ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಮ ಕಾರಂತ ಬಡಾವಣೆ ಶೀಘ್ರ ಅಭಿವೃದ್ಧಿಯಾಗಲಿ: ಹೈಕೋರ್ಟ್‌ ಆಶಯ

Published 29 ಜನವರಿ 2024, 16:07 IST
Last Updated 29 ಜನವರಿ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಯಾಗಬೇಕು ಮತ್ತು ಶ್ರೀಸಾಮಾನ್ಯರು ತಮ್ಮ ಜೀವಮಾನದಲ್ಲೊಂದು ಸ್ವಂತ ಸೂರು ಕಟ್ಟಿಕೊಳ್ಳಬೇಕು ಎಂದು ಕಾಣುವ ಕನಸು ಸಾಕಾರವಾಗಬೇಕು ಎಂಬುದೇ ನಮ್ಮ ಉದ್ದೇಶ. ಈ ದಿಸೆಯಲ್ಲಿ ನೀವು ರೂಪಿಸಿಕೊಂಡಿರುವ ಅಭಿವೃದ್ಧಿ ವಿಧಾನಗಳೇನು ಎಂಬುದನ್ನು ತಿಳಿಸಿ’ ಎಂದು ಹೈಕೋರ್ಟ್‌, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೂಚಿಸಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ ರೂಪುಗೊಂಡಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಮತ್ತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ವಿಶೇಷ ನ್ಯಾಯಪೀಠ ಈ ಕುರಿತ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಅವರು ಬಿಡಿಎ ಪರ ಸುದೀರ್ಘ ವಾದ ಮಂಡಿಸಿ, ಬಡಾವಣೆ ಅಭಿವೃದ್ಧಿ ದಿಸೆಯಲ್ಲಿ ಎದುರಾಗಿರುವ ಅಡೆತಡೆಗಳು ಮತ್ತು ಇದರ ಪರಿಹಾರಾರ್ಥವಾಗಿ ಬಿಡಿಎ ಕೈಗೊಂಡಿರುವ ಕ್ರಮಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು.

ವಿಚಾರಣೆ ಆಲಿಸಿದ ನ್ಯಾಯಪೀಠ, ‘ಆವಲಹಳ್ಳಿ ವ್ಯಾಪ್ತಿಯಲ್ಲಿನ ವಿವಿಧ ಸರ್ವೆ ನಂಬರ್‌ಗಳಲ್ಲಿರುವ ಒಟ್ಟು 29 ಗುಂಟೆಗೂ ಹೆಚ್ಚಿನ ಜಮೀನಿನಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ರಚನೆಗಳಿಗೆ ಅಧಿಸೂಚನೆ ಅನ್ವಯ ಸ್ವಾಧೀನ ಪ್ರಕ್ರಿಯೆ ಅನ್ವಯವಾಗುವುದಿಲ್ಲ’ ಎಂದು ಆದೇಶಿಸಿತು.

ಇದೇ ವೇಳೆ ಬಡಾವಣೆ ನಿರ್ಮಾಣ ಕುರಿತ ದೂರುಗಳನ್ನು ಪರಿಹರಿಸಲು ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತ್ರಿಸದಸ್ಯ ಸಮಿತಿ ರದ್ದುಪಡಿಸಿ ಎಲ್ಲ ಅಹವಾಲುಗಳನ್ನು ತಾನೇ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಸ್ಪಷ್ಟಪಡಿಸಿತು.

ಸಮಿತಿಯ ವಶದಲ್ಲಿದ್ದ ಸಂಪುಟಗಟ್ಟಲೆ ದಾಖಲೆಗಳನ್ನು ಗಣಕೀಕೃತಗೊಳಿಸಿ ಅವುಗಳನ್ನು ಹೈಕೋರ್ಟ್‌ ಕಂಪ್ಯೂಟರ್‌ ವಿಭಾಗಕ್ಕೆ ವರ್ಗಾಯಿಸುವ ಕುರಿತು ಕ್ರಮ ಕೈಗೊಳ್ಳುವಂತೆ ನ್ಯಾಯಾಂಗ ರಿಜಿಸ್ಟ್ರಾರ್‌ ಅವರಿಗೆ ಸೂಚಿಸಿ ವಿಚಾರಣೆಯನ್ನು ಫೆಬ್ರುವರಿ 7ಕ್ಕೆ ಮುಂದೂಡಿತು.

ಪುನರುಚ್ಚಾರ: ಕಳೆದ ವಿಚಾರಣೆ ವೇಳೆಯಲ್ಲಿ, ‘ಸಮಿತಿಗಾಗಿ ಈವರೆಗೆ ₹ 18 ಕೋಟಿ ವ್ಯಯ ಮಾಡಲಾಗಿದೆ. ಸಮಿತಿಗೆ ಮಾಡಲಾಗಿರುವ ಈ ವೆಚ್ಚ ಸಾರ್ವಜನಿಕ ಹಣವಾಗಿದೆ. ಹೀಗಾಗಿ, ಸಮಿತಿ ಅಧ್ಯಕ್ಷರೇ ಹೇಳಿರುವಂತೆ ಸಮಿತಿಯನ್ನು ರದ್ದುಗೊಳಿಸಲಾಗುವುದು’ ಎಂದು ತಿಳಿಸಿದ್ದನ್ನು ನ್ಯಾಯಪೀಠವು ಪುನರುಚ್ಚರಿಸಿತು.

ಪ್ರಕರಣವೇನು?: ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಂತೆ 2,700 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬಿಡಿಎ ನಿರ್ಮಿಸುತ್ತಿರುವ ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ನಿಟ್ಟಿನಲ್ಲಿ ಭೂ ಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಈ ಕುರಿತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಕಾನೂನು ಹೋರಾಟ ನಡೆದು ಎಲ್ಲ ಹಂತಗಳಲ್ಲಿನ ನ್ಯಾಯಾಲಯಗಳು ಸರ್ಕಾರದ ಭೂ ಸ್ವಾಧೀನ ಪ್ರಕ್ರಿಯೆ ಕ್ರಮವನ್ನು ಎತ್ತಿ ಹಿಡಿದಿದ್ದವು.

ಆದರೆ, ಬಡಾವಣೆ ಅಧಿಸೂಚನೆ ಪ್ರಕಟವಾಗುವುದಕ್ಕೂ ಮುನ್ನ ಆ ಪ್ರದೇಶದಲ್ಲಿನ ಜಮೀನು ಮಾಲೀಕರು ಅಭಿವೃದ್ಧಿಪಡಿಸಿದ್ದ ಲೇ ಔಟ್‌ಗಳು ಮತ್ತು ಉದ್ದೇಶಿತ ಬಡಾವಣೆ ವ್ಯಾಪ್ತಿಯಲ್ಲಿನ ಕಂದಾಯ ನಿವೇಶನಗಳು ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿಕೊಂಡ ಮನೆಗಳ ಸಕ್ರಮೀಕರಣ, ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೆಲವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿಗಳ ಆಧಾರದಲ್ಲಿ ಸುಪ್ರೀಂ ಕೋರ್ಟ್ 2020 ಡಿಸೆಂಬರ್ 3ರಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಿತ್ತು. ಈ ಸಮಿತಿಯು ನ್ಯಾಯಾಲಯದ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಸೂಚಿಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಸಮಿತಿಯ ಅವಧಿ 2023ರ ಡಿಸೆಂಬರ್ 31ಕ್ಕೆ ಮುಕ್ತಾಯವಾಗಿತ್ತು.

ಇದೇ ವೇಳೆ ಸಮಿತಿಯ ಅಧ್ಯಕ್ಷರು, ‘ಸಮಿತಿಗೆ ವಹಿಸಲಾಗಿದ್ದ ಕೆಲಸ ಪೂರ್ಣಗೊಂಡಿರುವ ಕಾರಣ ಸಮಿತಿಯನ್ನು ವಿಸರ್ಜಿಸಬಹುದು’ ಎಂದು ತಿಳಿಸಿದ್ದರು. ಆದರೆ, ಸಮಿತಿಯ ಇತರೆ ಸದಸ್ಯರು, ‘ಬಡಾವಣೆ ನಿರ್ಮಾಣ ಸಂಬಂಧ ಇನ್ನೂ ಇರುವ ಹಲವು ದೂರುಗಳನ್ನು ಪರಿಹರಿಸಲು ಸಮಿತಿಯ ಅಧಿಕಾರಾವಧಿಯನ್ನು ಪುನಃ ಆರು ತಿಂಗಳು ವಿಸ್ತರಿಸಬೇಕು’ ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಕೋರಿಕೆಯ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಹೈಕೋರ್ಟ್‌ಗೆ ವರ್ಗಾಯಿಸಿ, ‘ಸಮಿತಿಯ ಮುಂದುವರಿಕೆ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ನೀವೇ ತೀರ್ಮಾನ ಕೈಗೊಳ್ಳಿ’ ಎಂದು ನಿರ್ದೇಶಿಸಿತ್ತು. ಈ ನಿರ್ದೇಶನದ ಅನುಸಾರ ಈ ವಿಶೇಷ ವಿಭಾಗೀಯ ಪೀಠವನ್ನು ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT