ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ತನಿಖೆಗೆ ಅನುಮತಿ ಕ್ರಮವನ್ನು ಪ್ರಶ್ನಿಸಿದ ರಿಟ್ ಅರ್ಜಿ ವಾಪಸ್ ಪಡೆದ ಡಿಕೆಶಿ

ಹೈಕೋರ್ಟ್ ನಲ್ಲಿ ಬಾಕಿ ಇದ್ದ ಅರ್ಜಿಗಳನ್ನು ಹಿಂಪಡೆದ ಶಿವಕುಮಾರ್: ಯತ್ನಾಳ ಅರ್ಜಿ ಅಪ್ರಸ್ತುತ
Published 29 ನವೆಂಬರ್ 2023, 7:45 IST
Last Updated 29 ನವೆಂಬರ್ 2023, 7:45 IST
ಅಕ್ಷರ ಗಾತ್ರ

ಬೆಂಗಳೂರು: ‘ತಮ್ಮ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಕ್ರಮವನ್ನು ಪ್ರಶ್ನಿಸಿದ ರಿಟ್ ಅರ್ಜಿ ಮತ್ತು ಮೇಲ್ಮನವಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಪಸ್ ಪಡೆದಿದ್ದಾರೆ.

‘ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು. ಇದನ್ನು ಆಧರಿಸಿ, ಸಿಬಿಐ ತನಿಖೆ ನಡೆಸಿತ್ತಲ್ಲದೇ, ದೋಷಾರೋಪ ಪಟ್ಟಿ ಸಲ್ಲಿಕೆಗೂ ತಯಾರಿ ನಡೆಸಿತ್ತು. ಸಿಬಿಐ ತನಿಖೆಯ ಮುಂದುವರಿದಿರುವಾಗಲೇ, ಶಿವಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಬೆಳವಣಿಗೆ ಮಧ್ಯೆಯೇ, ಹಿಂದಿನ ಸರ್ಕಾರ ನೀಡಿದ್ದ ಅನುಮತಿಯನ್ನು ಸಿದ್ದರಾಮಯ್ಯ ಸರ್ಕಾರ ಇತ್ತೀಚೆಗೆ ವಾಪಸ್ ಪಡೆದಿತ್ತು. 

ಪ್ರಕರಣವೇನು?

‘ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿ 2021ರ ಸೆಪ್ಟೆಂಬರ್ 25ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು' ಎಂದು ಕೋರಿ ಶಿವಕುಮಾರ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ 2023ರ ಏಪ್ರಿಲ್‌ 20ರಂದು ವಜಾಗೊಳಿಸಿತ್ತು.

ಏಕಸದಸ್ಯ ನ್ಯಾಯಪೀಠದ ಈ ಆದೇಶವನ್ನು ಪ್ರಶ್ನಿಸಿ ಶಿವಕುಮಾರ್‌ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿತ್ತು.

ಇದಕ್ಕೆ ಪ್ರತಿಯಾಗಿ ಸಿಬಿಐ; ತನಿಖೆಗೆ ನೀಡಿರುವ ತಡೆ ತೆರವುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ‘ತನಿಖೆಗೆ ನೀಡಿರುವ ತಡೆ ತೆರವು ಕೋರಿ ಸಿಬಿಐ ಸಲ್ಲಿಸಿರುವ ಮಧ್ಯಂತರ ಅರ್ಜಿ ಹಾಗೂ ಡಿ.ಕೆ.ಶಿವಕುಮಾರ್‌ ಸಲ್ಲಿಸಿರುವ ಮೇಲ್ಮನವಿಯನ್ನು ಎರಡು ವಾರಗಳಲ್ಲಿ ಇತ್ಯರ್ಥಪಡಿಸಿ‘ ಎಂದು ಹೈಕೋರ್ಟ್‌ಗೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮೇಲ್ಮನವಿಯನ್ನು ಬುಧವಾರ ವಿಚಾರಣೆಗೆ ನಿಗದಿಪಡಿಸಿತ್ತು. 

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್‌ ಸಿಬಲ್ ಹಾಗೂ ಶಿವಕುಮಾರ್‌ ಪರವಾಗಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಹಾಜರಾಗಿ; ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿ ಹಿಂಪಡೆದ ಅಧಿಸೂಚನೆಯನ್ನು ನ್ಯಾಯಪೀಠಕ್ಕೆ ಮೆಮೊ (ಜ್ಞಾಪನಾ ಪತ್ರ) ಮೂಲಕ ಸಲ್ಲಿಸಿದರು. ಅಂತೆಯೇ, ರಿಟ್ ಅರ್ಜಿ ಮತ್ತು ಮೇಲ್ಮನವಿ ಹಿಂಪಡೆಯುವುದಾಗಿಯೂ ಶಿವಕುಮಾರ್ ಪರ ವಕೀಲರು ನ್ಯಾಯಪೀಠಕ್ಕೆ ಲಿಖಿತ ಮೆಮೊ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್, ‘ಮೇಲ್ಮನವಿಯನ್ನು ಹಿಂತೆಗೆದುಕೊಳ್ಳಲು ನಮ್ಮಿಂದ ಯಾವುದೇ ವಿರೋಧವಿಲ್ಲ. ಆದರೆ, ಏಕಸದಸ್ಯ ನ್ಯಾಯಪೀಠದಲ್ಲಿದ್ದ ರಿಟ್‌ ಅರ್ಜಿ ಹಿಂಪಡೆಯುವ ನಿರ್ಧಾರಕ್ಕೆ ಗಂಭೀರ ಆಕ್ಷೇಪಣೆ ಇದೆ‘ ಎಂದರು.

‘ರಾಜ್ಯ ಸರ್ಕಾರದ ಸಮ್ಮತಿಯನ್ನು ಹಿಂತೆಗೆದುಕೊಳ್ಳುವ ಆದೇಶವು ಕಾನೂನಿನ ದೃಷ್ಟಿಯಲ್ಲಿ ಸರಿಯಲ್ಲ. ಇದಕ್ಕೆ ಪೂರ್ವನಿದರ್ಶನವಾಗಿ ಸಿಕ್ಕಿಂನ ಮೊದಲ ಮುಖ್ಯಮಂತ್ರಿ ಕಾಜಿ ಲೆಂಡುಪ್ ದೋರ್ಜಿ ವರ್ಸಸ್‌ ಸಿಬಿಐ ನಡುವಿನ ಪ್ರಕರಣ ನಮ್ಮ ಕಣ್ಣ ಮುಂದಿದೆ. ಅಂತೆಯೇ ಕರ್ನಾಟಕ ಸರ್ಕಾರದ ಈ ನಡೆ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಪ್ರಕಾರ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಬೇಕಾಗಿದೆ‘ ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ’ಅರ್ಜಿದಾರರು ತಮ್ಮ ಅರ್ಜಿ ಹಿಂಪಡೆಯುವುದಾಗಿ ಹೇಳುತ್ತಿದ್ದಾರೆ. ಕಾನೂನು ಪ್ರಕಾರ ಅವರ ಈ ನಿರ್ಧಾರವನ್ನು ತಡೆಯಲು ಸಾಧ್ಯವಿಲ್ಲ. ನಾವಿಲ್ಲಿ ನಮ್ಮ ಕಣ್ಣ ಮುಂದಿರುವ ದಾಖಲೆಗಳ ಆಧಾರದಲ್ಲಿಯೇ ಎಲ್ಲವನ್ನೂ ತೀರ್ಮಾನಿಸಬೇಕು. ಆದಾಗ್ಯೂ, ‘ಸಚಿವ ಸಂಪುಟದ ನಿರ್ಧಾರವನ್ನು ಯಾರಾದರೂ ಪ್ರ‌ಶ್ನೆ ಮಾಡಿದ್ದಾರೆಯೇ, ಹಾಗೊಂದು ವೇಳೆ ಯಾರಾದರೂ ಸಂಪುಟದ ನಿರ್ಧಾರವನ್ನು ಪ್ರಶ್ನೆ ಮಾಡಬೇಕೆಂದಾದರೆ ಮಾಡಲಿ. ಅದಕ್ಕೆ ಸ್ವಾತಂತ್ರ್ಯವಿದೆ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. 

ಇದೇ ವೇಳೆ 'ಪ್ರಕರಣದಲ್ಲಿ ನನ್ನ ವಾದವನ್ನೂ ಆಲಿಸಬೇಕು‘ ಎಂದು ಕೋರಿ ಜಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಸಲ್ಲಿಸಿದ್ದ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ವಕೀಲ ವೆಂಕಟೇಶ್ ಪಿ.ದಳವಾಯಿ ವಾದ ಮಂಡಿಸಿದರು. ಆದರೆ, ನ್ಯಾಯಪೀಠ ‘ನಿಮ್ಮನ್ನು ಈ ಪ್ರಕರಣದಲ್ಲಿ ಪರಿಗಣಿಸುವ ಅಗತ್ಯವಿಲ್ಲ‘ ಎಂದು ಹೇಳಿ, ಅರ್ಜಿ ಹಿಂಪಡೆಯುವ ಶಿವಕುಮಾರ್‌ ನಿರ್ಧಾರಕ್ಕೆ ಅಸ್ತು ಎಂದು ಆದೇಶಿಸಿತು.

ಎಫ್‌ಐಆರ್‌ ರದ್ದುಪಡಿಸಲು ನಿರಾಕರಿಸಿದ್ದ ಹೈಕೋರ್ಟ್‌

‘ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ ರದ್ದುಗೊಳಿಸಬೇಕು‘ ಎಂದು ಕೋರಿ ಡಿ.ಕೆ.ಶಿವಕುಮಾರ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ 2023ರ ಅಕ್ಟೋಬರ್ 19ರಂದು ವಜಾಗೊಳಿಸಿತ್ತು. ‘ಸಿಬಿಐ ತನ್ನ ತನಿಖೆಯನ್ನು ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು‘ ಎಂದು ಆದೇಶಿಸಿತ್ತು. ಈ ಆದೇಶವನ್ನು ಶಿವಕುಮಾರ್ ಪ್ರಶ್ನಿಸಿ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ ಎಂಬುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT