ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲೂ ಶಾಸಕರ ಭವನ!

ತಾರಾ ಹೊಟೇಲ್ ಮಾದರಿ * ಅಂದಾಜು ₹300 ಕೋಟಿ ವೆಚ್ಚ?
Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದ ಪಕ್ಕದಲ್ಲೇ ಶಾಸಕರ ಭವನದ ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸುವ ಬಗ್ಗೆ ವಿಧಾನಸಭೆಯ ಸಚಿವಾಲಯ ಚಿಂತನೆ ನಡೆಸಿದ್ದು, ಈ ಕುರಿತು ಸರ್ಕಾರದ ಮುಂದೆ ಪ್ರಸ್ತಾವ ಮಂಡಿಸಲಿದೆ.

ಬೆಳಗಾವಿ ಅಧಿವೇಶನದ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

‘ಅಧಿವೇಶನದ ಸಂದರ್ಭದಲ್ಲಿ ಖಾಸಗಿ ಹೊಟೇಲ್‌ಗಳಿಗೆ ಬಾಡಿಗೆ ನೀಡಲು ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ. ಸುವರ್ಣ ವಿಧಾನಸೌಧದ ಆವರಣದಲ್ಲಿ ಸಾಕಷ್ಟು ಭೂಮಿ ಲಭ್ಯತೆ ಇರುವುದರಿಂದ ಉತ್ತಮ ಗುಣಮಟ್ಟದ ವಸತಿ ವ್ಯವಸ್ಥೆ ಮಾಡಬಹುದು. ಅಧಿವೇಶನದ ವೇಳೆಯಲ್ಲಿ ಮಾತ್ರ ನಮಗೆ ಬಿಟ್ಟು ಕೊಡಬೇಕು. ಉಳಿದ ಸಮಯದಲ್ಲಿ ಕೆಎಸ್‌ಟಿಡಿಸಿ ಅಥವಾ ಖಾಸಗಿಯವರ ಮೂಲಕ ನಿರ್ವಹಣೆ ಮಾಡಬೇಕು. ತಾರಾ ಹೊಟೇಲ್‌ ಮಾದರಿಯಲ್ಲಿ ನಿರ್ಮಿಸಬೇಕು ಎಂಬ ಚಿಂತನೆ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಶಾಸಕರಿಗೆ ಮಾತ್ರ ನಿರ್ಮಿಸಬೇಕೆ? ಅಧಿಕಾರಿಗಳಿಗೂ ನಿರ್ಮಿಸಬೇಕೆ? ಮಾಧ್ಯಮ ಮತ್ತು ಇತರ ವರ್ಗದ ಸಿಬ್ಬಂದಿಗೂ ವ್ಯವಸ್ಥೆ ಮಾಡಬೇಕೆ ಎಂಬ ಬಗ್ಗೆ ಸ್ಪಷ್ಟತೆ ಬರಬೇಕು. ಶಾಸಕರು ಬೆಳಗಾವಿ ನಗರದಲ್ಲಿರುವ ಐಷಾರಾಮಿ ಹೊಟೇಲ್‌ಗಳಲ್ಲಿ ಉಳಿಯುವುದಾದರೆ ಏನು ಮಾಡಬೇಕು ಮತ್ತಿತರ ವಿಷಯಗಳ ಚರ್ಚೆ ನಡೆದಿದೆ. ಹೊಟೇಲ್‌ ಮಾದರಿಯ ವಸತಿ ಸಂಕೀರ್ಣಕ್ಕೆ ಸುಮಾರು ₹300 ಕೋಟಿ ಬೇಕಾಗಬಹುದು. ಇದನ್ನು ನಿರ್ಮಿಸಿದರೆ, ಬಾಕಿ ದಿನಗಳಲ್ಲಿ ಅಲ್ಲಿ ಎಷ್ಟು ಮಂದಿ ಉಳಿದುಕೊಳ್ಳಲು ಬರುತ್ತಾರೆ, ಅಲ್ಲಿ ವ್ಯವಹಾರ ಹೇಗೆ ನಡೆಯುತ್ತದೆ ಎಂಬ ಸ್ಪಷ್ಟತೆ ಬೇಕಿದೆ’ ಎಂದರು.

ಅಧಿವೇಶನದ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. 2021ರಲ್ಲಿ ₹17 ಕೋಟಿ ಆಗಿದ್ದರೆ, 2022ರಲ್ಲಿ ₹37 ಕೋಟಿಗೆ ಏರಿಕೆ ಆಗಿತ್ತು. ಕಳೆದ ವರ್ಷ ಶಾಸಕರು,ಅಧಿಕಾರಿಗಳು, ಮಾಧ್ಯಮ ಮತ್ತು ಇತರೆ ಸಿಬ್ಬಂದಿಗೆ ಒಟ್ಟು 2,000 ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಬೆಳಗಾವಿಯಲ್ಲಿರುವ 80 ಹೊಟೇಲ್‌ಗಳ ಪೈಕಿ 67 ಹೊಟೇಲ್‌ಗಳು ಐಷಾರಾಮಿ ವ್ಯವಸ್ಥೆಯನ್ನು ಹೊಂದಿವೆ. ಕಳೆದ ವರ್ಷ ಈ ಹೊಟೇಲ್‌ಗಳ ಬಿಲ್‌ ₹6 ಕೋಟಿ ಆಗಿತ್ತು ಎಂದು ಸಚಿವಾಲಯದ ಮೂಲಗಳು ಹೇಳಿವೆ.

ಬಳಕೆ ಕಡಿಮೆ; ಖರ್ಚು ಜಾಸ್ತಿ

ಜೆಡಿಎಸ್‌ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ (2007) ತೀರ್ಮಾನಿಸಲಾಯಿತು. ಆಗ ಮುಖ್ಯಮಂತ್ರಿ ಆಗಿದ್ದ ಎಚ್‌.ಡಿ.ಕುಮಾರಸ್ವಾಮಿ ವ್ಯಾಕ್ಸಿನ್‌ ಡಿಪೋ ಬಳಿ ಇದಕ್ಕಾಗಿ ಶಂಕುಸ್ಥಾಪನೆ ನೆರವೇರಿಸಿದರು. 2009ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸ್ಥಳ ಬದಲಿಸಿ, ಹಲಗಾ ಬಳಿ ಮತ್ತೊಮ್ಮೆ ಶಂಕುಸ್ಥಾಪನೆ ನೆರವೇರಿಸಿದರು.

ನಾಲ್ಕು ಎಕರೆ ಪ್ರದೇಶದಲ್ಲಿ 4+1 ಮಾದರಿಯ ಬಹು ಮಹಡಿಯ ಕಟ್ಟಡ ನಿರ್ಮಾಣಕ್ಕೆ ಆದ ವೆಚ್ಚ ₹438 ಕೋಟಿ. ಒಂದೆರಡು ಸರ್ಕಾರಿ ಕಚೇರಿ ಮತ್ತು ಬ್ಯಾಂಕ್‌ ಶಾಖೆಯೊಂದನ್ನು ಹೊರತುಪಡಿಸಿ, ಉಳಿದ ಎಲ್ಲ ಕೊಠಡಿಗಳು ಅಧಿವೇಶನದ ಸಂದರ್ಭದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ. ಉಳಿದಂತೆ ವರ್ಷವಿಡೀ ಮುಚ್ಚಿರುತ್ತವೆ. ಅಧಿವೇಶನದ ದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ಇದರ ಸ್ವಚ್ಛತೆ ಮತ್ತು ನಿರ್ವಹಣೆಗೆ ವರ್ಷಕ್ಕೆ ₹5 ಕೋಟಿಯಿಂದ ₹7 ಕೋಟಿ ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT