ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ಆಕಾಂಕ್ಷಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಸಿಎಂ ಬೊಮ್ಮಾಯಿ

Last Updated 13 ಅಕ್ಟೋಬರ್ 2022, 13:02 IST
ಅಕ್ಷರ ಗಾತ್ರ

ಹೂವಿನಹಡಗಲಿ (ವಿಜಯನಗರ ಜಿಲ್ಲೆ): 2023ರ ಚುನಾವಣೆಯಲ್ಲಿ ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸಲು ಎಲ್ಲರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ಆಕಾಂಕ್ಷಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಳೆದ ಚುನಾವಣೆಯಲ್ಲಿ ಮತಗಳ ವಿಭಜನೆಯಿಂದ ಬಿಜೆಪಿಗೆ ಸೋಲಾಗಿದೆ. ‘ಈ ಬಾರಿ ಯಾರೇ ಅಭ್ಯರ್ಥಿಯಾದರೂ ವೈಯಕ್ತಿಕ ಹಿತಾಸಕ್ತಿ ಮರೆತು ನಾವೆಲ್ಲ ಪಕ್ಷದ ಗೆಲುವಿಗೆ ಪಣ ತೊಡುತ್ತೇವೆ. ಒಂದು ವೇಳೆ ವ್ಯತ್ಯಾಸವಾದಲ್ಲಿ ಜನರು ಕೊಡುವ ಶಿಕ್ಷೆಗೆ ಬದ್ದರಿರುತ್ತೇವೆ’ ಎಂದು ಪ್ರಮಾಣ ಮಾಡಿಸಿದರು.

ಇದನ್ನೂ ಓದಿ:

ಆಕಾಂಕ್ಷಿಗಳಾಗಿರುವ ಮಾಜಿ ಶಾಸಕ ಬಿ.ಚಂದ್ರನಾಯ್ಕ, ಮುಖಂಡರಾದ ಓದೋ ಗಂಗಪ್ಪ, ಬಿ.ರಾಮಾನಾಯ್ಕ, ಎಲ್.ಮಧುನಾಯ್ಕ, ಎಸ್.ದೂದನಾಯ್ಕ, ಶಿವಪುರ ಸುರೇಶ, ಎಲ್.ಕೆ.ರವಿಕುಮಾರ್, ಎಚ್.ಹನುಮಂತಪ್ಪ, ಕೊಟ್ರನಾಯ್ಕ ಪ್ರತಿಜ್ಞೆ ಸ್ವೀಕರಿಸಿದರು.

ಬಿಜೆಪಿ ಸೇರ್ಪಡೆ:
ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಕೆ.ಬಿ.ವೀರಭದ್ರಪ್ಪ, ಸಿ.ಮೋಹನರೆಡ್ಡಿ, ಕೆ.ಬಿ.ವೀರೇಶ, ಈಟಿಗರ ಮಲ್ಲಪ್ಪ, ಪುರಸಭೆ ಮಾಜಿ ಸದಸ್ಯ ಸಂತೋಷ ಜೈನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪರಮೇಶ್ವರನಾಯ್ಕ, ಯುವ ಮುಖಂಡರಾದ ಹಕ್ಕಂಡಿ ಮಹಾದೇವ, ಹಣ್ಣಿ ಶಶಿಧರ ಅವರು ಮುಖ್ಯಮಂತ್ರಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಎಂ.ಪಿ.ಪ್ರಕಾಶ್ ನೆನಪು….
ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಅವರನ್ನು ನೆನಪು ಮಾಡಿಕೊಂಡರು.

ಇದನ್ನೂ ಓದಿ:

1982 ರಲ್ಲಿ ಚುನಾವಣೆಗೆ ಸ್ಪರ್ಧಿಸಿಲ್ಲ ಎಂದು ಪ್ರಕಾಶ್ ಹಠ ಹಿಡಿದು ಕುಳಿತಾಗ ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರಿಗೆ ಬಿ.ಫಾರಂ ನೀಡಿ ಸ್ಪರ್ಧಿಸುವಂತೆ ಹುಮ್ಮಸ್ಸು ತುಂಬಿದ್ದರು. ಕಾಂಗ್ರೆಸ್ ವಿರುದ್ಧ ರಾಜಕಾರಣ ಮಾಡುತ್ತಾ ಬಂದಿದ್ದ ಅವರು ಕೊನೇ ಗಳಿಗೆಯಲ್ಲಿ ಕಾಂಗ್ರೆಸ್ ಸೇರಿ ಸೋಲನುಭವಿಸಿದರು. ಕಾಂಗ್ರೆಸ್ ಒಂಥರಾ ಅರಿಷ್ಟ ಇದ್ದಂಗೆ, ಅಲ್ಲಿಗೆ ಹೋದೋರೆಲ್ಲ ಸೋಲ್ತಾರೆ ಎಂದರು.

ಎಂ.ಪಿ.ಪ್ರಕಾಶರ ನೆಚ್ಚಿನ ಯೋಜನೆ, ಅಭಿವೃದ್ಧಿಯ ಚಿಂತನೆಗಳನ್ನು ನಾವು ಸಾಕಾರಗಳಿಸಿ ಅವರಿಗೆ ಗೌರವ ತರುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಕ್ರೀಡಾಂಗಣ ತುಂಬಾ ರೊಜ್ಜು:
ಗುರುವಾರ ಬೆಳಿಗ್ಗೆ ರಭಸದ ಮಳೆ ಸುರಿದಿದ್ದರಿಂದ ತಾಲ್ಲೂಕು ಕ್ರೀಡಾಂಗಣದಲ್ಲಿ ನೀರು ನಿಂತಿತ್ತು. 10 ಗಂಟೆವರೆಗೂ ಹನಿಯುತ್ತಲೇ ಇದ್ದುದರಿಂದ ಕಾರ್ಯಕ್ರಮ ಅನಿಶ್ಚಿತತೆಯಿಂದ ಕೂಡಿತ್ತು. ಮಳೆಯಿಂದಾಗಿ ಇಡೀ ಕ್ರೀಡಾಂಗಣ ಕೆಸರುಗದ್ದೆಯಾಗಿತ್ತು. ಕಾರ್ಯಕ್ರಮ ವೀಕ್ಷಣೆಗೆ ಬಂದವರು ಕೆಸರು, ರೊಜ್ಜು ದಾಟಿಕೊಂಡು ಹೋಗಲು ಪರದಾಡಿದರು.

ಹೆಲಿಕಾಪ್ಟರ್ ಬರಲಿಲ್ಲ:
ಹವಾಮಾನ ವೈಪರೀತ್ಯದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಇದ್ದ ಹೆಲಿಕಾಪ್ಟರ್ ಪಟ್ಟಣದಲ್ಲಿ ಇಳಿಸಲಾಗದೇ ಹಗರಿಬೊಮ್ಮನಹಳ್ಳಿ ಹೆಲಿಪ್ಯಾಡ್ ನಲ್ಲಿ ಇಳಿಸಲಾಯಿತು. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಹಡಗಲಿಗೆ ಆಗಮಿಸಿದರು. ಪಟ್ಟಣದಲ್ಲಿ ಅಂಬೇಡ್ಕರ್ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹಿರೇಹಡಗಲಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT