ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಾನಿ– ಅದಾನಿ ಜೇಬಿನಲ್ಲಿ ಹಣವಿದ್ದರೆ ಬಡವರ ಉದ್ಧಾರ ಸಾಧ್ಯವಿಲ್ಲ: ಸಿದ್ದರಾಮಯ್ಯ

Published 25 ಆಗಸ್ಟ್ 2023, 11:23 IST
Last Updated 25 ಆಗಸ್ಟ್ 2023, 11:23 IST
ಅಕ್ಷರ ಗಾತ್ರ

ಬೆಂಗಳೂರು: ಬರೀ ಅಂಬಾನಿ– ಅದಾನಿ ಅವರ ಜೇಬಿನಲ್ಲಿ ಹಣವಿದ್ದರೆ, ಬಡವರು ಮತ್ತು ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲ. ತಿಮ್ಮ, ಬೋರ–ಕಾಳನ ಜೇಬಿನಲ್ಲಿಯೂ ಹಣ ಇದ್ದರೆ ಮಾತ್ರ ಆರ್ಥಿಕತೆ ಬೆಳವಣಿಗೆ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಆದಿಜಾಂಬವರ ಸಾಂಸ್ಕೃತಿಕ ಸಮಿತಿ ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದುಡಿಯುವವರ, ಶ್ರಮಿಕರ ಜೇಬಿನಲ್ಲಿ ಹಣ ಇದ್ದರೆ ಅವರು ದೇಶದ ಆರ್ಥಿಕತೆಯ ಬೆಳವಣಿಗೆಗೆ ಕಾರಣರಾಗುತ್ತಾರೆ. ಕೇವಲ ಅಂಬಾನಿ, ಅದಾನಿ ಜೇಬು ತುಂಬಿಸುವವರ ಕೈಗೆ ಅಧಿಕಾರ ಕೊಟ್ಟು ಇಡೀ ದೇಶ ಪರಿತಪಿಸುವಂತಾಗಿದೆ ಎಂದು ಸಿಎಂ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಿನ್ನೆಲೆಯಲ್ಲಿಯೇ ನಾವು ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ ಕಾರ್ಯಕ್ರಮಗಳನ್ನು ಜಾರಿ ಮಾಡಿ, ಜನರ ಜೇಬಿಗೆ ಹಣ ಹಾಕುವ ಕೆಲಸಕ್ಕೆ ಮುಂದಾಗಿದ್ದೇವೆ. ಇದರಿಂದ ನಮ್ಮ ಆರ್ಥಿಕತೆ ಚೈತನ್ಯ ಪಡೆದುಕೊಳ್ಳುತ್ತಿದೆ ಎಂದು ಸಿಎಂ ತಿಳಿಸಿದರು.

ದೇಶಕ್ಕೆ ಬಂದಿರುವ ರಾಜಕೀಯ ಸ್ವಾತಂತ್ರ್ಯ, ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಜಾರಿ ಆಗದಿದ್ದರೆ ಸ್ವಾತಂತ್ರ್ಯಕ್ಕೆ ಅರ್ಥ ಇಲ್ಲ ಎಂದು ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಹೇಳಿದ್ದರು. ಆದರೆ, ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ಕೊಟ್ಟು ಸಮಾನತೆ ಬರಬೇಕು ಎಂದರೆ ಹೇಗೆ ಸಾಧ್ಯ? ಅಂಬಾನಿ– ಅದಾನಿಯವರ ಜೇಬು ತುಂಬಿಸುವವರ ಕೈಗೆ ಅಧಿಕಾರ ಕೊಟ್ಟು ಬಡವರ, ಮಧ್ಯಮ ವರ್ಗದವರ ಉದ್ಧಾರ ಆಗಬೇಕು ಎಂದರೆ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಮಾಜಿ ಸಚಿವ ಹೆಚ್.ಆಂಜನೇಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಸಚಿವ ಹೆಚ್.ಸಿ. ಮಹದೇವಪ್ಪ, ಹಿರಿಯ ಸಾಹಿತಿಗಳಾದ ಕೆ. ಮರುಳಸಿದ್ದಪ್ಪ, ಎಸ್.ಜಿ ಸಿದ್ದರಾಮಯ್ಯ, ಅಗ್ರಹಾರ ಕೃಷ್ಣಮೂರ್ತಿ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಇಂದಿರಾ ಕೃಷ್ಣಪ್ಪ, ಪ್ರೊ.ಜಾಫೆಟ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT