ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Elections: ರಾಜ್ಯದಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ

Last Updated 25 ಫೆಬ್ರುವರಿ 2023, 4:03 IST
ಅಕ್ಷರ ಗಾತ್ರ

ರಾಜ್ಯ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ ಪ್ರಮಾಣದಲ್ಲಿ ಇದೆ. 2018ರಲ್ಲಿ 224 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಒಟ್ಟು 2,636 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಆದರೆ ಇವರಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 219 ಮಾತ್ರ. ಕಣದಲ್ಲಿದ್ದ ಒಟ್ಟು ಅಭ್ಯರ್ಥಿಗಳಲ್ಲಿ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇತ್ತು. ಇನ್ನು ವಿಧಾನಸಭೆಗೆ ಆಯ್ಕೆಯಾದ ಅಭ್ಯರ್ಥಿಗಳಲ್ಲೂ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ 4ಕ್ಕಿಂತಲೂ ಕಡಿಮೆ. ಒಟ್ಟಿನಲ್ಲಿ ರಾಜ್ಯವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದೆ.

ಪುರುಷ ಅಭ್ಯರ್ಥಿಗಳು

* ಕಣದಲ್ಲಿದ್ದ 2,417 ಅಭ್ಯರ್ಥಿಗಳಲ್ಲಿ 215 ಮಂದಿ ವಿಧಾನಸಭೆಗೆ ಚುನಾಯಿತರಾಗುವಲ್ಲಿ ಯಶಸ್ವಿಯಾಗಿದ್ದರು. ಕಣದಲ್ಲಿದ್ದ ಒಟ್ಟು ಪುರುಷ ಅಭ್ಯರ್ಥಿಗಳಲ್ಲಿ ವಿಧಾನಸಭೆಗೆ ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣ ಶೇ 8.93ರಷ್ಟು ಮಾತ್ರ

* ಒಟ್ಟು 1,925 ಪುರುಷ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಕಣದಲ್ಲಿದ್ದ ಒಟ್ಟು ಪುರುಷ ಅಭ್ಯರ್ಥಿಗಳಲ್ಲಿ ಠೇವಣಿ ಕಳೆದುಕೊಂಡವರ ಪ್ರಮಾಣ ಶೇ 79.6ರಷ್ಟು

* ಆ ಚುನಾವಣೆಯಲ್ಲಿ ಪಕ್ಷಗಳ ಮೂಲಕ ಮತ್ತು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದ ಒಟ್ಟು ಪುರುಷ ಅಭ್ಯರ್ಥಿಗಳಲ್ಲಿ ವಿಧಾನಸಭೆಗೆ ಆಯ್ಕೆಯಾದವರನ್ನು ಹೊರತುಪಡಿಸಿ, 277 ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

ಮಹಿಳಾ ಅಭ್ಯರ್ಥಿಗಳು

* ಕಣದಲ್ಲಿದ್ದ 219 ಅಭ್ಯರ್ಥಿಗಳಲ್ಲಿ 7 ಮಂದಿ ಮಾತ್ರ ವಿಧಾನಸಭೆಗೆ ಚುನಾಯಿತರಾಗುವಲ್ಲಿ ಯಶಸ್ವಿಯಾಗಿದ್ದರು. ಕಣದಲ್ಲಿದ್ದ ಒಟ್ಟು ಮಹಿಳಾ ಅಭ್ಯರ್ಥಿಗಳಲ್ಲಿ ವಿಧಾನಸಭೆಗೆ ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣ ಶೇ 3.1ರಷ್ಟು ಮಾತ್ರ

* ಒಟ್ಟು 200 ಮಹಿಳಾ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಕಣದಲ್ಲಿದ್ದ ಒಟ್ಟು ಮಹಿಳಾ ಅಭ್ಯರ್ಥಿಗಳಲ್ಲಿ ಠೇವಣಿ ಕಳೆದುಕೊಂಡವರ ಪ್ರಮಾಣ ಶೇ 91.2ರಷ್ಟು

* ಆ ಚುನಾವಣೆಯಲ್ಲಿ ಪಕ್ಷಗಳ ಮೂಲಕ ಮತ್ತು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದ ಒಟ್ಟು ಮಹಿಳಾ ಅಭ್ಯರ್ಥಿಗಳಲ್ಲಿ ವಿಧಾನಸಭೆಗೆ ಆಯ್ಕೆಯಾದವರನ್ನು ಹೊರತುಪಡಿಸಿ, 12 ಅಭ್ಯರ್ಥಿಗಳು ಮಾತ್ರ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

224 ಕರ್ನಾಟಕ ವಿಧಾನಸಭೆಯ ಒಟ್ಟು ಸ್ಥಾನಗಳು
216 ಶಾಸಕರ ಸಂಖ್ಯೆ (96.8%)
7 ಶಾಸಕಿಯರ ಸಂಖ್ಯೆ (3.2%)

ಕಾಂಗ್ರೆಸ್‌ಗೇ ಹೆಚ್ಚು ಮತ. ಆದರೆ...
ರಾಜ್ಯ ವಿಧಾನಸಭೆಗೆ 2004ರಿಂದ ನಡೆದ ಒಟ್ಟು ನಾಲ್ಕು ಚುನಾವಣೆಗಳಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಹೆಚ್ಚು ಮತಗಳನ್ನು ಪಡೆದದ್ದು ಕಾಂಗ್ರೆಸ್‌. ಹೆಚ್ಚು ಮತ ಪಡೆದ ಪಕ್ಷಗಳ ಸ್ಥಾನದಲ್ಲಿ ಕಾಂಗ್ರೆಸ್‌ನ ನಂತರದ ಸ್ಥಾನದಲ್ಲಿ ಇರುವುದು ಬಿಜೆಪಿ. ಮೂರನೇ ಸ್ಥಾನದಲ್ಲಿ ಜೆಡಿಎಸ್‌ ಇದೆ. ಇಷ್ಟೂ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದರೂ, ಆ ಮತಗಳೆಲ್ಲವೂ ಗೆಲುವಾಗಿ ಮಾರ್ಪಾಡಾಗಿಲ್ಲ. 2004ರಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ 35.27ರಷ್ಟು ಮತಗಳನ್ನು ಪಡೆದುಕೊಂಡಿದ್ದರೂ, ಕಾಂಗ್ರೆಸ್‌ ಗೆದ್ದಿದ್ದು 65 ಕ್ಷೇತ್ರಗಳಲ್ಲಿ. ಆದರೆ, ಶೇ 28.33ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ 79 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನು ಶೇ 20.19ರಷ್ಟು ಮತಗಳನ್ನು ಪಡೆದಿದ್ದ ಜೆಡಿಎಸ್‌ 58 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಇಷ್ಟೂ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಮತ ಪ್ರಮಾಣದಲ್ಲಿ ಗಣನೀಯ ಬದಲಾವಣೆ ಏನೂ ಆಗಿಲ್ಲ. ಆದರೆ, ಪಕ್ಷವು ಗೆದ್ದ ಕ್ಷೇತ್ರಗಳ ಸಂಖ್ಯೆಯಲ್ಲಿ ಮಾತ್ರ ಭಾರಿ ಏರಿಳಿತವಾಗಿದೆ. ಅಂತೆಯೇ ಬಿಜೆಪಿ ಪಡೆದ ಮತಪ್ರಮಾಣ ಕಡಿಮೆಯಾದರೂ ಹೆಚ್ಚು ಕ್ಷೇತ್ರಗಳು ಸಿಕ್ಕಿವೆ. ಬಿಜೆಪಿಯ ಮತ ಪ್ರಮಾಣ ಇಳಿಕೆಯಾದಾಗ, ಅದು ಗೆದ್ದ ಕ್ಷೇತ್ರಗಳ ಸಂಖ್ಯೆಯೂ ಇಳಿಕೆಯಾಗಿದೆ. ಮತ ಪ್ರಮಾಣ ಏರಿಕೆಯಾದಾಗ, ಅದು ಗೆದ್ದ ಕ್ಷೇತ್ರಗಳ ಸಂಖ್ಯೆಯೂ ಏರಿಕೆಯಾಗಿದೆ.

2018ರ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಕಾಂಗ್ರೆಸ್‌ಗೆ ದೊರೆತ ಮತಗಳ ಪ್ರಮಾಣ ಶೇ 38.08. ಆದರೆ, ಕಾಂಗ್ರೆಸ್‌ ಗೆದ್ದಿದ್ದು 78 ಕ್ಷೇತ್ರಗಳಲ್ಲಿ ಮಾತ್ರ. ಆದರೆ ಆ ಚುನಾವಣೆಯಲ್ಲಿ ಬಿಜೆಪಿ ಶೇ 36.22ರಷ್ಟು ಮತಗಳನ್ನು ಪಡೆದಿದ್ದರೂ, 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನು ಶೇ 18.36ರಷ್ಟು ಮತಗಳನ್ನು ಪಡೆದಿದ್ದರೂ ಜೆಡಿಎಸ್‌ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT