ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುತ್ತಿಗೆ ಒಪ್ಪಂದ: ಅಹವಾಲು ಆಲಿಕೆ ಅಗತ್ಯ–ಹೈಕೋರ್ಟ್‌

Published : 25 ಸೆಪ್ಟೆಂಬರ್ 2024, 16:23 IST
Last Updated : 25 ಸೆಪ್ಟೆಂಬರ್ 2024, 16:23 IST
ಫಾಲೋ ಮಾಡಿ
Comments

ಬೆಂಗಳೂರು: ‘ಗುತ್ತಿಗೆ ನೌಕರರ ಜೊತೆಗಿನ ಒಪ್ಪಂದವನ್ನು ಅಂತಿಮಗೊಳಿಸುವ ಮುನ್ನ ಸ್ವಾಭಾವಿಕ ನ್ಯಾಯ ಪರಿಕಲ್ಪನೆಯ ತತ್ವಕ್ಕೆ ಅನುಗುಣವಾಗಿ ಅವರ ಅಹವಾಲುಗಳನ್ನು ಆಲಿಸಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಎಚ್‌ಎಎಲ್‌ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್‌ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಏಕಸದಸ್ಯ ನ್ಯಾಯಪೀಠದ ಆದೇಶ ಸೂಕ್ತವಾಗಿಯೇ ಇದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಂತೆಯೇ, ‘ಕಾನೂನಿನ ಪ್ರಕಾರ ಸಮಗ್ರ ಒಪ್ಪಂದವನ್ನು ಪರಿಷ್ಕರಿಸಿ ಅದರ ಪ್ರತಿಯನ್ನು ಎಚ್‌ಎಎಲ್‌ ಗುತ್ತಿಗೆ ನೌಕರರ ಸಂಘಕ್ಕೆ ನೀಡಬೇಕು’ ಎಂದು ಮೇಲ್ಮನವಿದಾರ ಕರ್ನಾಟಕ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಕಂಪನಿಗೆ ಆದೇಶಿಸಿದೆ.

‘ಎಚ್‌ಎಎಲ್‌, ಗುತ್ತಿಗೆಗೆ ಸಂಬಂಧಿಸಿದ ಒಪ್ಪಂದದ ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕು. ಅದರಿಂದ ಬಾಧಿತರಾಗುವವರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ಆಕ್ಷೇಪಣೆ ಪರಿಗಣಿಸಿದ ನಂತರ ಅಂತಿಮ ಅಧಿಸೂಚನೆಗೆ ನಿರ್ಧಾರ ಕೈಗೊಳ್ಳಬೇಕು‘ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಪ್ರಕರಣವೇನು?: ಹಿಂದೂಸ್ಥಾನ್‌ ಏರೋನಾಟಿಕ್ಸ್‌; ಯುದ್ಧ ವಿಮಾನ, ಹೆಲಿಕಾಪ್ಟರ್‌, ರಕ್ಷಣಾ ಸಾಧನಗಳೂ ಸೇರಿದಂತೆ ವೈಮಾನಿಕ ವಲಯಕ್ಕೆ ಅಗತ್ಯವಾದ ಸಾಧನಗಳ ಉತ್ಪಾದನಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಬೃಹತ್‌ ಉದ್ದಿಮೆ. ಹೆಚ್ಚಿನ ಬೇಡಿಕೆಗಳಿದ್ದಾಗ ಪ್ರಮುಖವಲ್ಲದ ಕೆಲಸಗಳನ್ನು ನಿರ್ವಹಿಸಲು ಗುತ್ತಿಗೆ ಆಧಾರದಡಿ ಕಾರ್ಮಿಕರನ್ನು ನಿಯೋಜಿಸಿಕೊಳ್ಳುತ್ತದೆ.

ಈ ರೀತಿ ನಿಯೋಜನೆಗೊಂಡ ಕಾರ್ಮಿಕರು, ‘ಗುತ್ತಿಗೆ ಒಪ್ಪಂದವನ್ನು ಆಖೈರುಗೊಳಿಸುವ ಮುನ್ನ ನಮ್ಮೊಂದಿಗೆ ಚರ್ಚಿಸಿ ನಮ್ಮ ಅಹವಾಲು ಕೇಳಿಲ್ಲ’ ಎಂದು ಕಂಪನಿಯ ನಡೆಯನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ ಗುತ್ತಿಗೆ ಕಾರ್ಮಿಕರ ಪರ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಮೇಲ್ಮನವಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT