ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Rains | ತಗ್ಗದ ಪ್ರವಾಹ; ನಿಲ್ಲದ ಭೂಕುಸಿತ

ಅಣಶಿಯಲ್ಲಿ 12 ಸೆಂ.ಮೀ. ಮಳೆ; ಗುಂಡ್ಯಡ್ಕದಲ್ಲಿ ಗುಡ್ಡೆ ಕುಸಿತ– ವಾಹನ ಸಂಚಾರ ಸ್ಥಗಿತ
Published : 4 ಆಗಸ್ಟ್ 2024, 0:30 IST
Last Updated : 4 ಆಗಸ್ಟ್ 2024, 0:30 IST
ಫಾಲೋ ಮಾಡಿ
Comments

ಹುಬ್ಬಳ್ಳಿ/ಮಂಗಳೂರು: ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಾರದಿಂದ ಈಚೆಗೆ ಜೋರಾಗಿ ಸುರಿದ ಮಳೆಯ ಅಬ್ಬರ ಶನಿವಾರ ತುಸು ತಗ್ಗಿತ್ತು. ಆದರೆ, ಅಲ್ಲಲ್ಲಿ ಗುಡ್ಡ ಕುಸಿತ ಮುಂದುವರಿದಿದೆ.

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಅಣಶಿಯಲ್ಲಿ ಶನಿವಾರ 12 ಸೆಂ.ಮೀ ಮತ್ತು ಕ್ಯಾಸಲ್‌ರಾಕ್ ಭಾಗದಲ್ಲಿ 11.6 ಸೆಂ.ಮೀ ಮಳೆ ಆಗಿದೆ.

ಅಘನಾಶಿನಿ, ಕಾಳಿ, ಶರಾವತಿ, ಗುಂಡಬಾಳ ನದಿಗಳಲ್ಲಿ ಹರಿವು ಹೆಚ್ಚಿದೆ. ಗೇರುಸೊಪ್ಪ ಜಲಾಶಯದಿಂದ ಶರಾವತಿ ನದಿಗೆ 55 ಸಾವಿರ ಕ್ಯುಸೆಕ್, ಕದ್ರಾ ಜಲಾಶಯದಿಂದ ಕಾಳಿ ನದಿಗೆ 58 ಸಾವಿರ ಕ್ಯುಸೆಕ್ ನೀರು ಹರಿಬಿಡಲಾಗುತ್ತಿದೆ. ಹೊನ್ನಾವರ ಮತ್ತು ಕುಮಟಾ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಮುಂದುವರೆದಿದೆ. ಜಿಲ್ಲೆಯಲ್ಲಿ 18 ಕಾಳಜಿ ಕೇಂದ್ರಗಳಿದ್ದು, 550ಕ್ಕೂ ಹೆಚ್ಚು ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.

ಮಹಿಳೆಗೆ ಗಾಯ: ನಿರಂತರ ಮಳೆಯಿಂದ ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಶನಿವಾರ ಮನೆ ಕುಸಿದು ಪಾರ್ವತಿ ಹೊದೆಪ್ಪ ಹುದಲಿ (31) ಎಂಬುವರು ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

ತಗ್ಗಿದ ಪ್ರವಾಹ: ನಾಲ್ಕು ದಿನಗಳಿಂದ ಮಹಾರಾಷ್ಟ್ರದಲ್ಲಿ ಮಳೆ ತಗ್ಗಿದ್ದರಿಂದ ಕೃಷ್ಣಾ ಪ್ರವಾಹದಲ್ಲಿ ತುಸು ಇಳಿಕೆಯಾಗಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ–ಯಡೂರ ಬ್ಯಾರೇಜ್ ಬಳಿ 2.87 ಲಕ್ಷ ಕ್ಯುಸೆಕ್‌ ಹರಿವು ಇದೆ.

ಕಾಗವಾಡ ತಾಲ್ಲೂಕಿನ ಕೃಷ್ಣಾ ಕಿತ್ತೂರು, ಬಣಜವಾಡ, ಕಾತ್ರಳ, ಮೊಳವಾಡ, ಕುಸುನಾಳ, ಜುಗೂಳ, ಶಾಹಾಪುರ, ಮಂಗಾವತಿ ಗ್ರಾಮಗಳ ತೋಟದ ವಸತಿಗಳಿಗೆ ನುಗ್ಗಿದ ನೀರು ಹಾಗೇ ಇದೆ. ಸಂತ್ರಸ್ತರು ಇನ್ನೂ ಕಾಳಜಿ ಕೇಂದ್ರಗಳಲ್ಲೇ ಆಶ್ರಯ ಪಡೆದಿದ್ದಾರೆ. ಖಾನಾಪುರ ತಾಲ್ಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಈವರೆಗೆ 18 ಮನೆಗಳು ಕುಸಿದಿವೆ.

ಮೂಡುಬಿದಿರೆ ತಾಲ್ಲೂಕಿನ ಗುಂಡ್ಯಡ್ಕದಲ್ಲಿ ಶನಿವಾರ ಗುಡ್ಡದ ಮಣ್ಣು ರಸ್ತೆ ಮೇಲೆ ಕುಸಿದಿದ್ದು, ಪಾಲಡ್ಕ-ಕಲ್ಲಮುಂಡ್ಕೂರು ನಡುವೆ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಪುನಾರಂಭಕ್ಕೆ ಒಂದೆರಡು ದಿನಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುತ್ತೂರು ತಾಲ್ಲೂಕಿನ ಕೋಡಿಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ದೇವಸ್ಯದಲ್ಲಿ ಗುಡ್ಡ ಕುಸಿದು, ಗುಡ್ಡದ ಕೆಳಭಾಗದಲ್ಲಿರುವ 9 ಮನೆಗಳು ಅಪಾಯವನ್ನು ಎದುರಿಸುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಒಟ್ಟಾರೆ 36 ಮನೆಗಳಿಗೆ ಹಾನಿಯಾಗಿದ್ದು, 11 ಜಾನುವಾರುಗಳು ಮೃತಪಟ್ಟಿವೆ.

ಮೂಡುಬಿದಿರೆ ತಾಲ್ಲೂಕಿನ ಪುತ್ತಿಗೆಯಲ್ಲಿ ಶನಿವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ 10 ಸೆಂ.ಮೀ ಮಳೆಯಾಗಿತ್ತು. 

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ  ಜಿಲ್ಲೆಗಳಲ್ಲಿ ಇದೇ 4 ಮತ್ತು 5ರಂದು ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ.

ಶವ ಪತ್ತೆ

ಮೂಡಿಗೆರೆ (ಚಿಕ್ಕಮಗಳೂರು): ತಾಲ್ಲೂಕಿನ ಭೈದುವಳ್ಳಿ ಗ್ರಾಮದಲ್ಲಿ ಹರಿಯುತ್ತಿರುವ ಕಗ್ಗಿನಹಳ್ಳದಲ್ಲಿ ಶುಕ್ರವಾರ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ ಕೃಷಿಕ ಬಿ.ಎಲ್. ಗೋಪಾಲಗೌಡ ಅವರ ಮೃತ ದೇಹ ಶನಿವಾರ ಕಿಮ್ಮನೆ ಎಸ್ಟೇಟ್‌ ಬಳಿ ಹಳ್ಳದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT