರಂದು ಆರ್ಥಿಕ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಪತ್ರ ಬಂದಿದೆ. ಡಿ.29ರಂದು 89 ರಸ್ತೆ ಕಾಮಗಾರಿಗಳಿಗೆ ಮುಖ್ಯಮಂತ್ರಿ ವಿಶೇಷ ಮಂಜೂರಾತಿಯಡಿ ಅನುದಾನ ಮಂಜೂರಿಗೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒಗೆ ಪತ್ರ ಮುಖೇನ ಸೂಚಿಸಿದ್ದಾರೆ’ ಎಂದರು.

‘ಅನುದಾನ ನೀಡುವ ಕುರಿತ ಮುಖ್ಯಮಂತ್ರಿ ಕ್ರಮ ಸರಿ ಇಲ್ಲ. ಇಡೀ ರಾಜ್ಯದಲ್ಲೇ ಇಂತಹ ಕೆಟ್ಟ ಸಂಪ್ರದಾಯ ನಡೆದಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವುದೇ ಅರ್ಥವಾಗುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಎಲ್.ಅನಿಲ್‌ ಕುಮಾರ್‌, ‘ಕ್ಷೇತ್ರಕ್ಕೆ ಅನುದಾನ ನೀಡಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಮಾಜಿ ಶಾಸಕ ವರ್ತೂರು ಪ್ರಕಾಶ್‌ ಅವರ ಕೋರಿಕೆಯಂತೆ ನೀಡಿರುವುದು ಸರಿಯಲ್ಲ. ಆ ಅಧಿಕಾರವೂ ಇಲ್ಲ. ಇದರಿಂದ ಶಾಸಕರ ಹಕ್ಕುಚ್ಯುತಿಯಾಗಿದೆ’ ಎಂದರು.

‘ಕೆಆರ್‌ಐಡಿಎಲ್‌ ಮೂಲಕ ಕಾಮಗಾರಿ ಅನುಷ್ಠಾನಗೊಳಿಸುತ್ತಿದ್ದು, ₹10 ಕೋಟಿ ಕಾಮಗಾರಿಯಲ್ಲಿ ಮಾಜಿ ಶಾಸಕರ ಚುನಾವಣಾ ಪ್ರಚಾರಕ್ಕಾಗಿ ಶೇ 10ರಷ್ಟು ಕಮಿಷನ್ ಮುಂಗಡವಾಗಿ ನೀಡಬೇಕು ಎನ್ನುವ ವಿಚಾರ ತಿಳಿದುಬಂದಿದೆ. ಇದನ್ನು ನಿಲ್ಲಿಸದಿದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಈ ಸಂಬಂಧ ವಿಧಾನಸಭಾ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸಭಾಪತಿಗೆ ದೂರು ನೀಡುವುದಾಗಿ ಶ್ರೀನಿವಾಸಗೌಡ ಹಾಗೂ ಅನಿಲ್‌ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT