ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರ ಸಂಪುಟದಲ್ಲಿರಬೇಕಿದ್ದ ಗೆಹಲೋತ್ ಅವರನ್ನು ಪಂಜರದ ಗಿಳಿ ಮಾಡಿದ್ದೇಕೆ?: ಸಿಎಂ

Published : 22 ಆಗಸ್ಟ್ 2024, 13:27 IST
Last Updated : 22 ಆಗಸ್ಟ್ 2024, 13:27 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯಪಾಲ ಥಾವರಚಂದ್ ಗೆಹಲೋತ್ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೇ ಕಾಂಗ್ರೆಸ್‌ ಪಕ್ಷ ಅವರನ್ನು ಗುರಿ ಮಾಡಿದೆ ಎಂಬ ಬಿಜೆಪಿ ಆರೋಪದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ರಾಜ್ಯದ ರಾಜ್ಯಪಾಲರಾಗಿರುವ ಥಾವರ್‌ ಚಂದ್‌ ಗೆಹಲೋತ್‌ ಅವರ ತಪ್ಪು ನಡೆಯ ಬಗೆಗಿನ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ರಾಜ್ಯ ಬಿಜೆಪಿ ನಾಯಕರು ‘ದಲಿತ ಗುರಾಣಿ’ ಬಳಸುತ್ತಿರುವುದು ಸಮಸ್ತ ದಲಿತ ಸಮುದಾಯದ ಸ್ವಾಭಿಮಾನಕ್ಕೆ ಮಾಡಿರುವ ಅವಮಾನವಾಗಿದೆ’ ಎಂದು ಹೇಳಿದ್ದಾರೆ.

ರಾಜ್ಯಪಾಲರಿಗೆ ಅವಮಾನವಾಗಿದೆ ಎಂದು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರೇ, ‘ದಲಿತ ಸಮುದಾಯಕ್ಕೆ ಸೇರಿರುವ ಗೆಹಲೋತ್‌ ಅವರ ಬಗ್ಗೆ ನಿಮ್ಮಲ್ಲಿ ಅಷ್ಟೊಂದು ಗೌರವ ಮತ್ತು ಅಭಿಮಾನವಿದ್ದರೆ, ಕೇಂದ್ರ ಸಚಿವ ಸಂಪುಟದಲ್ಲಿ ಇರಬೇಕಾಗಿದ್ದ ಅವರನ್ನು ಇಲ್ಲಿ ತಂದು ‘ಪಂಜರದ ಗಿಣಿ’ಯನ್ನಾಗಿ ಏಕೆ ಮಾಡಿದ್ದೀರಿ?, ಮಾರ್ಗದರ್ಶಕ ಮಂಡಳಿ ಎಂಬ ವನವಾಸಾಶ್ರಮ ಸೇರುವಷ್ಟು ವಯಸ್ಸಾಗದೆ ಇದ್ದರೂ ಅವರ ಸಕ್ರಿಯ ರಾಜಕೀಯ ಜೀವನವನ್ನು ಏಕೆ ಮೊಟಕುಗೊಳಿಸಿದ್ದೀರಿ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಕೇಂದ್ರ ಸಚಿವ ಸ್ಥಾನದಿಂದ ವಂಚಿತರನ್ನಾಗಿ ಮಾಡಿ, ತಮ್ಮ ರಾಜಕೀಯ ವಿರೋಧಿಗಳ ವಿರುದ್ದದ ದ್ವೇಷದ ರಾಜಕಾರಣಕ್ಕೆ ದಲಿತ ಸಮುದಾಯದ ನಾಯಕನನ್ನು ದುರ್ಬಳಕೆ ಮಾಡಿಕೊಳ್ಳುವುದು ಆ ಸಮುದಾಯಕ್ಕೆ ಮಾಡುವ ಅನ್ಯಾಯ-ಅವಮಾನ ಅಲ್ಲವೇ?, ದಲಿತ ನಾಯಕರೊಬ್ಬರನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯೂ ಚುಚ್ಚಲಿಲ್ಲವೇ?’ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಲಿತ ಸಮುದಾಯದಕ್ಕೆ ಸೇರಿರುವ ನಮ್ಮ ಪಕ್ಷದ ಈಗಿನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಹಿರಿಯ ನಾಯಕರು ಎಷ್ಟು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನೋಡಿ ಕಲಿಯಿರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವ, ಮೀಸಲಾತಿಯನ್ನು ವಿರೋಧಿಸುತ್ತಿರುವ ಮತ್ತು ಜಾತಿ ತಾರತಮ್ಯವನ್ನು ಅಂತರಂಗದಲ್ಲಿ ಒಪ್ಪಿಕೊಂಡು ಬಹಿರಂಗದಲ್ಲಿ ಜಾತ್ಯತೀತತೆಯ ಸೋಗು ಹಾಕಿಕೊಂಡಿರುವ ಬಿಜೆಪಿ ನಾಯಕರಿಗೆ ದಲಿತರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ನಿಮಗೆ ದಲಿತ ಸಮುದಾಯದ ಬಗ್ಗೆ ನಿಜವಾಗಿಯೂ ಗೌರವ ಇದ್ದರೆ ಥಾವರ ಚಂದ್ ಗೆಹಲೋತ್‌ ಅವರ ಮೇಲೆ ಕೆಟ್ಟ ಕೆಲಸ ಮಾಡಲು ರಾಜಕೀಯ ಒತ್ತಡ ಹೇರಲು ಹೋಗದೆ, ಅವರು ಸಂವಿಧಾನದತ್ತವಾಗಿ ಕರ್ತವ್ಯ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಿ, ಈ ಪ್ರತಿಭಟನೆ, ಪ್ರತಿರೋಧದ ನಾಟಕಗಳನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT