ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌತಿ ಪಹಣಿಗೆ ಲೋಕ್ ಅದಾಲತ್: ಸಚಿವ ಕೃಷ್ಣ ಬೈರೇಗೌಡ

Published 12 ಮಾರ್ಚ್ 2024, 15:59 IST
Last Updated 12 ಮಾರ್ಚ್ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ಮೃತರ ಹೆಸರಿನಲ್ಲೇ (ಪೌತಿ) ಉಳಿದಿರುವ ಪಹಣಿಗಳನ್ನು (ಆರ್‌ಟಿಸಿ) ವಾರಸುದಾರರ ಹೆಸರಿಗೆ ವರ್ಗಾಯಿಸಲು ಶೀಘ್ರವೇ ಲೋಕ್‌ ಅದಾಲತ್ ಹಮ್ಮಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನೋಂದಣಿ ಸಮಯದಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ನೇರವಾಗಿ ತಲುಪಿಸಲು ಪಹಣಿಗಳೊಂದಿಗೆ ಆಧಾರ್‌ ಜೋಡಣೆ ಕಾರ್ಯ (ನನ್ನ ಆಸ್ತಿ ಅಭಿಯಾನ) ಆರಂಭಿಸಲಾಗಿದೆ. ಪ್ರಾಯೋಗಿಕವಾಗಿ ಸಂಗ್ರಹಿಸಿದ 19 ಲಕ್ಷ ಪಹಣಿಗಳಲ್ಲಿ 6 ಲಕ್ಷ ಪಹಣಿಗಳು ಮೃತರ ಹೆಸರಿನಲ್ಲೇ ಇರುವುದು ಗಮನಕ್ಕೆ ಬಂದಿದೆ. ರಾಜ್ಯದಲ್ಲಿನ 1.87 ಕೋಟಿ ಪಹಣಿ ಸಂಗ್ರಹಿಸಿದರೆ ಪೌತಿ ಪಹಣಿಗಳ ಸಂಖ್ಯೆಯ ನಿಖರ ಮಾಹಿತಿ ದೊರಕುತ್ತದೆ. ಮೃತರ ಹೆಸರಿನಲ್ಲಿ ಪಹಣಿ ಇದ್ದರೆ ದುರ್ಬಳಕೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಲೋಕ್‌ ಅದಾಲತ್‌ ಮೂಲಕ ಇಂತಹ ಪಹಣಿಗಳನ್ನು ಅದರ ವಾರಸುದಾರರಿಗೆ ವರ್ಗಾಯಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ವಿವರ ನೀಡಿದರು.

ಆಸ್ತಿಗಳ ನೋಂದಣಿ ಸಮಯದಲ್ಲೂ ಆಧಾರ್‌ ಕಡ್ಡಾಯ ಮಾಡಲಾಗಿದೆ. ನೋಂದಣಿಯಾದ ತಕ್ಷಣವೇ ಆ ಆಸ್ತಿಗೆ ಆಧಾರ್‌ ಜೋಡಣೆಯಾಗಲಿದೆ. ಇದರಿಂದ ಆಸ್ತಿಗಳ ಕಬಳಿಕೆ, ವಂಚನೆ ತಪ್ಪಲಿದೆ. ಲೋಕಸಭಾ ಚುನಾವಣೆ ಘೋಷಣೆಯಾದರೂ ಆಧಾರ್ ಜೋಡಣೆ ಕಾರ್ಯ ನಡೆಯಲಿದೆ. ಗ್ರಾಮಾಧಿಕಾರಿಗಳು ಮನೆಮನೆಗೆ ತೆರಳಿ ಪಹಣಿ ಮತ್ತು ಆಧಾರ್ ಜೋಡಣೆ ಕಾರ್ಯ ಮಾಡುತ್ತಾರೆ. ಸಾರ್ವಜನಿಕರು ಸಮೀಪದ ಕಂದಾಯ ಕಚೇರಿಗೆ ತೆರಳಿ ಜೋಡಣೆ ಮಾಡಿಸಬಹುದು ಎಂದು ಹೇಳಿದರು.

ಪಹಣಿ ವಿವರ ಸ್ವಯಂಚಾಲಿತ

ನಮೂದು ಪಹಣಿಗಳಲ್ಲಿ ಆಗಾಗ ನಮೂದಾಗುವ ವಿವರಗಳಿಗೆ ಇನ್ನು ಮುಂದೆ ಸಂಬಂಧಿಸಿದ ಅಧಿಕಾರಿಗಳ ದೃಢೀಕರಣ ಅಗತ್ಯವಿಲ್ಲ. ಬ್ಯಾಂಕ್ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ದಾಖಲೆ ಸಿದ್ಧವಾಗುತ್ತಿದ್ದಂತೆಯೇ ಪಹಣಿಯಲ್ಲಿ ತನ್ನಿಂತಾನೇ ನಮೂದು ಕಾಣಿಸಿಕೊಳ್ಳಲಿದೆ. ಬ್ಯಾಂಕ್‌ ಸಾಲ ಸಾಲ ತೀರುವಳಿ ಆಸ್ತಿ ವಿಭಾಗ ಅಡಮಾನ ಕಂದಾಯ ನ್ಯಾಯಾಲಯದ ಆದೇಶ ಮತ್ತಿತರ ಪ್ರಕ್ರಿಯೆಗಳು ನಡೆದಾಗ ಸಣ್ಣಪುಟ್ಟ ಬದಲಾವಣೆಗಳಾದಾಗ ಅದರ ವಿವರಗಳನ್ನು ಪಹಣಿಯಲ್ಲಿ ದಾಖಲಿಸಲಾಗುತ್ತದೆ. ಹೀಗೆ ದಾಖಲಾಗುವ ಮೊದಲು ಕಂದಾಯ ನಿರೀಕ್ಷಕರ ದೃಢೀಕರಣ ಬೇಕಿತ್ತು. ಇದು ವಿಳಂಬ ಹಾಗೂ ಅನಗತ್ಯ ಅಲೆದಾಟಕ್ಕೆ ದಾರಿಯಾಗಿತ್ತು. ಸ್ವಯಂಚಾಲಿತ ವಿಧಾನದಲ್ಲಿ ಯಾರ ದೃಢೀಕರಣವೂ ಇಲ್ಲದೆ ಸಹಜವಾಗಿ ವಿವರಗಳು ದಾಖಲಾಗಲಿವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಆರು ತಿಂಗಳಲ್ಲಿ 14.21 ಲಕ್ಷ ವಿವರಗಳು ನಮೂದಾಗಿವೆ. ಅವುಗಳಲ್ಲಿ ಶೇ 72ರಷ್ಟು ಯಾವುದೇ ಸಮಸ್ಯೆ ಇಲ್ಲದ ವಿವರಗಳಾಗಿವೆ. ಆಸ್ತಿ ಮಾರಾಟ ದಾನಪತ್ರ ಮರಣೋತ್ತರ ಪತ್ರ ಕೋರ್ಟ್‌ ಆದೇಶಗಳು ಮಾರಾಟ ಒಪ್ಪಂದ ಮತ್ತಿತರ ವಿಷಯಗಳಲ್ಲಿ ಜಮೀನಿನ ಮೂಲ ಮಾಲೀಕರಿಗೆ ಆಗುವ ಅನ್ಯಾಯ ಮೋಸ ತಪ್ಪಿಸಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಇಂತಹ ಶೇ 28 ಅಂಶಗಳನ್ನು ಸ್ವಯಂಚಾಲಿತ ವಿಧಾನದಿಂದ ಹೊರಗಿಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT