ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Rains: ಕೆಆರ್‌ಎಸ್, ಹೇಮಾವತಿ ಜಲಾಶಯ ನೀರಿನಮಟ್ಟ ಏರಿಕೆ

ದಕ್ಷಿಣ ಕನ್ನಡದಲ್ಲಿ ಮತ್ತೆ ಮಳೆ ಅಬ್ಬರ, ಕೊಡಗು, ಉಡುಪಿಯಲ್ಲಿ ಕ್ಷೀಣ
Published 8 ಜುಲೈ 2023, 23:30 IST
Last Updated 8 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಮಳೆ ಮತ್ತೆ ಬಿರುಸುಗೊಂಡಿದ್ದರೆ, ಕೊಡಗು ಮತ್ತು ಉಡುಪಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಕೆಆರ್‌ಎಸ್‌ ಮತ್ತು ಹೇಮಾವತಿ ಜಲಾಶಯಗಳ ನೀರಿನಮಟ್ಟದಲ್ಲಿ ಏರಿಕೆಯಾಗಿದ್ದರೆ, ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ತುಸು ತಗ್ಗಿದೆ. 

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಶನಿವಾರ ಸಂಜೆ ವೇಳೆಗೆ 83.35 ಅಡಿಗೆ ಏರಿದೆ. ಕಾವೇರಿ ಉಗಮ ಸ್ಥಾನದಲ್ಲಿ ಮಳೆ ಬೀಳುತ್ತಿರುವುದರಿಂದ ಕಳೆದ ಎರಡು ದಿನಗಳಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ ಸದ್ಯ ‌13.40 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ನದಿಗೆ 359 ಕ್ಯೂಸೆಕ್‌ ಹರಿಸಲಾಗುತ್ತಿದೆ.

ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಾಗಿದೆ. ಶನಿವಾರ 7,080 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ‌ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮುಂಗಾರು ಮಳೆಯು ಬಿರುಸು ಪಡೆಯತೊಡಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ.

ಮಂಗಳೂರು ವರದಿ: ಉಡುಪಿ ಜಿಲ್ಲೆಯ ಹೆರೂರು ಹಾಗೂ ಮಜೂರಿನಲ್ಲಿ ಬಿರುಗಾಳಿ ಬೀಸಿ ದೇವಕಿ ಶೆಟ್ಟಿ ಎಂಬವರ ಮನೆಯ ಹಂಚುಗಳು ಹಾರಿಹೋಗಿದ್ದು ಮಾಡು ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ  ಸೇವಂತಿಗುಡ್ಡೆಯಲ್ಲಿ ಗುಡ್ಡ ಜರಿದು ಭಾರಿ ಗಾತ್ರದ ಕಲ್ಲು ಉರುಳಿ ಬಿದ್ದಿತ್ತು. ಬಳಿಕ ತೆರವು ಗೊಳಿಸಲಾಯಿತು.

ಭಾರಿ ಮಳೆ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತವು ಮಂಗಳವಾರದಿಂದ ಶುಕ್ರವಾರದವರೆಗೆ
ಶಾಲೆಗಳಿಗೆ ರಜೆ‌ ನೀಡಿತ್ತು. ಶನಿವಾರ ಶಾಲೆಗಳು
ಪುನರಾರಂಭಗೊಂಡವು.

ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ ಇದ್ದುದರಿಂದ‌ ಶನಿವಾರ ಬೆಳಿಗ್ಗೆ ಎರಡು ವಿಮಾನಗಳು ಇಳಿಯುವುದು ತಡವಾಯಿತು. ‘ಆಗಸದಲ್ಲೇ ಕೆಲಹೊತ್ತು ಹಾರಾಟ ನಡೆಸಿ, ಬಳಿಕ ಇಳಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ಮಡಿಕೇರಿ ವರದಿ: ಕೊಡಗು ಜಿಲ್ಲೆಯಲ್ಲಿ ಶನಿವಾರ ಮಳೆಯ ಪ್ರಮಾಣ ತಗ್ಗಿದೆ. ‌ಮಳೆಯಿಂದಾಗಿ ಇಲ್ಲಿನ ಸಿದ್ದಾಪುರ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರದ ಚಾವಣಿ ಕುಸಿದಿದೆ.

ಗುಹ್ಯ ಕರಡಿಗೋಡು, ಕೊಂಡಂಗೇರಿ ಭಾಗದಲ್ಲಿ ಕಾವೇರಿ ನದಿ ನೀರಿನಮಟ್ಟ ಏರಿಕೆಯಾಗಿದೆ. ವಿರಾಜಪೇಟೆ ತಹಶೀಲ್ದಾರ ರಾಮಚಂದ್ರ ಸ್ಥಳಕ್ಕೆ ತೆರಳಿ ಎಚ್ಚರಿಕೆಯಿಂದ ಇರುವಂತೆ ನದಿ ತೀರದ ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ. ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮದ ಕುಂಬಾರಗುಂಡಿ, ಬೆಟ್ಟದಕಾಡು, ಬರಡಿ ಭಾಗದಲ್ಲೂ ನೀರಿನಮಟ್ಟ ಹೆಚ್ಚಾಗಿದೆ.

ಗಾಳಿಯ ಅಬ್ಬರ ಹೆಚ್ಚಿದ್ದು, ಗೋಣಿಕೊಪ್ಪಲು– ಪಾಲಿಬೆಟ್ಟ ರಸ್ತೆ ಹಾಗೂ ಮಾಕುಟ್ಟ–ಪೇರಂಬಾಡಿ ರಸ್ತೆಗಳಲ್ಲಿ ಮರಗಳು ಧರೆಗುರುಳಿವೆ.

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಇಲ್ಲಿನ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಶುಕ್ರವಾರ 2,776 ಕ್ಯುಸೆಕ್‌ ಇದ್ದ ನೀರಿನ ಒಳಹರಿವು ಶನಿವಾರ 1,671 ಕ್ಯುಸೆಕ್‌ಗೆ ತಗ್ಗಿದೆ. 2,859 ಗರಿಷ್ಠ ಅಡಿಯ ಈ ಜಲಾಶಯದಲ್ಲಿ ಸದ್ಯ 2833.73 ಅಡಿಗಳು ಮಾತ್ರವೇ ನೀರಿದೆ.

ಬೆಂಗಳೂರು ವರದಿ: ರಾಜ್ಯದ ಕೆಲವು ಭಾಗದಲ್ಲಿ ಭಾನುವಾರ ಹಾಗೂ ಸೋಮವಾರ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜುಲೈ 9ರಂದು ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ಜುಲೈ 10ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದೆ ಎಂದು ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT