ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ. ಶಿವಕುಮಾರ್ ಕಾಲ ಕೆಳಗೆ ಸರ್ಕಾರ; ಕುಮಾರಸ್ವಾಮಿ ಟೀಕೆ

Published 29 ನವೆಂಬರ್ 2023, 8:51 IST
Last Updated 29 ನವೆಂಬರ್ 2023, 8:51 IST
ಅಕ್ಷರ ಗಾತ್ರ

ಮೈಸೂರು: ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ರಾಜ್ಯ ಸರ್ಕಾರದ ನಿರ್ಧಾರ ಕಾನೂನುಬಾಹಿರ. ಮುಖ್ಯಮಂತ್ರಿ ಈ ರೀತಿ ತೀರ್ಮಾನ ಮಾಡುವ ಮೂಲಕ ತಾವು ಡಿಕೆಶಿ ಕಾಲ ಕೆಳಗೆ ಇರುವುದನ್ನು ಪ್ರದರ್ಶಿಸಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

ಮೈಸೂರಿನಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಕುಮಾರಸ್ವಾಮಿ ‘ ವಕೀಲರು, ಕಾನೂನು ಉಪನ್ಯಾಸಕರೂ ಆಗಿದ್ದ ಮುಖ್ಯಮಂತ್ರಿಯಿಂದ ಇಂತಹ ತೀರ್ಮಾನ ಬಂದಿರುವುದು ಅವರ ಸರ್ಕಾರದ ನಿರ್ಣಯಗಳನ್ನು ಬಯಲು ಮಾಡಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ರಕ್ಷಣೆ ನೀಡುವ ಸಲುವಾಗಿಯೇ ಅನುಮತಿ ಹಿಂಪಡೆಯಲಾಗಿದೆ. ಸಂವಿಧಾನದ ರಕ್ಷಕರು ಎಂದು ಘೋಷಿಸಿಕೊಂಡವರು ಈ ತೀರ್ಮಾನ ಮಾಡಿದ್ದು ಸರಿಯೇ’ ಎಂದು ಪ್ರಶ್ನಿಸಿದರು.

‘ ಹಿಂದಿನ ಬಿಜೆಪಿ ಸರ್ಕಾರ ಸ್ಪೀಕರ್ ಅನುಮತಿ ಪಡೆಯದೆಯೇ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿದ್ದು ಕಾನೂನುಬಾಹಿರ ಎಂಬ ಕಾಂಗ್ರೆಸ್ ಆರೋಪ ಸರಿಯಲ್ಲ. ಅನುಮತಿ ನೀಡಲು ಸ್ಪೀಕರ್ ಒಪ್ಪಿಗೆ ಬೇಕಿಲ್ಲ. ಇದನ್ನು ಬೇಕಿದ್ದರೆ ವಿಧಾನಸಭೆಯಲ್ಲಿ ಚರ್ಚಿಸೋಣ. ಈ ಹಿಂದೆ ಪ್ರಕರಣವೊಂದರಲ್ಲಿ ತನಿಖೆಗೆ ಅನುಮತಿ ಕೋರಿ ಆರ್‌ಟಿಐ ಕಾರ್ಯಕರ್ತರೊಬ್ಬರು ಸ್ಪೀಕರ್‌ಗೆ ಪತ್ರ ಬರೆದಿದ್ದರು. ಅದಕ್ಕೆ ಉತ್ತರಿಸಿದ್ದ ಸ್ಪೀಕರ್ ಕಾರ್ಯಾಲಯ, ಇದಕ್ಕೆ ಸ್ಪೀಕರ್‌ ಅನುಮತಿ ಬೇಕಿಲ್ಲ ಎಂದು ಪತ್ರ ಬರೆದಿತ್ತು’ ಎಂದರು.

ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೈಕೋರ್ಟ್‌ ಮೆಟ್ಟಿಲೇರಿರುವ ಕುರಿತು ಪ್ರತಿಕ್ರಿಯಿಸಿ ‘ ಯತ್ನಾಳ ಹಿರಿಯ ಶಾಸಕರಾಗಿ ಅವರ ಜವಾಬ್ದಾರಿ ನಿರ್ವಹಿಸಿದ್ದಾರೆ’ ಎಂದರು.

‘ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ತಮ್ಮ ಪಕ್ಷದ ನಾಯಕರ ಧೋರಣೆಗೆ ಮನನೊಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಒಬ್ಬ ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿ ಹೀಗಾದಾಗ ಬೇರೆಯವರ ಗತಿ ಏನು? ಈಗಿನ ಸರ್ಕಾರದಲ್ಲಿ ಶಾಸಕರಿಗೆ ಬೆಲೆ ಎಷ್ಟಿದೆ ಎಂದು ನಾನು ಹೇಳಬೇಕಿಲ್ಲ. ರಾಯರೆಡ್ಡಿ, ಶ್ಯಾಮನೂರು ಶಿವಶಂಕರಪ್ಪ ಮತ್ತೀಗ ಬಿ.ಆರ್. ಪಾಟೀಲ ಮನನೊಂದು ಮಾತನಾಡಿದ್ದಾರೆ. ಈ ಅಸಮಾಧಾನಗಳನ್ನು ಸರ್ಕಾರ ಸರಿಪಡಿಸಿಕೊಳ್ಳದೇ ಹೋದರೆ ಅದೇ ತಿರುಗುಬಾಣವಾಗಲಿದೆ’ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

‘ ಕಾಂಗ್ರೆಸ್ ಸರ್ಕಾರದಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಆರೋಪ ನಿಜ. ಕಾಂಗ್ರೆಸ್‌ನವರು ಬಿಜೆಪಿಯ ಶೇ 40 ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಅಧಿಕಾರ ಹಿಡಿದರು. ಈಗ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಆಗಿದ್ದ ಹಲವು ಟೆಂಡರ್‌ಗಳನ್ನು ಈಗಿನ ಸರ್ಕಾರ ಕಮಿಷನ್ ಸಲುವಾಗಿ ತಡೆ ಹಿಡಿದಿದೆ’ ಎಂದು ದೂರಿದರು.

ಭ್ರಷ್ಟಾಚಾರ ಸಾಬೀತುಪಡಿಸಿದರೆ ರಾಜೀನಾಮೆ ನೀಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ‘ ಶೇ 40 ಕಮಿಷನ್‌ ಬಗ್ಗೆ ಒಂದು ವರ್ಷವಿಡೀ ತಮಟೆ ಹೊಡೆದ ಇವರು ಯಾವುದಾದರೂ ಒಂದು ಆರೋಪವನ್ನು ರುಜುವಾತು ಪಡಿಸಿದ್ದಾರ? ಹಣಕಾಸು ಅಕ್ರಮವನ್ನು ರುಜುವಾತು ಮಾಡಲು ಆಗದು. ಮೈಸೂರು ದಸರಾದಲ್ಲೇ ₹20 ಕೋಟಿ ಕಾಮಗಾರಿ ಗುತ್ತಿಗೆ ನೀಡಲು ಮೊದಲು ಒಬ್ಬರನ್ನು ಕರೆಯಿಸಿ ಶೇ 20 ಕಮಿಷನ್ ಕೇಳಿದ್ದರು. ಅವರು ಒಪ್ಪದ ಕಾರಣಕ್ಕೆ ಮತ್ತೊಬ್ಬರಿಗೆ ಗುತ್ತಿಗೆ ನೀಡಲಾಗಿದೆ. ಇದನ್ನು ರುಜುವಾತು ಮಾಡಲು ಆಗುವುದಿಲ್ಲ’ ಎಂದರು.

ಬರ ಪರಿಹಾರ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಆರೋಪದ ಕುರಿತು ಪ್ರತಿಕ್ರಿಯಿಸಿ ‘ ಬರ ವಿಚಾರದಲ್ಲಿ ಕೇಂದ್ರ ಸರ್ಕಾರ ಅನುದಾನ ನೀಡುವುದು ಎರಡನೇ ಹಂತ. ಮೊದಲ ಹಂತದಲ್ಲಿ ನೀವೇನು ಮಾಡಿದ್ದೀರಿ? ₹900 ಕೋಟಿ ಇಟ್ಟುಕೊಂಡು ಪೂಜೆ ಮಾಡುತ್ತೀರ? ಮೇವು, ನೀರಿಗೆ ಬಿಟ್ಟು ಬೇರೆ ಯಾವುದಕ್ಕೇ ಹಣ ನೀಡಿದ್ದೀರಿ’ ಎಂದು ಪ್ರಶ್ನಿಸಿದರು.

ಭ್ರೂಣ ಹತ್ಯೆ– ಕ್ರಮ ಕೈಗೊಳ್ಳಿ:

‘ ಮೈಸೂರು ಸುತ್ತಮುತ್ತ ಹೆಣ್ಣು ಭ್ರೂಣಹತ್ಯೆ ನಡೆದಿರುವುದು ಅಮಾನವೀಯ ವಿಚಾರ. ಇಷ್ಟು ವ್ಯಾಪಕವಾಗಿ ನಡೆದಿದ್ದರೂ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಅಧಿಕಾರಿಗಳ ಲೋಪ ಎದ್ದು ಕಾಣುತ್ತದೆ. ಈ ಪ್ರಕರಣದಲ್ಲಿ ಯಾರೇ ಭಾಗಿ ಆಗಿದ್ದರೂ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಪೋಷಕರು ಭ್ರೂಣಹತ್ಯೆಯಂತಹ ಪಾಪದ ಕಾರ್ಯದಲ್ಲಿ ಭಾಗಿ ಆಗಬಾರದು. ತಂದೆ–ತಾಯಿಗಳ ರಕ್ಷಣೆಯಲ್ಲಿ ಗಂಡಿಗಿಂತ ಹೆಣ್ಣು ಮಕ್ಕಳೇ ಹತ್ತು ಪಟ್ಟು ಮುಂದೆ ಇದ್ದಾರೆ ಎಂಬುದನ್ನು ನಾವು ಮರೆಯಬಾರದು’ ಎಂದರು.

‘ ಬೆಂಗಳೂರಿನಲ್ಲಿ ಮಕ್ಕಳ ಕಳ್ಳತನ ಪ್ರಕರಣ ಬೆಳಕಿಗೆ ಬಂದಿರುವುದು ಆಘಾತಕಾರಿ. ಈ ಬಗ್ಗೆ ಮುಕ್ತ ತನಿಖೆಗೆ ಸರ್ಕಾರ ಅಧಿಕಾರಿಗಳಿಗೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT