ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲಸೌಕರ್ಯಗಳಿಲ್ಲದ ನರ್ಸಿಂಗ್ ಕಾಲೇಜುಗಳಿಗೆ ಬೀಗ ಜಡಿಯಿರಿ: ಸಚಿವ ಡಾ. ಶರಣಪ್ರಕಾಶ್

ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ ಸೂಚನೆ
Published 13 ಜೂನ್ 2024, 16:10 IST
Last Updated 13 ಜೂನ್ 2024, 16:10 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರದಿಂದ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಲು ವಿಫಲವಾಗಿರುವ ನರ್ಸಿಂಗ್ ಕಾಲೇಜುಗಳಿಗೆ ಬೀಗ ಜಡಿಯಬೇಕು’ ಎಂದು ಇಲಾಖೆಯ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಲಾಖೆ ಅಧಿಕಾರಿಗಳು ಮತ್ತು ನರ್ಸಿಂಗ್ ಕಾಲೇಜುಗಳ ಪದಾಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದ ಅವರು, ‘ಹಲವು ನರ್ಸಿಂಗ್ ಕಾಲೇಜುಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸದಿರುವ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ, ತಪಾಸಣೆ ನಡೆಸಿ ಅಂತಹ ಕಾಲೇಜುಗಳಿಗೆ ಬೀಗ ಜಡಿಯಿರಿ’ ಎಂದು ಇಲಾಖೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಅವರಿಗೆ ನಿದೇರ್ಶನ ನೀಡಿದರು.

‘ಖಾಸಗಿ ಕಾಲೇಜು ಆಡಳಿತ ಮಂಡಳಿಯವರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಮಾನವೀಯ ದೃಷ್ಟಿಯಿಂದ ಈವರೆಗೆ ಸರ್ಕಾರ ನಡೆದುಕೊಂಡಿದೆ. ಇಷ್ಟಾದರೂ ಬುದ್ದಿ ಬಂದಿಲ್ಲವೆಂದರೆ ಹೇಗೆ? ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳುವ ವೇಳೆ ಆಶ್ವಾಸನೆಗಳನ್ನು ನೀಡಿ ಹೆಚ್ಚಿನ ಶುಲ್ಕ ಪಡೆಯುತ್ತೀರಿ. ಕನಿಷ್ಠ ಪಕ್ಷ ಅಗತ್ಯ ಸೌಲಭ್ಯಗಳನ್ನು ಒದಗಿಸದಿದ್ದರೆ ಹೇಗೆ?’ ಎಂದು ಆಡಳಿತ ಮಂಡಳಿಯವರ ವರ್ತನೆಗೆ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

‘ಕೆಲವು ಕಾಲೇಜುಗಳು ಹೆಚ್ಚಿನ ಪ್ರಮಾಣದಲ್ಲಿ ಬೋಧಕ, ಬೋಧಕೇತರ, ಪ್ರಯೋಗಾಲಯ ಸಿಬ್ಬಂದಿ, ಗ್ರಂಥಾಲಯ, ಶುಚಿತ್ವ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಇಷ್ಟು ಸಮಸ್ಯೆಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಯಾವ ಶಿಕ್ಷಣ ಕೊಡುತ್ತೀರಿ’ ಎಂದೂ ತರಾಟೆಗೆ ತೆಗೆದುಕೊಂಡರು.

‘ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ, ವಿದ್ಯಾರ್ಥಿಗಳ ಪ್ರವೇಶ‌ ಮಾಡಿಕೊಳ್ಳುವ ಮೊದಲು ಅಧಿಕಾರಿಗಳು ಪ್ರತಿಯೊಂದು ಕಾಲೇಜಿಗೆ ಭೇಟಿ ನೀಡಬೇಕು. ಸರ್ಕಾರದ ಮಾನದಂಡ ಪಾಲಿಸದ ಕಾಲೇಜುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚನೆ ನೀಡಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಸಚಿವ ಪಿ.ಆರ್. ಶಿವಪ್ರಸಾದ್ ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT