ಸಂಪನ್ಮೂಲವೇ ಇಲ್ಲದೆ ಗ್ಯಾರಂಟಿ ಜಾರಿ: ಅಶೋಕ್ ವ್ಯಂಗ್ಯ
ಕಾಂಗ್ರೆಸ್ ಸರ್ಕಾರ ‘ಸಂಪನ್ಮೂಲ’ದ ಗ್ಯಾರಂಟಿಯೇ ಇಲ್ಲದೇ ಜನರಿಗೆ ಟೋಪಿ ಹಾಕಲು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಈಗ ಕಾಂಗ್ರೆಸ್ ಪಕ್ಷದ ಶಾಸಕರೇ ಸರ್ಕಾರಕ್ಕೆ ಧಿಕ್ಕಾರ ಹಾಕುವ ಸ್ಥಿತಿಗೆ ಬಂದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಯಾವುದೇ ಪಕ್ಷದ ಸರ್ಕಾರ ಬಂದರೂ ಸಾಲ ಮಾಡಲೇಬೇಕು. ಆದರೆ ಈಗಿನ ಸ್ಥಿತಿಯಲ್ಲಿ ಸರ್ಕಾರ ಬಳಿ ಹಣವೇ ಇಲ್ಲ. ಆದರೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ’ ಎಂದರು. ಹಣಕಾಸು ಸ್ಥಿತಿಯನ್ನು ನಿರ್ವಹಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬೆಸ್ಕಾಂ ಹಾಗೂ ವಿವಿಧ ಇಲಾಖೆಗಳು ನಷ್ಟದಲ್ಲಿವೆ ಎಂದು ಅವರು ದೂರಿದರು.