ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಮರು ಗಣತಿಗೆ ಪಟ್ಟು: ಸಚಿವ ಖಂಡ್ರೆ, ಶಾಸಕ ಶಾಮನೂರು ನೇತೃತ್ವದಲ್ಲಿ ಸಭೆ

Published 9 ನವೆಂಬರ್ 2023, 16:20 IST
Last Updated 9 ನವೆಂಬರ್ 2023, 16:20 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಗಣತಿ) ಸರ್ಕಾರ ಕೂಡಲೇ ಸ್ವೀಕರಿಸಬೇಕು ಎಂಬ ಕೂಗೆದ್ದಿರುವ ಬೆನ್ನಲ್ಲೇ, ವೀರಶೈವ–ಲಿಂಗಾಯತರು ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಗುರುವಾರ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಶಾಸಕರೂ ಆಗಿರುವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಅರಣ್ಯ ಸಚಿವರೂ ಆಗಿರುವ ಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ನೇತೃತ್ವದಲ್ಲಿ ಈ ಸಭೆ ನಡೆಯಿತು.

ವೈಜ್ಞಾನಿಕವಾಗಿ ಮತ್ತೊಮ್ಮೆ ಜಾತಿ ಗಣತಿ ನಡೆಸಬೇಕು. ಸಂಗ್ರಹಿಸಿರುವ ಮಾಹಿತಿಯ ಖಚಿತತೆ ದೃಢಪಡಿಸಲು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ಪರಿಶೀಲಿಸಬೇಕು ಎಂದೂ ಮಹಾಸಭಾ ಆಗ್ರಹಿಸಿದೆ.

ಜಾತಿ ಗಣತಿ ವರದಿ ಬಗ್ಗೆ ಚರ್ಚಿಸಲು ಒಕ್ಕಲಿಗರ ಸಂಘ ಈಚೆಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ, ವರದಿಯನ್ನು ವಿರೋಧಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಸಮುದಾಯ ಪ್ರತಿನಿಧಿಸುವ ಶಾಸಕರು ಭಾಗವಹಿಸಿದ್ದರು. ಒಕ್ಕಲಿಗರ ವಿರೋಧ ಬೆನ್ನಿಗೆ, ರಾಜಕೀಯವಾಗಿ ಪ್ರಬಲವಾಗಿರುವ ಮತ್ತೊಂದು ಸಮುದಾಯ ಕೂಡ ವಿರೋಧ ವ್ಯಕ್ತಪಡಿಸಿದಂತಾಗಿದೆ.

ವರದಿಗೆ ವಿರೋಧ: ಶಾಮನೂರು

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಹಲವರ ಮನೆಗಳಿಗೆ ಭೇಟಿ ನೀಡದೇ ವರದಿ ಸಿದ್ಧಪಡಿಸಲಾಗಿದೆ ಎಂಬ ದೂರುಗಳಿವೆ. ಈ ಸಮೀಕ್ಷೆಯಲ್ಲಿ ವೀರಶೈವ–ಲಿಂಗಾಯತ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ಮಾಹಿತಿ ಇದೆ. ಅಪೂರ್ಣ ಮಾಹಿತಿಯನ್ನು ಒಳಗೊಂಡ ಸಮೀಕ್ಷೆಯನ್ನು ಸ್ವೀಕರಿಸಿದರೆ, ಸಮಾಜಕ್ಕೆ ದೊಡ್ಡ ಮಟ್ಟದ ನಷ್ಟವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದರು.

‘ಈಗ ಸಿದ್ಧಪಡಿಸಿರುವ ಸಮೀಕ್ಷೆಯ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪದೋಷಗಳಿವೆ. ತಯಾರಾಗಿರುವ ವರದಿಯು ಎಂಟು ವರ್ಷಗಳಷ್ಟು ಹಳೆಯದಾಗಿದ್ದು, ನ್ಯೂನತೆಗಳಿಂದ ಕೂಡಿದೆ. ಹೀಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಬೇಕು. ಸರ್ಕಾರ ಮತ್ತೊಮ್ಮೆ ಈ ಬಗ್ಗೆ ವಿವೇಚನಾಯುತವಾಗಿದೆ ಪರಾಮರ್ಶಿಸಿ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಶಾಮನೂರು ಒತ್ತಾಯಿಸಿದರು.

‘ವೀರಶೈವ–ಲಿಂಗಾಯತ ಸಮುದಾಯವು ಸಕಲ ಜಾತಿ–ಜನಾಂಗಗಳಿಗೆ ಲೇಸನ್ನೇ ಬಯಸುವ ಸಮುದಾಯವಾಗಿದೆ. ನಾವು ಜಾತಿ ಗಣತಿಯ ವಿರೋಧಿಗಳಲ್ಲ’ ಎಂದು ಅವರು ಹೇಳಿದರು.

ಆರ್ಥಿಕ ಮಾಹಿತಿ ಆತಂಕ: ‘ಸರ್ಕಾರಿ ನೌಕರರನ್ನು ಬಿಟ್ಟರೆ, ಉಳಿದವರು ತಮ್ಮ ಆರ್ಥಿಕ ಸ್ಥಿತಿ–ಗತಿಯ ಮಾಹಿತಿಯನ್ನು ಹಂಚಿಕೊಂಡಿರುವುದಿಲ್ಲ. ವೀರಶೈವ–ಲಿಂಗಾಯತರು ಆರ್ಥಿಕವಾಗಿ ಪ್ರಬಲರಾಗಿದ್ದಾ‌ರೆ ಎಂಬ ಮಾಹಿತಿ ವರದಿಯಲ್ಲಿ ನಮೂದಾಗಿದ್ದರೆ, ಹಿಂದುಳಿದ ವರ್ಗಗಳ ಮೀಸಲಾತಿಯ ಪಟ್ಟಿಯಿಂದ, ಮೀಸಲಾತಿಯ ಕೆಲವು ಸೌಲಭ್ಯಗಳಿಂದ ಸಮುದಾಯ ವಂಚಿತವಾಗಲಿದೆ. ಇದಕ್ಕಾಗಿ, ಮತ್ತೊಮ್ಮೆ ಗಣತಿ ಮಾಡಬೇಕು. ಮಾಹಿತಿಯನ್ನು ಸತ್ಯಾಸತ್ಯತೆ ದೃಢಪಡಿಸಲು ಕಂದಾಯ, ಸಾರಿಗೆ ಇಲಾಖೆಗಳ ನೆರವನ್ನು ಪಡೆಯಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲು ಮಹಾಸಭಾ ನಿರ್ಣಯಿಸಿದೆ’ ಎಂದು ಮೂಲಗಳು ಹೇಳಿವೆ.

ತಿಂಗಳಾಂತ್ಯಕ್ಕೆ ಸಂಸದರು ಶಾಸಕರ ಸಭೆ?

ವಿರೋಧದ ಮಧ್ಯೆಯೂ ಸರ್ಕಾರ ವರದಿಯನ್ನು ಸ್ವೀಕರಿಸಿದರೆ ಮುಂದಿನ ಹೋರಾಟದ ದಾರಿ ಏನಾಗಿರಬೇಕು ಎಂಬ ಬಗ್ಗೆ ಚರ್ಚಿಸಲು ಇದೇ ತಿಂಗಳ ಕೊನೆಯ ವಾರದಲ್ಲಿ ಸಮುದಾಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಸಭೆ ಕರೆಯಲು ಮಹಾಸಭಾ ತೀರ್ಮಾನಿಸಿದೆ. ‘ಈ ಸಭೆಗೆ ವೀರಶೈವ–ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಸಂಸದರು ಶಾಸಕರನ್ನು ಆಮಂತ್ರಿಸಲಾಗುವುದು. ಅಪೂರ್ಣ ವರದಿಯನ್ನು ಅನುಷ್ಠಾನ ಮಾಡಲು ಮುಂದಾದರೆ ಸದನದ ಒಳಗೆ–ಹೊರಗೆ ಹೋರಾಟ ಮಾಡಬೇಕಾದ ಅನಿವಾರ್ಯ ಒದಗಬಹುದು. ಈ ವಿಷಯದಲ್ಲಿ ರಾಜಕೀಯ ಹೊರತಾದ ಒಗ್ಗಟ್ಟಿನ ತೀರ್ಮಾನ ಕೈಗೊಳ್ಳಬೇಕಾಗಿದ್ದು ಇದಕ್ಕಾಗಿ ಪ್ರತ್ಯೇಕ ಸಭೆ ಕರೆದು ಸಮಾಲೋಚನೆ ನಡೆಸಲು ನಿರ್ಧರಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ಕಾಂತರಾಜ ಸಮೀಕ್ಷೆ ಜಾತಿ ಗಣತಿಯಲ್ಲ: ತಂಗಡಗಿ ಎಚ್‌.

ಕಾಂತರಾಜ ವರದಿ ಜಾತಿ ಗಣತಿ ಅಲ್ಲವೇ ಅಲ್ಲ. ಇದು ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಸರಿಪಡಿಸುವ ಹಿನ್ನೆಲೆಯಲ್ಲಿ ತಯಾರಾದ ವರದಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್‌ ತಂಗಡಗಿ ಹೇಳಿದರು.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಕಾಂತರಾಜ ವರದಿಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗುವುದಿಲ್ಲ. ಈ ವರದಿಯನ್ನು ಜಾತಿ ಗಣತಿ ವರದಿ ಎಂದು ಕರೆಯುವುದು ಸರಿಯಲ್ಲ ಎಂದರು.

'ಕಾಂತರಾಜ ಅವರ ವರದಿಯಿಂದ ಪ್ರತಿಯೊಂದು ಸಮಾಜದ ಜನಸಂಖ್ಯೆ ಶಿಕ್ಷಣ ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಾಜದ ಅಂಕಿ– ಅಂಶವನ್ನು ಸ್ಪಷ್ಟವಾಗಿ ತಿಳಿಯಬಹುದು. ಈ ವರದಿ ವಿರೋಧಿಸಿ ಕೆಲವು ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರದಿ ಇನ್ನು ಸರ್ಕಾರಕ್ಕೆ ಸಲ್ಲಿಕೆಯೇ ಆಗಿಲ್ಲ. ವರದಿ ಸ್ವೀಕಾರ ಮಾಡಿದರೆ ಅದನ್ನು ಪಡೆದು ಅಧ್ಯಯನ ಮಾಡುತ್ತೇನೆ. ವರದಿ ವಿರೋಧ ಮಾಡುತ್ತಿರುವವರೂ ವರದಿ ನೋಡಿದ್ದರೆ ನಮಗೆ ತಿಳಿಸಲಿ. ನಿರ್ಮಲಾನಂದನಾಥ ಸ್ವಾಮೀಜಿ ಅವರಲ್ಲೂ ಮನವಿ ಮಾಡುತ್ತೇನೆ' ಎಂದರು.

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ವರದಿ ಸಿದ್ಧವಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ವರದಿ ಸ್ವೀಕಾರವಾಗಿಲ್ಲ. ಇದರಲ್ಲಿ ರಾಜಕೀಯ ಹಿತಾಸಕ್ತಿ ಅಡಗಿಲ್ಲ ಎಂದು ತಂಗಡಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT