ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕ್ಕೆದೇವಳ: ಎಇಒ ಧರ್ಮದ ಬಗ್ಗೆ ಚರ್ಚೆ, ಗೊಂದಲ

ಕುಕ್ಕೆದೇವಳದ ಎಇಒ ಯೇಸುರಾಜ್ ಹಿಂದೂ ಧರ್ಮದವರು ಎಂದು ಸ್ಪಷ್ಟನೆ
Published : 3 ಮೇ 2024, 0:22 IST
Last Updated : 3 ಮೇ 2024, 0:22 IST
ಫಾಲೋ ಮಾಡಿ
Comments

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ (ಎಇಒ) ಆಗಿ ನೇಮಕಗೊಂಡಿರುವ ಯೇಸುರಾಜ್ ಅವರ ಧರ್ಮ ಯಾವುದು ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿದ್ದು, ‘ಯೇಸುರಾಜ್ ಹಿಂದೂ ಧರ್ಮಕ್ಕೆ ಸೇರಿದವರು’ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎಇಒ ಆಗಿದ್ದ ಪುಷ್ಪಲತಾ ರಾವ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಈಚೆಗೆ ರಾಮನಗರ ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ವಿಭಾಗದ ಅಧೀಕ್ಷಕರಾಗಿದ್ದ ಯೇಸುರಾಜ್ ಅವರನ್ನು ಸರ್ಕಾರ ನೇಮಕ ಮಾಡಿತ್ತು.

ಅವರು ಮಂಗಳವಾರವಷ್ಟೇ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ ಅವರ ಧರ್ಮದ ವಿಚಾರವಾಗಿ ಸ್ಪಷ್ಟನೆ ನೀಡಬೇಕು ಎಂಬ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

‘ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯಡಿ ದೇವಸ್ಥಾನಗಳಿಗೆ ಹಿಂದೂ ಅಧಿಕಾರಿಗಳನ್ನು ಮಾತ್ರ ನೇಮಿಸಬೇಕು. ಯೇಸುರಾಜ್ ಅವರು ಹಿಂದೂವೇ ಅಥವಾ ಮತಾಂತರಗೊಂಡ ಕ್ರೈಸ್ತರೇ ಎಂಬುದನ್ನು ದೃಢೀಕರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ’ ಎಂದು ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದರು.

ಯೇಸುರಾಜ್ ಅವರ ಧರ್ಮದ ಬಗ್ಗೆ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿರುವ ಮಧ್ಯೆಯೇ ಕುಕ್ಕೆ ದೇವಳದ ಅಧಿಕಾರಿಗಳು, ‘ಯೇಸುರಾಜ್ ಹಿಂದೂ ಧರ್ಮದವರು’ ಎಂದು ಸ್ಪಷ್ಟನೆ ನೀಡಿದ್ದರು. ಯೇಸುರಾಜ್ ಮೈಸೂರು ಜಿಲ್ಲೆಯ ಅಂಬೇಡ್ಕರ್ ನಗರದವರು. ಗೊಂದಲ ಆರಂಭವಾದ ಬಳಿಕ ಯೇಸುರಾಜ್ ಅವರ ಶೈಕ್ಷಣಿಕ, ಇತರ ದಾಖಲೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ.

ಗೊಂದಲಗಳಿಗೆ ಬಿಜೆಪಿ ಕಾರಣ: ರಾಮಲಿಂಗಾ ರೆಡ್ಡಿ ಆರೋಪ

‘ಈ ಗೊಂದಲಗಳಿಗೆ ಬಿಜೆಪಿ ಕಾರಣ’ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.

‘ರಾಜ್ಯದಲ್ಲಿ ಇನ್ನೊಂದು ಹಂತದ ಚುನಾವಣೆಯ ಕಾರಣ ಜನರನ್ನು ದಾರಿ ತಪ್ಪಿಸಿ, ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಯತ್ನಿಸುತ್ತಿದೆ. ಬಿಜೆಪಿಗೆ ಸೋಲಿನ ಭಯ ಶುರುವಾಗಿರುವುದು ಸ್ಪಷ್ಟ’ ಎಂದು ಸಚಿವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

‘ಯೇಸುರಾಜ್ ಅವರು ಕ್ರೈಸ್ತ ಸಮುದಾಯವರು ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಬಿಜೆಪಿಯು ಕರ್ನಾಟಕದ ಕುರಿತು ಹರಡಿರುವ ಮತ್ತೊಂದು. ಯೇಸುರಾಜ್‌, ಹಿಂದುಳಿದ ಜಾತಿಗೆ ಸೇರಿದವರಾಗಿದ್ದು, ದಾಖಲೆಗಳು ಇವೆ’ ಎಂದು ತಿಳಿಸಿದ್ದಾರೆ.  

ದೂರು ನೀಡುವ ಎಚ್ಚರಿಕೆ: ‘ಈ ರೀತಿಯ ಅಪಪ್ರಚಾರ ಮುಂದುವರಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮಕ್ಕೆ ಸಂಬಂಧಿಸಿದವರಿಗೆ ದೂರು ನೀಡಲಾಗುವುದು’ ಎಂದು ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಹರೀಶ್ ಇಂಜಾಡಿ ತಿಳಿಸಿದ್ದಾರೆ.

‘ಹೆಸರಿನ ವಿಚಾರದಲ್ಲಿ ಅಧಿಕಾರಿಯ ಧರ್ಮದ ಬಗ್ಗೆ ಗೊಂದಲ ಸೃಷ್ಟಿಸಿರುವ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಯ ಧರ್ಮದ ಬಗ್ಗೆ ಗೊಂದಲ ಸೃಷ್ಟಿಸುವ ನಡೆ ಸರಿಯಲ್ಲ. ಅಧಿಕಾರಿಗಳ
ಜೊತೆ ಚರ್ಚಿಸಿ ಸ್ಪಷ್ಟನೆ ಪಡೆದುಕೊಳ್ಳಬೇಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವುದೂ ಸರಿಯಲ್ಲ‘ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT