ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಕಬಳಿಕೆ ತಡೆ ನ್ಯಾಯಾಲಯಕ್ಕೆ ಕಂದಾಯ ಅಧಿಕಾರಿಗಳೇ ಶತ್ರು, ಭೂಗಳ್ಳರಿಗೆ ಫಸಲು!

ನಿರೀಕ್ಷಿತ ಪ್ರಮಾಣದಲ್ಲಿ ಫಲ ನೀಡದ ಪ್ರಯತ್ನ
Last Updated 19 ಜನವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಭೂ ಅಕ್ರಮಗಳಿಗೆ ಇತಿಶ್ರೀ ಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆರಂಭವಾದ ಪ್ರಯತ್ನ ನಿರೀಕ್ಷಿತ ಪ್ರಮಾಣದಲ್ಲಿ ಫಲನೀಡಿಲ್ಲ. ಸರ್ಕಾರಿ ಭೂಮಿಗಳನ್ನು ನುಂಗಿ ನೀರು ಕುಡಿದವರು ಶ್ರೀಮಂತರಾದವರು ಈಗಲೂ ಹಾಯಾಗಿದ್ದರೆ, ಕೃಷಿಗಾಗಿ ಪಕ್ಕದ ಜಮೀನು ಬಳಸಿದ ಅನ್ನದಾತರು ಕಾನೂನಿನ ಪರಿಭಾಷೆಯಲ್ಲಿ ‘ಅಪರಾಧಿ’ ಸ್ಥಾನದಲ್ಲಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ.ಈ ಕುರಿತು ‘ಒಳನೋಟ’ದಲ್ಲಿ ಬೆಳಕು ಚೆಲ್ಲಲಾಗಿದೆ.

ಜನನಾಯಕರ ಸೋಗು ಹಾಕಿಕೊಂಡು ಭೂಗಳ್ಳತನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವವರು ಯಾವುದೇ ಅಳುಕಿಲ್ಲದೇ ಸದ್ದಿಲ್ಲದೇ ಮತ್ತಷ್ಟು ಭೂಮಿಯನ್ನು ಸ್ವಾಹ ಮಾಡುತ್ತಿದ್ದಾರೆ. ‘ಭೂ ಕಬಳಿಕೆ ತಡೆ ನ್ಯಾಯಾಲಯ’ಕ್ಕೆ ಕಾಟಾಚಾರಕ್ಕೊಂದು ಭೇಟಿ ಕೊಟ್ಟು ವಕೀಲರ ಮೂಲಕ ಎಲ್ಲ ‘ಹೊಂದಾಣಿಕೆ’ ಮಾಡುತ್ತಿರುವ ಇವರ ಬೆಂಗಾವಲಿಗೆ ಅಧಿಕಾರಿಗಳ ದೊಡ್ಡ ‍‍ಪಡೆಯೇ ನಿಂತಿದೆ. ಆಡಳಿತದ ದಿಕ್ಕುದೆಸೆ ನಿರ್ಧರಿಸುವ ಈ ಪ್ರಭಾವಿ ರಾಜಕಾರಣಿಗಳು ಕಾನೂನಿನ ಕುಣಿಕೆಯಿಂದ ನಿರಾಯಾಸವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ.

ಇನ್ನೊಂದೆಡೆ, ಕೃಷಿಗೆ ಬೇಕಾದ ಸೊಪ್ಪು, ಸೌದೆಗಳನ್ನು ಒದಗಿಸುವ ಹೊಲದ ಪಕ್ಕದ ಕೆಲವೇ ಗುಂಟೆ ಕುರುಚಲು ಕಾಡಿಗೆ ಬೇಲಿ ಹಾಕಿಕೊಂಡಿದ್ದ ರೈತರು ‘ಭೂ ಕಬಳಿಕೆ ಚಕ್ರವ್ಯೂಹಕ್ಕೆ’ ಸಿಲುಕಿದ್ದಾರೆ. ಈ ಜಮೀನನ್ನು ಅಭಿವೃದ್ಧಿಪಡಿಸಿದ ತಪ್ಪಿಗೆ ಬಡ ರೈತರು ‘ಕೃಷ್ಣನ ಜನ್ಮಸ್ಥಾನ’ ಸೇರುವ ಆತಂಕದಲ್ಲಿದ್ದಾರೆ. ಅವರ ಹೆಸರಿನ ಮುಂದೆ ‘ಆರೋಪಿ’ಗಳೆಂಬ ಕಳಂಕ ಅಂಟಿಕೊಂಡಿತುವುದರಿಂದ ಅವಮಾನದ ಬೇಗುದಿಯಲ್ಲಿ ಬೇಯುವ ಪರಿಸ್ಥಿತಿ ಅವರದು.

ಕೆರೆ ಕುಂಟೆಗಳು, ಗೋಮಾಳಗಳು ಸೇರಿದಂತೆ ಯಾವುದನ್ನೂ ಬಿಡದೆ ಕಬಳಿಸಿ ‘ಮಹಲು’ಗಳನ್ನು ಕಟ್ಟಿರುವವರನ್ನು ಶಿಕ್ಷಿಸುವ ಮಹದುದ್ದೇಶದಿಂದ 2016ರ ಆಗಸ್ಟ್‌ನಲ್ಲಿ ಆರಂಭವಾಗಿರುವ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯಕ್ಕೀಗ ಮೂರರ ಹರೆಯ. ಈ ಕಿರು ಅವಧಿಯಲ್ಲಿ ಸಾಕಷ್ಟು ಮಂದಿಯನ್ನು ಶಿಕ್ಷಿಸುವ ಕೆಲಸವನ್ನೇನೋ ಈ ನ್ಯಾಯಾಲಯ ಮಾಡಿದೆ. ಆದರೆ, ನೆಲ ಜಲವನ್ನು ಕೊಳ್ಳೆ ಹೊಡೆದಿರುವ ದೊಡ್ಡ ಮೀನುಗಳಿನ್ನೂ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿಲ್ಲ. ದಾಖಲೆಗಳನ್ನು ತಿದ್ದಿ ತೀಡುವುದರಲ್ಲಿ ಪರಿಣಿತರಾದ ಅಧಿಕಾರಿಗಳ ಸಹಾಯಹಸ್ತವೂ ಇವರಿಗಿದೆ. ಹಾಗಾಗಿ ಇಂತಹ ಪ್ರಕರಣಗಳ ವಿಚಾರಣೆ ಒಂದೋ ಕುಂಟುತ್ತಾ ಸಾಗಿದೆ. ಇಲ್ಲವೇ, ಕೆಲವೇ ತಿಂಗಳುಗಳಲ್ಲಿ ಖುಲಾಸೆಯಾಗಿವೆ.

ಕಂದಾಯ ಹಾಗೂ ಅರಣ್ಯ ಒತ್ತುವರಿಯ ಎಲ್ಲ ಪ್ರಕರಣಗಳನ್ನು ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕು ಎಂದು ತಾಕೀತು ಮಾಡಿ ರಾಜ್ಯ ಸರ್ಕಾರ ಸುತ್ತೋಲೆಯನ್ನೂ ಹೊರಡಿಸಿತ್ತು. ಆದರೆ, ಅಧಿಕಾರಿಗಳು ಈ ಬಗ್ಗೆ ತಲೆಯೇ ಕೆಡಿಸಿಕೊಳ್ಳಲಿಲ್ಲ. ಆರಂಭದ ಏಳೆಂಟು ತಿಂಗಳು ನ್ಯಾಯಾಲಯಕ್ಕೆ ಹಸ್ತಾಂತರವಾದ ಪ್ರಕರಣಗಳು ಬೆರಳೆಣಿಕೆಯಷ್ಟು. ಅಧಿಕಾರಿಗಳ ಅಸಹಕಾರ ನ್ಯಾಯಾಲಯಕ್ಕೆ ದೊಡ್ಡ ತಲೆನೋವಾಯಿತು. ಅಧಿಕಾರಿಗಳು ಸಹಕರಿಸದಿದ್ದರೂ ಕೋರ್ಟ್‌ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಸ್ವಯಂಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸುವ ಮೂಲಕ ಭೂಗಳ್ಳರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿತು.

ಅಧಿಕಾರಿಗಳ ಧೋರಣೆಗೆ ಮದ್ದು ಅರೆಯಲು ಶುರುವಿನಲ್ಲಿ ನೋಟಿಸ್‌ ನೀಡಿತು. ಸ್ಪಂದಿಸದವರಿಗೆ ಷೋಕಾಸ್‌ ನೋಟಿಸ್‌ ನೀಡಿತು. ಮತ್ತಷ್ಟು ಪ್ರಕರಣಗಳು ನ್ಯಾಯಾಲಯದ ಸುಪರ್ದಿಗೆ ಬಂದವು. ನ್ಯಾಯಾಲಯವು ಅಧಿಕಾರಿಗಳ ವಿರುದ್ಧ ವಾರೆಂಟ್‌ ಅಸ್ತ್ರ ಪ್ರಯೋಗಿಸಿತು. ಇದಕ್ಕೆ ಬೆಚ್ಚಿದ ಕೆಲವರು ಕರಗಿದರು. ಮತ್ತೆ ಹತ್ತು ಸಾವಿರದಷ್ಟು ಪ್ರಕರಣಗಳು ನ್ಯಾಯಾಲಯಕ್ಕೆ ವರ್ಗವಾದವು. ಆದರೆ, ‘ಚತುರ’ ಅಧಿಕಾರಿಗಳು ಇಲ್ಲೂ ಆಟ ಆಡಿದರು. ತಮ್ಮ ಹುದ್ದೆಗೆ ಕುತ್ತು ತರದಂತಹ ಪ್ರಕರಣಗಳನ್ನಷ್ಟೇ ನ್ಯಾಯಾಲಯಕ್ಕೊಪ್ಪಿಸಿ ಕೊಟ್ಟು ಕೈತೊಳೆದುಕೊಂಡರು.

ಇನ್ನೊಂದೆಡೆ, ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಬಗರ್‌ಹುಕುಂ ಅಡಿಯಲ್ಲಿ ಅನರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ಆರೋಪಿಸಿ ಕೋರ್ಟ್‌ನಲ್ಲಿ ಪ್ರಕರಣಗಳನ್ನು ದಾಖಲಿಸಿದರು. ಇದರಿಂದಾಗಿ, ಒತ್ತುವರಿ ಭೂಮಿಯ ಒಡೆತನ ಪಡೆಯುವ ರೈತರ ಕನಸು ಕರಗಿತು. ಮತ್ತೊಂದೆಡೆ, ಅವರು ‘ಭೂಕಬಳಿಕೆ ಆರೋಪಿ’ ಹಣೆಪಟ್ಟಿ ಹೊತ್ತು ಕೋರ್ಟ್‌ಗೆ ಅಲೆದಾಡುವಂತಾಯಿತು.

ಆರೋಪಿ ಸ್ಥಾನದಲ್ಲಿ ನಿಂತಿರುವವರು ವಿಚಾರಣೆಗೆ ಹಾಜರಾಗಲು ಬೆಂಗಳೂರಿಗೆ ಬರಬೇಕು. ಅದರೊಂದಿಗೆ ವಕೀಲರಿಗೆ ದುಬಾರಿ ಶುಲ್ಕ ತೆರಬೇಕು. ಒಂದೆರಡು ದಿನಗಳಲ್ಲಿ ಇದು ಇತ್ಯರ್ಥವಾಗುವ ವಿಚಾರವಲ್ಲ. ಕೆಲವರಂತೂ ಹತ್ತಾರು ಸಲ ನ್ಯಾಯಾಲಯಕ್ಕೆ ಅಲೆದಾಡಿದ್ದಾರೆ. ಇದರಿಂದಾಗಿ, ಕೂಡಿಟ್ಟ ಅಲ್ಪ ಸ್ವಲ್ಪ ಹಣವೂ ಕರಗಿ ಹೋಗಿದೆ. ಒಂದೇ ಸರ್ವೆ ಸಂಖ್ಯೆಯಲ್ಲಿ ನೆಲೆಸಿದ್ದ ಹಲವು ಕುಟುಂಬಗಳಿಗೆ ನ್ಯಾಯಾಲಯ ಒಟ್ಟಿಗೆ ನೋಟಿಸ್‌ ನೀಡಿದೆ. ಅವರು ಟೆಂಪೊ, ಬಸ್‌ಗಳನ್ನು ಮಾಡಿಕೊಂಡು ಬಂದು ಜಾಮೀನು ಪಡೆದುಕೊಂಡು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.

ಮೂರು ವರ್ಷಗಳಲ್ಲಿ ಐವರು ಶಾಸಕರ ಮೇಲೆ ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಇತ್ಯರ್ಥವಾಗಿವೆ. ಇವುಗಳ ಹಿಂದೆ ಕಂದಾಯ ಇಲಾಖೆಯ ಅಧಿಕಾರಿಗಳ ಕೈಚಳಕ ಇವೆ ಎನ್ನಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮೂರು ವರ್ಷಗಳಿಂದ ದಾಖಲೆಗಳನ್ನೇ ಒದಗಿಸಿಲ್ಲ. ಅದೇನೂ ಸಣ್ಣ ಪ್ರಕರಣವಲ್ಲ. ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿರುವ ಶ್ರೀರಂಗಪಟ್ಟಣ ದೇವಸ್ಥಾನದ 800 ಎಕರೆ ಜಾಗಕ್ಕೆ ಸಂಬಂಧಿಸಿದ ಪ್ರಕರಣ. ಬೆಂಗಳೂರಿನ ಶಾಸಕರೊಬ್ಬರು ಹಾಗೂ 52 ಮಂದಿ ಇಲ್ಲಿನ 279 ಎಕರೆ ಕಬಳಿಸಿದ್ದಾರೆ ಎಂಬ ಆರೋಪವಿದೆ. ಆ ಶಾಸಕರು ಒಮ್ಮೆ ನ್ಯಾಯಾಲಯದ ವಿಚರಣೆಗೂ ಬಂದು ಹೋದರು. ಭೂ ದಾಖಲೆಗಳನ್ನು ಒದಗಿಸುವಂತೆ ನಗರ ಜಿಲ್ಲಾಡಳಿತಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತು. ‘ಪ್ರಿಯ’ ಶಾಸಕರ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಅಧಿಕಾರಿಗಳು ಸರ್ವೆ, ದಾಖಲೆ ಪರಿಶೀಲನೆ ಹೆಸರಿನಲ್ಲಿ ಕಾಲಹರಣ ಮಾಡಿದರು. ನ್ಯಾಯಾಲಯಕ್ಕೆ ಇಲ್ಲಿಯವರೆಗೆ ಪೂರಕ ದಾಖಲೆಗಳನ್ನೇ ಒದಗಿಸಿಲ್ಲ.

550 ಎಕರೆ ಸರ್ಕಾರಿ ಭೂಮಿ ಸ್ವಾಧೀನ

‘ಎರಡು ವರ್ಷಗಳಲ್ಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ಕಂದಾಯ ಇಲಾಖೆ 550 ಎಕರೆಗೂ ಅಧಿಕ ಸರ್ಕಾರಿ ಭೂಮಿಯನ್ನು

ಸ್ವಾಧೀನಕ್ಕೆ ಪಡೆದಿದೆ. ಅದರಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಚೋಳನಾಯಕನಹಳ್ಳಿಯಲ್ಲಿರುವ 56 ಎಕರೆ (ಶ್ರೀರಂಗಪಟ್ಟಣ ದೇವಸ್ಥಾನಕ್ಕೆ ಸೇರಿದ ಜಾಗ) ಜಾಗವೂ ಸೇರಿದೆ’ ಎಂದು ಭೂಕಬಳಿಕೆ ತಡೆ ನ್ಯಾಯಾಲಯದ ವಿಶೇಷ ಸರ್ಕಾರಿ ವಕೀಲ ಬಿ.ಎಸ್‌.‍ಪಾಟೀಲ ತಿಳಿಸಿದರು.

‘ಇತಿಮಿತಿಗಳ ನಡುವೆ ನ್ಯಾಯಾಲಯ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶ್ರೀಮಂತರು ಹಾಗೂ ಬಡವರು ಎಂಬ ಬೇಧಭಾವವಿಲ್ಲದೆ ಆದೇಶಗಳನ್ನು ಹೊರಡಿಸುತ್ತಿದೆ. ‍ಪ್ರಕರಣ ದಾಖಲಾದ ಸಂದರ್ಭದಲ್ಲಿ ಆರೋಪಿಗಳು ಭೂಕಬಳಿಕೆ ಮಾಡಿಲ್ಲ ಎಂದು ಸ್ವತಃ ವಾದಿಸಲು ಅವಕಾಶ ಇದೆ. ಈ ಸಂಬಂಧ ದಾಖಲೆಗಳನ್ನು ಸಲ್ಲಿಸಿದರೆ ಪ್ರಕರಣದಿಂದ ಕೈಬಿಡಲಾಗುತ್ತದೆ. ನ್ಯಾಯಾಲಯದ ಕುರಿತು ಜನರು ಅನಗತ್ಯವಾಗಿ ಭಯಪಡುವುದು ಬೇಕಿಲ್ಲ’ ಎಂದರು.

‘ಆರಂಭದಲ್ಲಿ ಕೆಲವು ತಹಶೀಲ್ದಾರರು ಪ್ರಕರಣಗಳ ವರ್ಗಾವಣೆಗೆ ನಿರಾಸಕ್ತಿ ತೋರಿದರು. ನೋಟಿಸ್‌, ಷೋಕಾಸ್‌ ನೋಟಿಸ್‌ ಹಾಗೂ ವಾರೆಂಟ್‌ಗಳನ್ನು ನೀಡಿ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆವು. ಆ ಬಳಿಕ ಪ್ರಕರಣಗಳ ಹಸ್ತಾಂತರ ಮಾಡಿದರು. ಭೂಗಳ್ಳರಿಗಲ್ಲದೆ ಹಲವು ಅಧಿಕಾರಿಗಳಿಗೆ ಸಹ ನ್ಯಾಯಾಲಯ ಬಿಸಿ ಮುಟ್ಟಿಸಿದೆ’ ಎಂದು ಅವರು ಹೇಳಿದರು.

‘ವಿ.ಬಾಲಸುಬ್ರಮಣಿಯನ್‌ ವರದಿಯ ಆಧಾರದಲ್ಲಿ ನ್ಯಾಯಾಲಯ ಕ್ರಮ ಕೈಗೊಳ್ಳುತ್ತಿದೆ. ಈ ಸಂಬಂಧ ಒತ್ತುವರಿ ಪ್ರಕರಣಗಳ ವಿವರ ನೀಡುವಂತೆ ಎಲ್ಲ ತಹಶೀಲ್ದಾರ್‌ಗಳಿಗೆ ನಿರ್ದೇಶನ ನೀಡಲಾಗಿತ್ತು. ಒತ್ತುವರಿ ಪ್ರಕರಣಗಳ ಪೈಕಿ ಶೇ 5ರಷ್ಟು ಪ್ರಕರಣಗಳಷ್ಟೇ ಇಲ್ಲಿಗೆ ವರ್ಗಾವಣೆಯಾಗಿವೆ. ನ್ಯಾಯಾಲಯ ದೊಡ್ಡ ಸಂಖ್ಯೆಯಲ್ಲಿ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಇದು ನ್ಯಾಯಾಲಯಕ್ಕೆ ಇರುವ ಕಾಳಜಿಗೆ ಸಾಕ್ಷಿ’ ಎಂದು ಅವರು ಪ್ರತಿಪಾದಿಸಿದರು.

ಇರುವುದೊಂದೇ ನ್ಯಾಯಾಲಯ

ನ್ಯಾಯಾಲಯ ಸ್ಥಾಪನೆಯ ಹಾದಿ ಸುಲಭದ್ದು ಆಗಿರಲಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಇದು ಬೇಡವಾದ ಕೂಸಾಗಿತ್ತು. ಮಸೂದೆಯನ್ನು ಕಾಯ್ದೆ ರೂಪಕ್ಕೆ ತರುವ ಪ್ರಕ್ರಿಯೆಗೂ ಅಸಹಕಾರ ನೀಡಿದರು. ಇದರಿಂದಾಗಿ, ಕಾಯ್ದೆ ರೂಪಿಸುವ ಪ್ರಕ್ರಿಯೆ ನಾಲ್ಕೈದು ವರ್ಷ ಒಂದಿನಿತೂ ಮುಂದಕ್ಕೆ ಹೋಗಿರಲಿಲ್ಲ. ವಿ.ಬಾಲಸುಬ್ರಮಣಿಯನ್‌ ಕಾರ್ಯಪಡೆಯ ನಿರಂತರ ಒತ್ತಡದಿಂದ ಕಡತ ಸ್ವಲ್ಪ ಮುಂದೆ ಸಾಗಿತು. ಬಳಿಕ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಸೇರಿದಂತೆ ಹಲವರು ಹೋರಾಟಗಳ ಮೂಲಕ ಸತತ ಒತ್ತಡ ಹೇರಿದ ಬಳಿಕವೇ ‘ಸಮಾಜವಾದಿ’ ಸಿದ್ದರಾಮಯ್ಯ ಸರ್ಕಾರ ಕರಗಿದ್ದು. ಅಳೆದು ತೂಗಿ ನ್ಯಾಯಾಲಯ ಸ್ಥಾಪನೆಗೆ ಸರ್ಕಾರ ಒಪ್ಪಿಗೆ ನೀಡಿದ್ದು.

ಈ ನ್ಯಾಯಾಲಯ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಾಚರಿಸುತ್ತಿದೆ. ಬೀದರ್‌, ಕಲಬುರ್ಗಿ, ಬೆಳಗಾವಿ‌, ವಿಜಯಪುರದ ಜನರು ತಮ್ಮ ವಿರುದ್ಧ ಸಣ್ಣ ಪ್ರಕರಣ ದಾಖಲಾದರೂ ಇಲ್ಲಿಗೆ ಧಾವಿಸಿ ಬರಬೇಕು. ಪ್ರಕರಣಗಳನ್ನು ಸ್ಥಳೀಯ ಮಟ್ಟದ ನ್ಯಾಯಾಲಯಗಳಲ್ಲೂ ಇತ್ಯರ್ಥಪಡಿಸುವುದಕ್ಕೆ ಕಾಯ್ದೆಯಲ್ಲಿ ಅವಕಾಶ ಇದೆ. ಆದರೆ, ಸರ್ಕಾರ ಈ ದಿಸೆಯಲ್ಲಿ ಈವರೆಗೂ ಚಿಂತನೆ ನಡೆಸಿಲ್ಲ.

ಕೊಟ್ಟಿದ್ದು ಗುಲಗಂಜಿಯಷ್ಟು
ರಾಜ್ಯದಲ್ಲಿ 12 ಲಕ್ಷ ಎಕರೆಯಷ್ಟು ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ವಿ.ಬಾಲಸುಬ್ರಮಣಿಯನ್‌ ನೇತೃತ್ವದ ಕಾರ್ಯಪಡೆ ವರದಿ ಸಲ್ಲಿಸಿ ವರ್ಷಗಳೇ ಕಳೆದಿವೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 34 ಸಾವಿರಕ್ಕೂ ಹೆಚ್ಚು ಎಕರೆಗಳಷ್ಟು ಜಾಗ ಕಬಳಿಕೆಯಾಗಿದೆ ಎಂದು ಎ.ಟಿ.ರಾಮಸ್ವಾಮಿ ವರದಿ ಹೇಳಿದೆ.

ಬಾಲಸುಬ್ರಮಣಿಯನ್‌ ಸಮಿತಿ ವರದಿಯ ಆಧಾರದಲ್ಲಿ ನ್ಯಾಯಾಲಯ ಕ್ರಮ ಕೈಗೊಳ್ಳುತ್ತಿದೆ. ಆ ‍ಪ್ರಕಾರ, ಪ್ರಕರಣಗಳ ವರ್ಗಾವಣೆಗೆ ನಿರ್ದೇಶನ ನೀಡಿತ್ತು. ಆದರೆ, ಕಂದಾಯ ಇಲಾಖೆಯಿಂದ ವರ್ಗಾವಣೆಯಾದ ಪ್ರಕರಣಗಳು ಗುಲಗುಂಜಿಯಷ್ಟು ಮಾತ್ರ. ಶೇ 95ರಷ್ಟು ಪ್ರಕರಣಗಳು ಈಗಲೂ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲೇ ಇವೆ. ಭೂಗಳ್ಳರ ಸ್ವರ್ಗ ಎನಿಸಿರುವ ಬೆಂಗಳೂರು ನಗರದಿಂದ ನ್ಯಾಯಾಲಯಕ್ಕೆ ಹಸ್ತಾಂತರವಾಗಿದ್ದು ಕೇವಲ 120 ಪ್ರಕರಣಗಳು. ರಾಯಚೂರು, ಬೀದರ್‌, ಬೆಳಗಾವಿ, ಕೋಲಾರ, ಹಾಸನ ಹಾಗೂ ರಾಮನಗರ ಜಿಲ್ಲೆಗಳ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ.

ವಿಭಾಗವಾರು ನ್ಯಾಯಾಲಯ ರಚನೆ ಆಗಲಿ

ಸರ್ಕಾರಿ ಭೂಕಬಳಿಕೆ ತಡೆಗೆ ಸಂಬಂಧಿಸಿದಂತೆ ವಿಭಾಗವಾರು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಈ ರೀತಿ ವಿಶೇಷ

ನ್ಯಾಯಾಲಯ ಸ್ಥಾ‍ಪಿಸಬೇಕು ಎಂಬುದು ಕಾಯ್ದೆಯಲ್ಲೇ ಉಲ್ಲೇಖಿತವಾಗಿದೆ. ಮೈಸೂರು, ಧಾರವಾಡ ಮತ್ತು ಕಲಬುರ್ಗಿಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಇದರಿಂದ ದೂರದ ಊರುಗಳಿಂದ ಬೆಂಗಳೂರಿಗೆ ಬರುವುದು ತಪ್ಪುತ್ತದೆ. ರಾಜ್ಯದಲ್ಲಿ ಸುಮಾರು 14 ಲಕ್ಷ ಎಕರೆಗಳಷ್ಟು ಸರ್ಕಾರಿ ಭೂಮಿ ಕಬಳಿಕೆ ಆಗಿದೆ ಎಂದು ಕಾರ್ಯಪಡೆ ವರದಿ ನೀಡಿತ್ತು. ಆದರೆ, ಸರ್ಕಾರ ಇನ್ನು 3 ಲಕ್ಷ ಎಕರೆಯಷ್ಟು ಹೆಚ್ಚು ಕಬಳಿಕೆ ಆಗಿದೆ ಎಂದು ನ್ಯಾಯಾಲಯಕ್ಕೆ ಹೇಳಿತ್ತು. ಆದರೆ, 14 ಲಕ್ಷ ಎಕರೆ ಭೂಕಬಳಿಕೆ ಕುರಿತು ವಿಚಾರಣೆ ನಡೆಯುತ್ತಿಲ್ಲ. ದೊಡ್ಡ ಕಬಳಿಕೆದಾರರನ್ನು ಮುಟ್ಟಲು ಹೋಗುತ್ತಿಲ್ಲ. ಈಗ ವಿಶೇಷ ನ್ಯಾಯಾಲಯವು ತನಗೆ ಬರುತ್ತಿರುವ ದೂರುಗಳ ಬಗ್ಗೆ ಮಾತ್ರ ವಿಚಾರಣೆ ನಡೆಸುತ್ತಿದೆ. ಒಟ್ಟು ಕಬಳಿಕೆ ಆದ ಭೂಮಿಯಲ್ಲಿ ಶೇ 0.1 ರಷ್ಟು ವಿಚಾರಣೆ ಆಗುತ್ತಿರಬಹುದು. 2011 ರಲ್ಲಿ ಅಂದಿನ ಸರ್ಕಾರ ವಿಶೇಷ ಕಾರ್ಯಪಡೆಯನ್ನು ರದ್ದು ಮಾಡಿತ್ತು. ಸರ್ಕಾರದಲ್ಲಿರುವವರು ಯಾರೂ ಕಾಯ್ದೆಯನ್ನು ಓದಿಲ್ಲ. ಸರ್ಕಾರಿ ಭೂಮಿಯನ್ನು ಮರಳಿ ವಶಕ್ಕೆ ಪಡೆಯುವ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ.
- ವಿ.ಬಾಲಸುಬ್ರಮಣಿಯನ್, ನಿವೃತ್ತ ಐಎಎಸ್ ಅಧಿಕಾರಿ

ಭೂಕಬಳಿಕೆ ತಡೆ ಕಾಯ್ದೆಯಲ್ಲಿ ಏನಿದೆ?

*ಇದು ಸರ್ಕಾರ, ಸ್ಥಳೀಯ ಪ್ರಾಧಿಕಾರ, ಶಾಸನಬದ್ಧ ಅಥವಾ ಶಾಸನಬದ್ಧವಲ್ಲದ ಸಂಸ್ಥೆಗೆ ಸೇರಿದ ಮತ್ತು ಇದರಲ್ಲಿ ಒಂದು ಕಂಪನಿ ಟ್ರಸ್ಟ್‌, ಸಂಘ ಮತ್ತು ವ್ಯಕ್ತಿಗಳ ಸಂಸ್ಥೆಯೂ ಒಳಗೊಂಡಂತೆ ಎಲ್ಲ ಜಮೀನುಗಳಿಗೆ ಅನ್ವಯಿಸುತ್ತದೆ.

*ಭೂಕಬಳಿಕೆ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯ ಕನಿಷ್ಠ ಒಂದು ವರ್ಷದಿಂದ ಗರಿಷ್ಠ ಮೂರು ವರ್ಷಗಳು ಕಾರಾಗೃಹವಾಸ ಹಾಗೂ ಗರಿಷ್ಠ ₹25 ಸಾವಿರದ ವರೆಗೆ ದಂಡ ವಿಧಿಸಬಹುದು.

*ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ಇಬ್ಬರು ಸದಸ್ಯರು ಮತ್ತು ಜಿಲ್ಲಾಧಿಕಾರಿ ಶ್ರೇಣಿಗಿಂತ ಕಡಿಮೆ ಇಲ್ಲದ ಇಬ್ಬರು ಐಎಎಸ್‌ ಅಧಿಕಾರಿಗಳು ಕಂದಾಯ ಸದಸ್ಯರಾಗಿದ್ದಾರೆ.

*ಒಬ್ಬ ನ್ಯಾಯಾಂಗ ಸದಸ್ಯನು ಅಧ್ಯಕ್ಷರಾಗಿರುವ ಹಾಗೂ ಒಬ್ಬ ಕಂದಾಯ ಸದಸ್ಯನಿಂದ ಕೂಡಿದ ಹೆಚ್ಚುವರಿ ಪೀಠ ಸ್ಥಾಪಿಸಬಹುದು.

*ರಾಜ್ಯದಲ್ಲಿನ ಎಲ್ಲ ಭೂಕಬಳಿಕೆ ಪ್ರಕರಣಗಳನ್ನು ವಿಶೇಷ ನ್ಯಾಯಾಲಯವಷ್ಟೇ ವಿಚಾರಣೆ ನಡೆಸಬೇಕು.

*ಈ ನ್ಯಾಯಾಲಯವು ಸಿವಿಲ್‌ ನ್ಯಾಯಾಲಯ ಹಾಗೂ ಸೆಷನ್ಸ್ ನ್ಯಾಯಾಲಯದ ಅಧಿಕಾರಗಳನ್ನು ಹೊಂದಿದೆ.

*ಜಮೀನು ಸರ್ಕಾರದ ಸ್ವಾಮ್ಯಕ್ಕೆಂದು ಸೇರಿದೆಂದು ಮೇಲ್ನೋಟಕ್ಕೆ ಋಜುವಾದರೆ, ಜಮೀನನ್ನು ಕಬಳಿಸಿಲ್ಲವೆಂದು ಋಜುವಾತು ಮಾಡುವ ಹೊಣೆಗಾರಿಕೆ ಆಪಾದಿತನ ಮೇಲಿರುತ್ತದೆ.

*ವಿಶೇಷ ನ್ಯಾಯಾಲಯ ಸ್ಥಾ‍‍ಪನೆಯಾಗದ ಜಾಗಗಳಲ್ಲಿ ಭೂ ಅತಿಕ್ರಮಣದ ಅಪರಾಧಗಳ ವಿಚಾರಣೆ ನಡೆಸಲು ಸರ್ಕಾರವು ಪ್ರಥಮದರ್ಜೆ ಮ್ಯಾಜಿಸ್ಟ್ರೇಟ್‌ ಒಬ್ಬರಿಗೆ ಅಧಿಕಾರ ನೀಡಬಹುದು.

*ಬೇರೆ ನ್ಯಾಯಾಲಯದಲ್ಲಿರುವ ಭೂಕಬಳಿಕೆ ಪ್ರಕರಣಗಳು ಈ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕು.

*ಭೂ ಕಬಳಿಕೆ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಭೂ ಕಬಳಿಕೆಗೆ ಬೆಂಬಲ ನೀಡುವ ಸರ್ಕಾರಿ ನೌಕರರನ್ನೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.

ದಶಕದ ಹೋರಾಟದ ಹಾದಿ

2006: ನ್ಯಾಯಾಲಯದ ಸ್ಥಾಪನೆಗೆ ಭೂಮಿಕೆ ಸಿದ್ಧಪಡಿಸಿದವರು ನೆಲ ಜಲದ ಬಗ್ಗೆ ಕಾಳಜಿ ಇದ್ದ ಕೆಲವು ಶಾಸಕರು. ಬೆಂಗಳೂರಿನ ಭೂ ಅತಿಕ್ರಮಣದ ಕರಾಳ ಮುಖದ ಬಗ್ಗೆ ವಿಧಾನಸಭೆಯಲ್ಲಿ 2006ರಲ್ಲಿ ಇಂಚಿಂಚೂ ಬೆಳಕು ಚೆಲ್ಲಿದರು. ಪರಿಸ್ಥಿತಿಯ ಗಾಂಭೀರ್ಯ ಅರಿತ ವಿಧಾನಸಭಾಧ್ಯಕ್ಷರು ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ 17 ಸದಸ್ಯರ ಜಂಟಿ ಸದನ ಸಮಿತಿ ರಚಿಸಿದರು. ಬೆಂಗಳೂರು ನಗರ ಜಿಲ್ಲೆಯ ಭೂಕಬಳಿಕೆ ಪ್ರಕರಣಗಳ ಅಧ್ಯಯನ ನಡೆಸಿ ಸಮಿತಿ 2007ರಲ್ಲಿ ಎರಡು ವರದಿಗಳನ್ನು ಸಲ್ಲಿಸಿತು. ಆಂಧ್ರ ಪ್ರದೇಶ ಭೂಕಬಳಿಕೆ ನಿಷೇಧ ನ್ಯಾಯಾಲಯದ ಕಾರ್ಯನಿರ್ವಹಣೆಯನ್ನು ಸಮಿತಿಯ ಸದಸ್ಯರು ಅಧ್ಯಯನ ನಡೆಸಿ ಅಂತಹ ನ್ಯಾಯಾಲಯದ ಸ್ಥಾಪನೆಯ ಅಗತ್ಯವಿದೆ ಎಂದು ಮನದಟ್ಟು ಮಾಡಿಕೊಟ್ಟರು.

2007: ಸರ್ಕಾರಿ ಭೂಮಿ ಕಬಳಿಕೆಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಕರ್ನಾಟಕ ಭೂಕಬಳಿಕೆ (ನಿಷೇಧ) ಮಸೂದೆ–2007ಗೆ ವಿಧಾನಮಂಡಲದ ಉಭಯ ಸದನಗಳೂ ಒಪ್ಪಿಗೆ ನೀಡಿದ್ದವು. ಬಳಿಕ ಮಸೂದೆಯನ್ನು ರಾಷ್ಟ್ರಪತಿಯವರ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು. ನಾಲ್ಕು ವರ್ಷಗಳ ಕಾಲ ಮಸೂದೆ ಕೇಂದ್ರ ಸರ್ಕಾರದ ಬಳಿಯೇ ಇತ್ತು. ಈ ಅವಧಿಯಲ್ಲಿ ಹಲವು ವಿಷಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ, ಸೂಕ್ತ ಉತ್ತರ ಪಡೆದಿತ್ತು.

2011: ಮತ್ತೆ ಮಸೂದೆಯನ್ನು ವಾಪಸ್ ಕಳುಹಿಸಿದ ಕೇಂದ್ರ ಸರ್ಕಾರ, ವಕ್ಫ್ ಆಸ್ತಿಗಳನ್ನೂ ಮಸೂದೆಯ ವ್ಯಾಪ್ತಿಯಲ್ಲಿ ತರುವಂತೆ ಸೂಚಿಸಿತ್ತು. ರಾಜ್ಯ ಸರ್ಕಾರ ವಕ್ಫ್‌ ಆಸ್ತಿಗಳನ್ನೂ ಮಸೂದೆಯ ವ್ಯಾಪ್ತಿಗೆ ತಂದು ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು.

2014ರ ಫೆಬ್ರುವರಿ: ಮಸೂದೆ ಜಾರಿಗೆ ಆಗ್ರಹಿಸಿ ವಿಧಾನಸೌಧದ ಕಾನೂನು ಸಚಿವರ ಕಚೇರಿ ಎದುರು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಧರಣಿ.

2014ರ ಜುಲೈ: ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆಗ್ರಹಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ 39 ದಿನಗಳ ಹೋರಾಟ.

2014ರ ಸೆಪ್ಟೆಂಬರ್‌: ರಾಷ್ಟ್ರಪತಿ ‍ಪ್ರಣವ್‌ ಮುಖರ್ಜಿ ಅವರು ಮಸೂದೆಗೆ ಅಂಕಿತ ಹಾಕಿದ್ದರು.

2014ರ ಸೆಪ್ಟೆಂಬರ್: ಸಾಮಾಜಿಕ ಕಾರ್ಯಕರ್ತರ ಹೋರಾಟಕ್ಕೆ ಮಣಿದ ಸರ್ಕಾರ. ನ್ಯಾಯಾಲಯ ಸ್ಥಾಪನೆಗೆ ನಿರ್ಧಾರ

2016ರ ಮಾರ್ಚ್: ವಿಶೇಷ ನ್ಯಾಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಅಧಿಸೂಚನೆ

2016ರ ಸೆಪ್ಟೆಂಬರ್: ಬೆಂಗಳೂರಿನ ಕಂದಾಯ ಭವನದಲ್ಲಿ ನ್ಯಾಯಾಲಯ ಉದ್ಘಾಟನೆ

ಆಂಧ್ರ ನ್ಯಾಯಾಲಯ: ಫಟಾಫಟ್‌ ತೀರ್ಮಾನ
ಸರ್ಕಾರಿ ಜಮೀನುಗಳ ಒತ್ತುವರಿ ನಿಯಂತ್ರಿಸಲು ಪ್ರಯತ್ನಿಸಿದ ಮೊದಲ ರಾಜ್ಯ ಆಂಧ್ರ ಪ್ರದೇಶ. ಆಂಧ್ರ ಪ್ರದೇಶದಲ್ಲಿ 1980ರಲ್ಲೇ ಆಂಧ್ರ ಪ್ರದೇಶ ಭೂಕಬಳಿಕೆ (ನಿಷೇಧ) ಕಾಯ್ದೆ ಜಾರಿಗೆ ತರಲಾಯಿತು. ರಾಷ್ಟ್ರಪತಿಗಳ ಒಪ್ಪಿಗೆ ಪಡೆದು ಅಲ್ಲಿ ನ್ಯಾಯಾಲಯ ಸ್ಥಾಪಿಸಲಾಯಿತು. ವಿಶೇಷ ನ್ಯಾಯಾಲಯ ಹಾಗೂ ಅದರ ನ್ಯಾಯಪೀಠಗಳು ಮಾತ್ರವೇ ಅಂತಹ ಪ್ರಕರಣಗಳ ವಿಚಾರಣೆ ನಡೆಸಿ ಆರು ತಿಂಗಳ ಅವಧಿಯಲ್ಲಿ ಅಂತಿಮ ಆದೇಶ ಹೊರಡಿಸುತ್ತಿವೆ. ಇದರಿಂದಾಗಿ, ಸರ್ಕಾರಿ ಭೂಮಿಗಳ ಅತಿಕ್ರಮಣ ಗಣನೀಯ ಪ್ರಕರಣದಲ್ಲಿ ಕಡಿಮೆಯಾಗಿದೆ. ವಿಶೇಷ ನ್ಯಾಯಾಲಯದ ಆದೇಶಗಳ ವಿರುದ್ಧ ರಿಟ್‌ ಅ‍ಪೀಲುಗಳನ್ನು ಹೈಕೋರ್ಟ್‌ಗೆ ಮಾತ್ರ ಹಾಕಬಹುದು. ಇದರಿಂದಾಗಿ, ಕರ್ನಾಟಕದಲ್ಲಿ ಆಗುವಂತೆ, ಒತ್ತುವರಿದಾರರು ಅನೇಕ ನ್ಯಾಯಾಲಯಗಳಲ್ಲಿ ಲೆಕ್ಕವಿಲ್ಲದಷ್ಟು ವ್ಯಾಜ್ಯಗಳನ್ನು ಹೂಡಿ, ಒತ್ತುವರಿ ತೆರವು ಮಾಡುವ ಸರ್ಕಾರದ ತೀರ್ಮಾನಕ್ಕೆ ಅಡ್ಡಿ ಉಂಟು ಮಾಡುವುದನ್ನು ತಪ್ಪಿಸಬಹುದು.

***

ವಿಶೇಷ ನ್ಯಾಯಾಲಯಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು: ಎ.ಟಿ. ರಾಮಸ್ವಾಮಿ

ಭೂಗಳ್ಳರನ್ನು ಶಿಕ್ಷಿಸಲು ವಿಶೇಷ ನ್ಯಾಯಾಲಯವನ್ನು ಕೂಡಲೇ ಆರಂಭಿಸಬೇಕು ಎಂದು ಹೋರಾಟ ನಡೆಸಿದವರು ಎ.ಟಿ. ರಾಮಸ್ವಾಮಿ. ಈಗ ಅವರು ಅರಕಲಗೂಡು ಕ್ಷೇತ್ರದ ಜೆಡಿಎಸ್‌ ಶಾಸಕರಾಗಿದ್ದು, ಸರ್ಕಾರದ ಭಾಗವೂ ಆಗಿದ್ದಾರೆ. ಸರ್ಕಾರ ಏನು ಮಾಡಬೇಕು, ನ್ಯಾಯಾಲಯ ಹೇಗಿರಬೇಕು ಎಂಬ ಬಗ್ಗೆ ಅವರು ಮಾತನಾಡಿದ್ದಾರೆ.

* ವಿಶೇಷ ನ್ಯಾಯಾಲಯ ಸ್ಥಾಪನೆ ನೈಜ ಉದ್ದೇಶ ಈಡೇರಿದೆಯೇ?

ಎ.ಟಿ. ರಾಮಸ್ವಾಮಿ: ವಿಶೇಷ ನ್ಯಾಯಾಲಯ ಯಾವ ಸ್ವರೂಪದಲ್ಲಿ ಕಾರ್ಯನಿರ್ವಹಣೆ ಆಗಬೇಕು ಅಂದುಕೊಂಡಿದ್ದೇವೊ ಅಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಅಸಮಾಧಾನ ಇದೆ. ಹೆಚ್ಚಿನ ಸಿಬ್ಬಂದಿ ನೇಮಿಸಿ ಮತ್ತಷ್ಟು ಬಲ ಪಡಿಸಬೇಕು.

* ಬೆಂಗಳೂರಿನಲ್ಲಿ ಮಾತ್ರ ಪ್ರಕರಣಗಳ ವಿಚಾರಣೆ ನಡೆಸುತ್ತಿರುವುದರಿಂದ ದೂರದ ಊರಿನಿಂದ ಬರುವವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಅಲ್ಲವೇ?

ಎಟಿಆರ್‌: ಹೌದು. ಪ್ರತಿ ಜಿಲ್ಲೆಯಲ್ಲೂ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲು ಅವಕಾಶ ಇದೆ. ಕನಿಷ್ಠ ವಿಭಾಗವಾರು ಆರಂಭಿಸಬೇಕು. ಒಂದೇ ಕೋರ್ಟ್‌ನಲ್ಲಿ ಲಕ್ಷಾಂತರ ಪ್ರಕರಣ ಬಗೆಹರಿಸಲು ಸಾಧ್ಯವಿಲ್ಲ. ಈಗಿರುವ ನ್ಯಾಯಾಲಯಕ್ಕೂ ಶಕ್ತಿ ತುಂಬಿಲ್ಲ. ನ್ಯಾಯಾಧೀಶರು, ಅಧಿಕಾರಿಗಳು, ವಕೀಲರ ಸಂಖ್ಯೆ ಅಗತ್ಯಕ್ಕೆ ತಕ್ಕಂತೆ ಇಲ್ಲ.

* ನಿಮ್ಮ ಬೇಡಿಕೆಗಳು ಏನು?

ಎಟಿಆರ್‌:ವಾಣಿಜ್ಯ ಉದ್ದೇಶಕ್ಕೆ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಹಳ್ಳಿಗಾಡಿನಲ್ಲಿ ಜೀವನೋಪಾಯಕ್ಕೆ ಒತ್ತುವರಿ ಮಾಡಿರುವುದನ್ನು ಸಕ್ರಮಗೊಳಿಸಬೇಕು. ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿ ಮಾಡಿರುವವರು ಬಲಾಢ್ಯರು. ಇಂತಹವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಎಷ್ಟು ಫಲ ಅನುಭವಿಸಿದ್ದಾರೆ ಅಷ್ಟು ವಸೂಲು ಮಾಡಬೇಕು. ವಶಪಡಿಸಿಕೊಂಡ ಭೂಮಿಯನ್ನು ಸೂರು ಇಲ್ಲದವರಿಗೆ ವಸತಿ ಕಲ್ಪಿಸಬೇಕು. ಭೂ ಕಬಳಿಕೆ ಪ್ರಕರಣ ಯಾವುದೇ ಕೋರ್ಟ್‌ನಲ್ಲಿದ್ದರೂ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಬೇಕು. ಬಲ್ಲ ಮೂಲಗಳಿಂದ ಮಾಹಿತಿ ಬಂದರೂ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಬೇಕು.

* ಕಂದಾಯ, ಅರಣ್ಯ ಇಲಾಖೆ ಸಿಬ್ಬಂದಿ ಯಾವ ರೀತಿ ಸಹಕಾರ ನೀಡುತ್ತಿದ್ದಾರೆ?

ಎಟಿಆರ್‌:ಅಧಿಕಾರಿಗಳ ಶಾಮೀಲಿನಿಂದಲೇ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲಾಗುತ್ತಿದೆ. ಹಾಗಾಗಿ ಅಧಿಕಾರಿಗಳು ಸಹಕರಿಸುವುದಿಲ್ಲ. ಬಹುತೇಕ ಇಂತಹ ಪ್ರಕರಣಗಳಲ್ಲಿ ಸರ್ಕಾರದ ವಿರುದ್ಧವಾಗಿಯೇ ತೀರ್ಪು ಬರುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶೇಷವಾದ ತಂಡಗಳನ್ನು ರಚಿಸಬೇಕು, ವಿಶೇಷ ನ್ಯಾಯಾಲಯಕ್ಕೆ ಹೆಚ್ಚು ಅಧಿಕಾರ ನೀಡಬೇಕು. ಅತ್ಯುತ್ತಮ ಸರ್ಕಾರಿ ವಕೀಲರನ್ನು ನೇಮಕ ಮಾಡಬೇಕು.

* ಭೂಗಳ್ಳರು ವಕೀಲರನ್ನು ಕಳುಹಿಸಿ ಸರಿಪಡಿಸಿಕೊಳ್ಳುತ್ತಿದ್ದಾರೆ. ಆದರೆ, ತಲೆಮಾರುಗಳಿಂದ ಭೂಮಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರು ಪ್ರಕರಣದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇದಕ್ಕೆ ಪರಿಹಾರವೇನು?

ಎಟಿಆರ್‌: ಖಾಸಗಿದಾರರು ತಮ್ಮ ಹಿತಾಸಕ್ತಿ ಕಾಪಾಡಲು ಸಮರ್ಥ ವಕೀಲರನ್ನು ನೇಮಕ ಮಾಡಿಕೊಳ್ಳುತ್ತಾರೆ. ಆದರೆ, ಸರ್ಕಾರ ಅಷ್ಟೇ ಸಮರ್ಥ ವಕೀಲರನ್ನು ವಾದ ಮಾಡಲು ನೇಮಕ ಮಾಡುವುದಿಲ್ಲ. ಎಷ್ಟೋ ಸಂದರ್ಭದಲ್ಲಿ ಸರ್ಕಾರಿ ವಕೀಲರನ್ನು ಬಾಯಿ ಮುಚ್ಚಿಸುವುದು ಹೇಗೆ ಎಂಬುದನ್ನು ಅವರನ್ನು ಕರಗತಮಾಡಿಕೊಂಡಿದ್ದಾರೆ. ಬೇಕಾದ ದಾಖಲೆ ಹಾಜರು ಪಡಿಸುವುದಿಲ್ಲ. ಸಮರ್ಥವಾಗಿ ವಾದ ಮಂಡಿಸದೆ ಪ್ರಕರಣ ಸಾಬೀತು ಪಡಿಸುವಲ್ಲಿ ವಿಫಲರಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT