ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ನೀತಿ ಸಂಹಿತೆ ನೆಪ ಬೇಡ, ಕೆಆರ್‌ಇಟಿ ನೇಮಿಸಿ: ಹೈಕೋರ್ಟ್‌

Published 28 ಮಾರ್ಚ್ 2024, 15:19 IST
Last Updated 28 ಮಾರ್ಚ್ 2024, 15:19 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭೆ ಚುನಾವಣೆ ನೀತಿ ಸಂಹಿತೆಯ ನೆಪ ಹೇಳದೆ, ಕರ್ನಾಟಕ ರಿಯಲ್‌ ಎಸ್ಟೇಟ್ ಮೇಲ್ಮನವಿ ನ್ಯಾಯಮಂಡಳಿಯ (ಕೆಆರ್‌ಇಟಿ) ಅಧ್ಯಕ್ಷ  ಮತ್ತು ಸದಸ್ಯರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

‘ಕೆಆರ್‌ಇಟಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಮ್ಯಾಥ್ಯೂ ಥಾಮಸ್‌ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಹಾಜರಾಗಿ, ‘ಕೆಆರ್‌ಇಟಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಮುಂದಿನ ಮೂರು ವಾರಗಳಲ್ಲಿ ನೇಮಕ ಮಾಡಬೇಕು ಎಂದು ಹೈಕೋರ್ಟ್‌, 2024ರ ಫೆಬ್ರುವರಿ 26ರಂದೇ ಸರ್ಕಾರಕ್ಕೆ ಸೂಚಿಸಿದೆ. ಆದರೆ, ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಆಗುತ್ತಿಲ್ಲ. ಇದಕ್ಕಾಗಿ ಹೆಚ್ಚಿನ ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಚುನಾವಣೆ ಘೋಷಣೆಯ ಕಾರಣ ನೀಡಿ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿಯಲು ಸಾಧ್ಯವಿಲ್ಲ. ಕೆಆರ್‌ಇಟಿ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ಪ್ರಕ್ರಿಯೆಯನ್ನು 2024ರ ಜನವರಿ 22ರಿಂದಲೇ ಆರಂಭಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಇತ್ತೀಚೆಗಷ್ಟೇ ಜಾರಿಗೆ ಬಂದಿದೆ. ಹೀಗಾಗಿ, ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

‘ನ್ಯಾಯಮಂಡಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಅಧ್ಯಕ್ಷರು ಹಾಗೂ ಸದಸ್ಯರಿಲ್ಲದ ಕಾರಣ ಅದು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನೇಮಕಾತಿಯನ್ನು ಶೀಘ್ರವೇ ಮಾಡಿದರೆ ಹೈಕೋರ್ಟ್‌ಗೆ ಸಲ್ಲಿಕೆಯಾಗುವ ಮೇಲ್ಮನವಿಗಳ ಸಂಖ್ಯೆ ಕಡಿಮೆಯಾಗಲಿದೆ. ಆದ್ದರಿಂದ, ಬೇಗ ನೇಮಕಾತಿ ಪೂರೈಸಿ’ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT