ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆಯಿಂದ ದೇಶೀಯ ಸೊಗಡು ನಾಶ: ಗೊ.ರು.ಚನ್ನಬಸಪ್ಪ ಕಳವಳ

ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಗೌರವ, ವಾರ್ಷಿಕ ಪ್ರಶಸ್ತಿ ಪ್ರದಾನ
Last Updated 9 ಜನವರಿ 2023, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಕೀಯವಾದ ಆಧುನಿಕತೆ ಭರಾಟೆಗೆ ಸಿಲುಕಿ, ದೇಶೀಯ ಸೊಗಡು ನಿಧಾನವಾಗಿ ಕಣ್ಮರೆಯಾಗುತ್ತಿದೆ’ ಎಂದು ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಆಯೋಜಿಸಿದ್ದ 2022ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಬುಡಕಟ್ಟು ಸಂಸ್ಕೃತಿಯ ಬದುಕಿಗೆ ದೇಶಿ ಎನ್ನುತ್ತೇವೆ. ಆಧುನಿಕತೆ ಪರಕೀಯವಾದದ್ದು. ದೇಶೀಯತೆ ಹೃದಯ ಇದ್ದಂತೆ. ಇದು ಪರಿಶುದ್ಧವಾದದ್ದು. ಆದರೆ, ನಾವಿಂದು ಪರಕೀಯತೆಗೆ ಸಿಲುಕಿ ನಲುಗುತ್ತಿದ್ದೇವೆ’ ಎಂದರು.‌ ‘ಲಂಬಾಣಿ ಸಮುದಾಯಕ್ಕೆ ವಿಶಿಷ್ಟ ಪರಂಪರೆ ಇದೆ. ಸಾಹಿತ್ಯ ಹಾಗೂ ಸಂಸ್ಕೃತಿಯಲ್ಲೂ ಈ ಜನಾಂಗವು ಮುಂದಿದೆ. ಸರಳ ಜೀವನ ನಡೆಸುತ್ತಿದ್ದಾರೆ. ನಗರ ವಾಸಿಗಳಂತೆ ವಿಲಾಸಿ ಜೀವನದ ಆಸೆ ಈ ಸಮುದಾಯಕ್ಕೆ ಇಲ್ಲ. ಇರೋ ಸೌಲಭ್ಯದಲ್ಲಿಯೇ ಲಂಬಾಣಿಗರು ತೃಪ್ತಿ ಕಾಣುತ್ತಿದ್ದಾರೆ. ಆದರೆ, ಶಿಕ್ಷಣ, ಉದ್ಯೋಗದಿಂದ ಈ ಸಮುದಾಯವು ವಂಚಿತವಾಗುತ್ತಿದೆ’ ಎಂದು ಹೇಳಿದರು.

‘ದೇಶದ ಭೌತಿಕ ಬೆಳವಣಿಗೆಯ ಹಿಂದೆ ಲಂಬಾಣಿ ಸಮುದಾಯದ ಬೆವರಿದೆ. ಅದನ್ನು ಮರೆಯುವಂತಿಲ್ಲ. ಬುಡಕಟ್ಟು ಸಮುದಾಯಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳು ಲಂಬಾಣಿಗರಿಗೂ ಲಭಿಸಬೇಕು’ ಎಂದರು.

ಅಕಾಡೆಮಿ ಅಧ್ಯಕ್ಷ ಡಾ.ಹರಿಲಾಲ ಪವಾರ, ‘ತುಳು, ಬ್ಯಾರಿ, ಕೊಂಕಣಿ ಅಕಾಡೆಮಿ ಜತೆಗೇ ಲಂಬಾಣಿ ಅಕಾಡೆಮಿಯೂ ಸ್ಥಾಪನೆ ಆಗಬೇಕಿತ್ತು. ವಿಳಂಬದಿಂದ ಸಮುದಾಯದ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ. ಕಳೆದ ವರ್ಷ ಜುಲೈ 15ರಂದು ಅಕಾಡೆಮಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು. ಈ ಬಾರಿ ಪ್ರಶಸ್ತಿಗೆ ಪ್ರಭಾನ್ವಿತ ಸಾಧಕರನ್ನು ಗುರುತಿಸಲಾಗಿದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಕಾರ್ಯದರ್ಶಿ ಬಲವಂತರಾವ್‌ ಪಾಟೀಲ, ಅಕಾಡೆಮಿ ರಿಜಿಸ್ಟಾರ್‌ ಈಶ್ವರ್‌ ಕು. ಮಿರ್ಜಿ ಹಾಜರಿದ್ದರು.

ಗೈರಿಗೆ ಖಂಡನೆ
ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್‌ ಹಾಗೂ ಶಾಸಕರಾದ ಉದಯ ಬಿ. ಗರುಡಾಚಾರ್‌, ಪಿ.ರಾಜೀವ ಅವರು ಗೈರಾಗಿದ್ದರು. ಇವರ ನಡೆಯನ್ನು ವೇದಿಕೆಯ ಮೇಲೆಯೇ ಗೊರುಚ ಖಂಡಿಸಿದರು.

‘ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಬಂದು ವಿಶಿಷ್ಟ ಪರಂಪರೆಯುಳ್ಳ ಲಂಬಾಣಿ ಸಮುದಾಯದ ಕಲಾವಿದರು ಹಾಗೂ ಸಾಧಕರಿಗೆ ಉತ್ಸಾಹ ತುಂಬಬೇಕಿತ್ತು. ಅವರ ಗೈರು ಬೇಸರ ತರಿಸಿದೆ’ ಎಂದರು.

ಸಾಧಕರಿಗೆ ಗೌರವ
ಪ್ರೊ.ಎಂ.ಶಕುಂತಲಾ ಹನುಮಂತಪ್ಪ, ಪ್ರೊ.ಪಿ.ಕೆ.ಖಂಡೋಬಾ, ಬಿ. ಹೀರಾನಾಯಕ್‌, ಪ್ರೊ.ಡಿ.ಬಿ.ನಾಯಕ್‌, ಗಂಗಪ್ಪ ಖೇಮಪ್ಪ ಲಮಾಣಿ ಅವರಿಗೆ 2022ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗುಲಾಬ್‌ಸಿಂಗ್‌ ಮೇಗು ಪತ್ತಾರ (ಕಲೆ), ಕೊಟ್ರೇಶ್‌ ನಾಯಕ್‌ (ಹಲಗೆ ವಾದನ), ಸಾರಂಗಿ ಉಮ್ಮಾ ನಾಯಕ್‌, ಗುಂಡಾಚಂದ್ರಾ ನಾಯಕ್‌ (ಕಥನ ಗೀತೆ), ಶಾಂತಿಬಾಯಿ ಕಾಶ್ಯಾ ನಾಯಜ್‌ (ಕಸೂತಿ ಕಲೆ), ಸಾವಿತ್ರಿ ಮಾಂತೇಶ ಲಮಾಣಿ (ಜಾನಪದ ಹಾಡು), ಸೋಪನರಾವ್‌ ರೂಪ್ಲಾ (ಹೋಲಿ ಹಾಡು), ದೇವಲಪ್ಪ ಟೀಕಪ್ಪ ಲಮಾಣಿ (ಡೋಡೊ ನಂಗಾರಾ ಗೀತೆ), ಮಂಜುನಾಥ ಜಯಚಂದ್ರಗಿರಿ (ಧಾರ್ಮಿಕ ವೃತ್ತಿ ಕಲೆ) ಅವರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT