ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧ ಪ್ರವೇಶಕ್ಕೆ ಸರದಿ ನಿಲ್ಲಬೇಕಿಲ್ಲ: ಯು.ಟಿ. ಖಾದರ್‌

Published 8 ಆಗಸ್ಟ್ 2023, 14:42 IST
Last Updated 8 ಆಗಸ್ಟ್ 2023, 14:42 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧ ಪ್ರವೇಶಕ್ಕೆ ಸಾರ್ವಜನಿಕರು ಇನ್ನು ಮುಂದೆ ಸರದಿಯಲ್ಲಿ ಕಾಯಬೇಕಿಲ್ಲ. ಸಮಯ ವ್ಯರ್ಥ ಮಾಡಿಕೊಂಡು ದಿನಗಟ್ಟಲೆ ಅಲೆಯಬೇಕಿಲ್ಲ. ಶಾಸಕರ ಸೋಗಿನಲ್ಲಿ ಬೇರೊಬ್ಬರು ಸದನದ ಒಳಗೆ ಪ್ರವೇಶಿಸಲೂ ಸಾಧ್ಯವಿಲ್ಲ.

ಬೆಂಗಳೂರು ಪ್ರೆಸ್‌ಕ್ಲಬ್‌ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌, ವಿಧಾನಸೌಧ, ವಿಕಾಸಸೌಧಕ್ಕೆ ಕೆಲಸದ ನಿಮಿತ್ತ ಭೇಟಿ ನೀಡುವ ಸಾರ್ವಜನಿಕರು ತಾವು ಯಾರನ್ನು ಭೇಟಿಯಾಗಬೇಕು, ಭೇಟಿಯ ಉದ್ದೇಶ ಏನು ಎಂಬ ವಿವರಗಳನ್ನು ಮನೆಯಲ್ಲೇ ಕುಳಿತು ಹೊಸದಾಗಿ ರೂಪಿಸಲಾಗುತ್ತಿರುವ ಪೋರ್ಟಲ್‌ನಲ್ಲಿ ನಮೂದಿಸಿದರೆ ಸಾಕು. ಭೇಟಿಯಾಗಬೇಕಾದ ಸಚಿವರು, ಅಧಿಕಾರಿಗಳ ಲಭ್ಯತೆಯ ಆಧಾರದಲ್ಲಿ ದಿನ, ಸಮಯ ನೀಡಲಾಗುತ್ತದೆ. ಈ ಕುರಿತು ಪೊಲೀಸ್‌, ತಾಂತ್ರಿಕ ಕ್ಷೇತ್ರದ ಪರಿಣತರು, ವಿಧಾನಸೌಧದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ನೂತನ ವ್ಯವಸ್ಥೆ ಶೀಘ್ರ ಜಾರಿಗೊಳಿಸಲಾಗುವುದು ಎಂದರು.

ಅಧಿವೇಶನ ವೀಕ್ಷಣೆಗೆ ಬರುವವರಿಗೂ ಇದೇ ಮಾದರಿಯನ್ನು ಅನ್ವಯಿಸಲಾಗುವುದು. ಶಾಲಾ ಆಡಳಿತ ಮಂಡಳಿಗಳು ಅಧಿವೇಶನಕ್ಕೆ ಕರೆ ತರುವ ಮಕ್ಕಳ ಸಂಖ್ಯೆ ನೀಡಿದರೆ ಸಾಕು. ಭೇಟಿ ನೀಡಬೇಕಾದ ದಿನ ಮೊಬೈಲ್‌ಗೆ ರವಾನಿಸಲಾಗುವುದು. ಮಕ್ಕಳು ಅನಗತ್ಯವಾಗಿ ಸರದಿಯಲ್ಲಿ ನಿಲ್ಲುವುದು, ಕಾಯುವುದು ತಪ್ಪಲಿದೆ. ಬ್ಯಾಕ್ವೆಂಟ್‌ಹಾಲ್‌ ಬಳಿ ಮಕ್ಕಳಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಶಾಸಕರು, ಸಚಿವರು, ಅಧಿಕಾರಿಗಳು, ಸಿಬ್ಬಂದಿ ಪ್ರವೇಶಕ್ಕೂ ಐರಿಶ್‌ ಯಂತ್ರಗಳನ್ನು ಬಳಸಲಾಗುವುದು. ಇಡೀ ವಿಧಾನಸೌಧಕ್ಕೆ ಸಿಸಿಟಿವಿ ಕಣ್ಗಾವಲು ಹಾಕಲಾಗುವುದು. ಇದರಿಂದ ಶಾಸಕರ ಸೋಗಿನಲ್ಲಿ ಬೇರೆಯವರು ಶಾಸನಸಭೆಯ ಒಳಗೆ ಪ್ರವೇಶಿಸುವುದನ್ನು ತಡೆಯಬಹುದು. ಈ ವ್ಯವಸ್ಥೆಯ ನಿರ್ವಹಣೆಗೆ ಪ್ರತ್ಯೇಕ ಘಟಕ ಸ್ಥಾಪಿಸಲಾಗುವುದು ಎಂದರು. 

‘ಕನ್ನಡ ಉಚ್ಚಾರಣೆ ಉತ್ತಮಗೊಳಿಸಿಕೊಳ್ಳುವೆ’
ಕನ್ನಡ ಮಾತಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡಿದ್ದು ನೋವಾಗಿಲ್ಲ. ಉಚ್ಚಾರಣೆ ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸಿರುವೆ. ದಕ್ಷಿಣ ಕನ್ನಡದಲ್ಲಿ ಹಲವರು ತುಳು ಮುಸ್ಲಿಮರು ಬ್ಯಾರಿ ಕ್ರೈಸ್ತರು ಕೊಂಕಣಿ ಬಳಸುತ್ತಾರೆ. ಮನೆಯಲ್ಲಿ ಬಹುಭಾಷೆ ಮಾತಾಡುವ ಜನರು ಶಾಲೆಯಲ್ಲಷ್ಟೆ ಕನ್ನಡ ಕಲಿಯುತ್ತಾರೆ. ಇದರಿಂದ ಬಳಕೆಯಲ್ಲಿ ಸ್ಪಷ್ಟತೆ ಕಾಣುವುದಿಲ್ಲ. ಟ್ರೋಲ್‌ ಮಾಡುವವರಿಗೆ ಇದೆಲ್ಲ ಅರ್ಥವಾಗುವುದಿಲ್ಲ ಎಂದು ಖಾದರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT